September 12, 2026
Saturday, September 12, 2026
spot_img

ಅರಣ್ಯ ಸಚಿವನಾಗಬೇಕೆಂಬ ಆಸೆ ಇತ್ತು, ಆದರೆ ಸಿಕ್ಕಿದ್ದು ಕೃಷಿ ಇಲಾಖೆ: ಹಳೆಯ ದಿನಗಳನ್ನು ಸ್ಮರಿಸಿದ ಸಿಎಂ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ರಾಜಕೀಯದಲ್ಲಿ ಯಾರಿಗೆ ಯಾವ ಇಲಾಖೆ ಸಿಗುತ್ತದೆ, ಯಾವಾಗ ಯಾವ ತಿರುವು ಸಿಗುತ್ತದೆ ಎಂದು ಊಹಿಸುವುದು ಕಷ್ಟ. ಇದಕ್ಕೆ ಸಾಕ್ಷಿ ಎಂಬಂತೆ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ತಮ್ಮ ರಾಜಕೀಯ ಜೀವನದ ಹಳೆಯ ದಿನಗಳನ್ನು ನೆನಪಿಸಿಕೊಂಡಿದ್ದಾರೆ.

ಬೆಂಗಳೂರಿನಲ್ಲಿ ನಡೆದ ರಾಷ್ಟ್ರೀಯ ಅರಣ್ಯ ಹುತಾತ್ಮರ ದಿನಾಚರಣೆಯಲ್ಲಿ ಭಾಗವಹಿಸಿದ್ದ ಅವರು, ನನಗೆ ಪ್ರಕೃತಿ ಮತ್ತು ಪ್ರಾಣಿಗಳೆಂದರೆ ತುಂಬಾ ಇಷ್ಟ. ಆ ಕಾರಣಕ್ಕೇ ಹಿಂದೆ ಎಸ್.ಎಂ. ಕೃಷ್ಣ ಅವರ ಸಂಪುಟದಲ್ಲಿ ನಾನು ಅರಣ್ಯ ಸಚಿವನಾಗಬೇಕು ಅಂದುಕೊಂಡಿದ್ದೆ. ಆದರೆ ಆಗ ನನಗೆ ಕೃಷಿ ಇಲಾಖೆ ಸಿಕ್ಕಿತು, ನಂತರ ನಗರಾಭಿವೃದ್ಧಿ ಇಲಾಖೆ ಸಿಕ್ಕಿತು. ಎಂದು ಹಳೆಯ ದಿನಗಳನ್ನು ಮೆಲುಕು ಹಾಕಿದರು.

ಇದೇ ವೇಳೆ ಕಾಡಿನ ಸುತ್ತಮುತ್ತ ಅಕ್ರಮ ಗನ್‌ಗಳ ಹಾವಳಿ ಹೆಚ್ಚಾಗಿರುವುದಕ್ಕೆ ತೀವ್ರ ಕಳವಳ ವ್ಯಕ್ತಪಡಿಸಿದ ಸಿಎಂ, ಕಾನೂನು ಭಾಹಿರ ಶಸ್ತ್ರಾಸ್ತ್ರಗಳನ್ನು ಹೊಂದಿರುವವರಿಗೆ ನ. 1ರ ಗಡುವು ನೀಡಿದ್ದು, ಅಷ್ಟರೊಳಗೆ ಗನ್ ಒಪ್ಪಿಸದಿದ್ದರೆ ಕಠಿಣ ಕಾನೂನು ಕ್ರಮ ಎದುರಿಸಬೇಕಾಗುತ್ತದೆ ಎಂದು ಖಡಕ್ ಎಚ್ಚರಿಕೆ ನೀಡಿದ್ದಾರೆ.

ನ.1 ರೊಳಗೆ ಒಪ್ಪಿಸಿದರೆ ಕೇಸ್ ಇಲ್ಲ

ಅಕ್ರಮವಾಗಿ ಗನ್ ಅಥವಾ ರೈಫಲ್ ಇಟ್ಟುಕೊಂಡಿರುವವರಿಗೆ ಸರ್ಕಾರ ಒಂದು ಸುವರ್ಣ ಅವಕಾಶ ನೀಡಿದೆ. ನ.1 ರೊಳಗೆ ತಾವಾಗಿಯೇ ಬಂದು ಅಕ್ರಮ ಆಯುಧಗಳನ್ನು ಪೊಲೀಸರಿಗೆ ಒಪ್ಪಿಸಿದರೆ, ಅವರ ಮೇಲೆ ಯಾವುದೇ ಕೇಸ್ ದಾಖಲಿಸುವುದಿಲ್ಲ. ಆದರೆ, ಈ ಡೆಡ್‌ಲೈನ್ ಮುಗಿದ ಮೇಲೂ ಗನ್ ಇಟ್ಟುಕೊಂಡಿರುವುದು ಪತ್ತೆಯಾದರೆ ಮಾತ್ರ ಪೊಲೀಸರು ಸೀದಾ ಜೈಲಿಗೆ ಕಳುಹಿಸುವುದು ಗ್ಯಾರಂಟಿ.

ಅರಣ್ಯ ಅಧಿಕಾರಿಗಳಿಗೇ ಆಪತ್ತು ತಂದಿದ್ದ ಗ್ಯಾಂಗ್‌ಗಳು

ಇತ್ತೀಚೆಗೆ ಹನೂರು ಸೀಮೆಯ ಕಾವೇರಿ ವನ್ಯಜೀವಿ ಧಾಮದಲ್ಲಿ ಕದ್ದುಮುಚ್ಚಿ ಬೇಟೆಯಾಡುತ್ತಿದ್ದ ಮೂವರು ಎನ್‌ಕೌಂಟರ್‌ನಲ್ಲಿ ಸಾವನ್ನಪ್ಪಿದ್ದರು. ಆ ಬೆನ್ನಲ್ಲೇ ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ಫಾರ್ಮ್‌ಹೌಸ್ ಒಂದರ ಮೇಲೆ ಅರಣ್ಯ ಅಧಿಕಾರಿಗಳು ದಾಳಿ ನಡೆಸಿದಾಗ ಶಾಕಿಂಗ್ ವಿಷಯ ಬೆಳಕಿಗೆ ಬಂದಿತ್ತು. ಅಲ್ಲಿ ಸ್ವಿಟ್ಜರ್ಲೆಂಡ್, ಜರ್ಮನಿ ಹಾಗೂ ಅಮೆರಿಕದಲ್ಲಿ ತಯಾರಾದ ಅತ್ಯಾಧುನಿಕ ಗನ್‌ಗಳು ಮತ್ತು ಜೀವಂತ ಗುಂಡುಗಳು ಸಿಕ್ಕಿದ್ದವು. ಇಂತಹ ಮಾರಕಾಸ್ತ್ರಗಳು ನಮ್ಮ ಅರಣ್ಯ ಸಿಬ್ಬಂದಿ ಮತ್ತು ವನ್ಯಜೀವಿಗಳ ಜೀವಕ್ಕೆ ನೇರ ಕುತ್ತು ತಂದಿವೆ ಎಂದು ಸಿಎಂ ಆತಂಕ ವ್ಯಕ್ತಪಡಿಸಿದರು.

ಹಳೆಯ ನೆನಪು ಹಂಚಿಕೊಂಡ ಡಿ.ಕೆ.ಶಿವಕುಮಾರ್

ಹಿಂದೆ ನಿವೃತ್ತ ಹಿರಿಯ ಅಧಿಕಾರಿ ರಾಮಮೂರ್ತಿ ಅವರು ಹಳ್ಳಿಗಳಲ್ಲಿ ನಾಡಬಂದೂಕುಗಳು ಹೆಚ್ಚಾಗಿರುವ ಬಗ್ಗೆ ನನ್ನ ಗಮನಕ್ಕೆ ತಂದಿದ್ದರು. ಆಗ ನಾನು ನನ್ನ ಸ್ವಕ್ಷೇತ್ರದಲ್ಲೇ ಖುದ್ದಾಗಿ ನಿಂತು 300ಕ್ಕೂ ಹೆಚ್ಚು ಅಕ್ರಮ ಗನ್‌ಗಳನ್ನು ಸರೆಂಡರ್ ಮಾಡಿಸಿದ್ದೆ ಎಂದು ಡಿಕೆಶಿ ನೆನಪಿಸಿಕೊಂಡರು. ಆದರೆ ಈಗಲೂ ಕಾಡಿನ ಸುತ್ತಮುತ್ತ ಇಂತಹ ನೂರಾರು ಗನ್‌ಗಳು ಓಡಾಡುತ್ತಿದ್ದು, ಇದ್ರಿಂದ ಎಷ್ಟೋ ಅರಣ್ಯ ಸಿಬ್ಬಂದಿ ಜೀವ ಕಳೆದುಕೊಂಡಿದ್ದಾರೆ ಎಂದರು.

ಇದನ್ನೂ ಓದಿ:

ಇದೇ ವೇಳೆ ಅರಣ್ಯ ರಕ್ಷಣಾ ಸಿಬ್ಬಂದಿಗೆ ವಿಶೇಷ ಭತ್ಯೆ ನೀಡುವ ಕುರಿತು ಸಚಿವ ರಾಮಲಿಂಗಾರೆಡ್ಡಿ ಅವರು ತಿಳಿಸಿದ್ದು, ಹಣಕಾಸು ಇಲಾಖೆಯೊಂದಿಗೆ ಚರ್ಚಿಸಿ ಸದ್ಯದಲ್ಲೇ ಒಳ್ಳೆಯ ತೀರ್ಮಾನ ಕೈಗೊಳ್ಳಲಾಗುವುದು ಎಂದು ಸಿಎಂ ಭರವಸೆ ನೀಡಿದರು.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !