ಮನೆಗೆ ಯಾರೇ ಬಂದರೂ ಮಕ್ಕಳನ್ನು ತುಂಬಾ ಆತ್ಮೀಯ ರೀತಿಯಲ್ಲಿ ಮಾತನಾಡಿಸೋಕೆ ಆರಂಭಿಸುತ್ತಾರೆ. ಆದರೆ ಮಕ್ಕಳು ಮಾತ್ರ ಅವರ ಮುಖ ನೋಡೋದಕ್ಕೂ ನಾಚಿಕೆ ಪಡ್ಕೊಳ್ತಾರೆ. ಅಪ್ಪ ಅಮ್ಮನ ಹಿಂದೆ ಬಚ್ಚಿಟ್ಟುಕೊಳ್ತಾರೆ ಅಥವಾ ರೂಮಿಗೆ ಓಡಿಹೋಗ್ತಾರೆ. ನಮ್ಮ ಮಗುಗೆ ಸ್ವಲ್ಪ ನಾಚಿಕೆ ಅವಳು ಯಾರ ಜೊತೆನೂ ಮಾತಾಡಲ್ಲ ಎಂದು ನೀವೇ ಡಿಕ್ಲೇರ್ ಮಾಡಿಬಿಡುತ್ತೀರಿ. ನಿಜ ಹೇಳಬೇಕೆಂದರೆ ನಿಮ್ಮ ಮಕ್ಕಳದ್ದು ನಾಚಿಕೆ ಸ್ವಭಾವ ಅಲ್ಲ, ಅವರಿಗೆ ನೀವು ಸಮಯ ಕೊಡುತ್ತಿಲ್ಲ ಅಷ್ಟೆ. ಮನೆಗೆ ಯಾರೇ ಬಂದರೂ ಮಕ್ಕಳಿಗೆ ಫೋರ್ಸ್ ಮಾಡೋದು ನಿಲ್ಲಿಸಿ ಸ್ವಲ್ಪ ಸಮಯ ಕೊಡಿ..

ನಿಮಗೆ ಹೊರಗಿನವರು ಪರಿಚಯ ಇರಬಹುದು, ತುಂಬಾ ಕ್ಲೋಸ್ ಆಗಿರಬಹುದು, ಆದರೆ ಮಕ್ಕಳಿಗೆ ಅವರು ಯಾರು ಗೊತ್ತಿಲ್ಲ. ಅಮ್ಮನ ಸ್ನೇಹಿತರು, ಅಪ್ಪನ ನೆಂಟರು ಎನ್ನುವ ವಿಚಾರವಷ್ಟೇ ಗೊತ್ತಿರುತ್ತದೆ. ಆದರೆ ಆ ವ್ಯಕ್ತಿ ಕ್ಲೋಸ್ ಇರೋದಿಲ್ಲ. ಮಕ್ಕಳು ಪದೇ ಪದೆ ನೋಡುವ ಮಾತನಾಡಿಸುವ ಜನರ ಜೊತೆ ಮಾತ್ರ ಇಷ್ಟಪಟ್ಟು ಮಾತಾಡ್ತಾರೆ. ಅವರು ಬಂದ ತಕ್ಷಣ ಪುಟ್ಟ ಬಾ ಅಂಕಲ್‌ಗೆ ಹಾಯ್ ಹೇಳು, ಆಂಟಿಗೆ ಹಾಯ್ ಹೇಳು ಎಂದು ಫೋರ್ಸ್ ಮಾಡಬೇಡಿ. ಮಕ್ಕಳು ಅವರಾಗೆ ಮಾತನಾಡಿಸಿದರೆ ಒಕೆ, ಇಲ್ಲವಾದ್ರೆ ಸಧ್ಯಕ್ಕೆ ಹಾಗೇ ಬಿಟ್ಟುಬಿಡಿ.

ಮಕ್ಕಳಿಗೆ ಸಮಯ ಕೊಡಿ, ನೀವು ಫೋರ್ಸ್ ಮಾಡದೇ, ಬಂದವರೂ ಫೋರ್ಸ್ ಮಾಡದೇ ಇದ್ದಲ್ಲಿ ಸ್ವಲ್ಪ ಹೊತ್ತಿನ ನಂತರ ಅವರೇ ಮಾತಿಗೆ ಇಳಿಯುತ್ತಾರೆ. ತಮ್ಮ ಹೊಸ ಆಟಸಾಮಾನನ್ನೋ ಅಥವಾ ಬರೆದಿರುವ ಚಿತ್ರವನ್ನೋ ಬಂದವರಿಗೆ ತೋರಿಸುತ್ತಾರೆ. ಸ್ನೇಹ ಬೆಳೆಸುತ್ತಾರೆ.
ಬಂದವರ ಎದುರಿಗೆ ಮಗುಗೆ ನಾಚಿಕೆ, ಮಾತನಾಡಿಸೋದಿಲ್ಲ ಎಂದು ಪದೇ ಪದೆ ಹೇಳಬೇಡಿ, ಮಕ್ಕಳಿಗೆ ತಮ್ಮ ಸ್ವಂತ ಪರ್ಸನಾಲಿಟಿ ಡೆವಲಪ್ ಆಗಿರೋದಿಲ್ಲ. ನೀವು ಹೇಳಿದ್ದನ್ನೇ ಕೇಳಿ ಕೇಳಿ ನಾನು ಹಾಗೆಯೇ ಎಂದು ಡಿಸೈಡ್ ಮಾಡುತ್ತಾರೆ. ತಕ್ಕಂತೆಯೇ ನಡೆದುಕೊಳ್ಳುತ್ತಾರೆ. ಮಾತನಾಡೋದಿಲ್ಲ ನಾಚಿಕೆ ಎಂದು ಹೇಳಿದಾಗ ಮಕ್ಕಳು ನನ್ನದು ನಾಚಿಕೆ ಸ್ವಭಾವ ನಾನು ಯಾರ ಜೊತೆಯೂ ಮಾತನಾಡೋದಿಲ್ಲ ಎಂದು ರಿಜಿಸ್ಟರ್ ಮಾಡಿಕೊಳ್ತಾರೆ.

ಮಕ್ಕಳ ಸಣ್ಣ ಹೆಜ್ಜೆಯನ್ನೂ ಪ್ರೋತ್ಸಾಹಿಸಿ. ಹೋಗಿ ಅಂಕಲ್‌ಗೆ ನೀರು ಕೊಡು ಎಂದಾಗ ಮಗು ಒಪ್ಪಿಕೊಂಡು ನೀರು ಕೊಡುತ್ತದೆ. ಇದು ಕೂಡ ದೊಡ್ಡ ಡೆವಲಪ್‌ಮೆಂಟ್. ನೀನು ನೀರು ತೆಗೆದುಕೊಂಡು ಹೋಗಿದ್ದರಿಂದ ನನಗೆ ಸಹಾಯ ಆಯ್ತು, ನೀನು ಮಾಡಿದ ಕೆಲಸ ಉತ್ತಮವಾಗಿತ್ತು ಎಂದು ಪಾಸಿಟಿವ್ ಪದಗಳನ್ನೇ ಹೇಳಿ. ಮಕ್ಕಳು ನಾವು ಹೇಳುವುದನ್ನೇ ನಂಬುತ್ತಾರೆ. ಬೇರೆಯವರ ಮುಂದೆ ಮಕ್ಕಳನ್ನು ಹೇಗೆ ವಿವರಿಸುತ್ತೀವಿ ಅನ್ನೋದು ಮುಖ್ಯ. ಸಾವಿರ ಸಲ ಹೇಳಿದ ಸುಳ್ಳೂ ಕೂಡ ನಿಜದಂತೆ ಅನಿಸೋದಿಲ್ವಾ? ಹಾಗೆಯೇ ಇದು ಕೂಡ. ಸಾವಿರ ಸಲ ಹೇಳಿದಾಗ ಮಕ್ಕಳು ಅದನ್ನೇ ನಂಬುತ್ತಾರೆ.
ಮನೆಗೆ ಬಂದವರನ್ನು ನೀವು ಇಂಪ್ರೆಸ್ ಮಾಡೋಕೆ ಹೋಗಿ ಮಕ್ಕಳನ್ನು ಬಲಿಪಶು ಮಾಡಬೇಡಿ.ದೊಡ್ಡವರ ಫೀಲಿಂಗ್ಸ್ ಹರ್ಟ್ ಆದರೆ ಮತ್ತೆ ಸರಿಯಾಗುತ್ತದೆ. ಮಕ್ಕಳ ಫೀಲಿಂಗ್ಸ್ ಹರ್ಟ್ ಮಾಡಿದರೆ ಅವರು ಅದನ್ನೇ ತಮ್ಮ ಪರ್ಸನಾಲಿಟಿಯನ್ನಾಗಿ ಮಾಡಿಕೊಳ್ತಾರೆ.



