September 12, 2026
Saturday, September 12, 2026
spot_img

ಬ್ರಿಕ್ಸ್ ಶೃಂಗಸಭೆ: ‘ಅಭಿವೃದ್ಧಿಶೀಲ ರಾಷ್ಟ್ರಗಳೇ ಜಗತ್ತಿನ ದಿಕ್ಸೂಚಿಯಾಗಬೇಕು’: ಪ್ರಧಾನಿ ಮೋದಿ ಕರೆ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ರಾಜಧಾನಿ ದೆಹಲಿಯಲ್ಲಿ ಇಂದಿನಿಂದ ಆರಂಭವಾಗಿರುವ 18ನೇ ಬ್ರಿಕ್ಸ್ ಶೃಂಗಸಭೆಯನ್ನು ಪ್ರಧಾನಿ ನರೇಂದ್ರ ಮೋದಿ ಅವರು ಅಧಿಕೃತವಾಗಿ ಉದ್ಘಾಟಿಸಿದ್ದಾರೆ. ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಮತ್ತು ಚೀನಾ ಅಧ್ಯಕ್ಷ ಷಿ ಜಿನ್‌ಪಿಂಗ್ ಸೇರಿದಂತೆ ಜಾಗತಿಕ ನಾಯಕರನ್ನು ಸ್ವಾಗತಿಸಿ ಮಾತನಾಡಿದ ಪ್ರಧಾನಿ ಮೋದಿ, ಜಾಗತಿಕ ಆಡಳಿತ ವ್ಯವಸ್ಥೆಯಲ್ಲಿನ ತಾರತಮ್ಯದ ವಿರುದ್ಧ ಅಂತಾರಾಷ್ಟ್ರೀಯ ವೇದಿಕೆಯಲ್ಲಿ ಧ್ವನಿ ಎತ್ತಿದ್ದಾರೆ.

ಬದಲಾಗುತ್ತಿರುವ ಇಂದಿನ ಜಗತ್ತಿನಲ್ಲಿ ಅಭಿವೃದ್ಧಿಶೀಲ ರಾಷ್ಟ್ರಗಳು ಕೇವಲ ಪ್ರೇಕ್ಷಕರಾಗಿ ಉಳಿಯಬಾರದು, ಬದಲಿಗೆ ಜಾಗತಿಕ ನಿಯಮಗಳನ್ನು ರೂಪಿಸುವ ಶಕ್ತಿಯಾಗಬೇಕು ಎಂದು ಪ್ರಧಾನಿ ಮೋದಿ ಪ್ರತಿಪಾದಿಸಿದ್ದಾರೆ.

‘ಗ್ಲೋಬಲ್ ಸೌತ್’ ಕೇವಲ ಕೊನೆಯ ಸಾಲಿನಲ್ಲಿರಲು ಸಾಧ್ಯವಿಲ್ಲ

ಜಗತ್ತಿನ ಪ್ರಸ್ತುತ ಆಡಳಿತ ವ್ಯವಸ್ಥೆಯನ್ನು ಪಿರಮಿಡ್‌ಗೆ ಹೋಲಿಸಿದ ಪ್ರಧಾನಿ ಮೋದಿ, ಇವತ್ತಿನ ಜಾಗತಿಕ ಆಡಳಿತವು ಪಿರಮಿಡ್ ಆಕಾರದಲ್ಲಿದೆ. ಅಧಿಕಾರ ಮತ್ತು ನಿರ್ಧಾರ ಕೈಗೊಳ್ಳುವ ಹಕ್ಕುಗಳು ಕೇವಲ ಮೇಲ್ಭಾಗದಲ್ಲಿರುವ ಕೆಲವು ದೇಶಗಳ ಕೈಯಲ್ಲಿ ಮಾತ್ರ ಇವೆ. ಆದರೆ ಇದರ ಕೆಳಭಾಗದಲ್ಲಿರುವ ಅಭಿವೃದ್ಧಿಶೀಲ ರಾಷ್ಟ್ರಗಳು ಆ ನಿರ್ಧಾರಗಳಿಂದ ತೊಂದರೆ ಅನುಭವಿಸುತ್ತಿದ್ದರೂ, ನಿಯಮಗಳನ್ನು ರೂಪಿಸುವಲ್ಲಿ ಅವರಿಗೆ ಯಾವುದೇ ಪಾತ್ರವಿಲ್ಲ. ಜಾಗತಿಕ ಬಿಕ್ಕಟ್ಟುಗಳು ಎದುರಾದಾಗ ಗ್ಲೋಬಲ್ ಸೌತ್ ದೇಶಗಳು ಮೊದಲ ಸಾಲಿನಲ್ಲಿ ನಿಲ್ಲುತ್ತವೆ, ಆದರೆ ನಿರ್ಧಾರ ತೆಗೆದುಕೊಳ್ಳುವ ಹೊತ್ತಿಗೆ ಅವುಗಳನ್ನು ಕೊನೆಯ ಸಾಲಿನಲ್ಲಿ ನಿಲ್ಲಿಸಲಾಗುತ್ತದೆ. ಇನ್ನು ಮುಂದೆ ಇದು ನಡೆಯುವುದಿಲ್ಲ, ಅಭಿವೃದ್ಧಿಶೀಲ ರಾಷ್ಟ್ರಗಳೇ ಜಾಗತಿಕ ನಿಯಮಗಳನ್ನು ರೂಪಿಸುವ ಶಕ್ತಿಯಾಗಬೇಕುಎಂದು ಮೋದಿ ಖಡಕ್‌ ಆಗಿ ಹೇಳಿದ್ದಾರೆ.

ವಿಶ್ವ ಸಂಸ್ಥೆ ಸುಧಾರಣೆ ಇನ್ನು ತಡವಾಗಬಾರದು

ವಿಶ್ವ ಸಂಸ್ಥೆಯ ಭದ್ರತಾ ಮಂಡಳಿಯಲ್ಲಿ (UNSC) ಭಾರತ ಸೇರಿದಂತೆ ಪ್ರಮುಖ ದೇಶಗಳಿಗೆ ಖಾಯಂ ಸದಸ್ಯತ್ವ ನೀಡುವ ಕುರಿತು ಮಾತನಾಡಿದ ಪ್ರಧಾನಿ, ಇಂದಿನ ಬದಲಾದ ಕಾಲಕ್ಕೆ ತಕ್ಕಂತೆ ವಿಶ್ವ ಸಂಸ್ಥೆಯಲ್ಲಿ ಸುಧಾರಣೆ ತರುವುದು ಅತ್ಯಂತ ತುರ್ತು ಅಗತ್ಯವಾಗಿದೆ. ಇದನ್ನು ಇನ್ನು ಮುಂದೆ ಮುಂದೂಡಲು ಸಾಧ್ಯವೇ ಇಲ್ಲ ಎಂದು ಜಾಗತಿಕ ನಾಯಕರಿಗೆ ಸ್ಪಷ್ಟಪಡಿಸಿದರು.

20 ವರ್ಷಗಳ ಬ್ರಿಕ್ಸ್ ಒಕ್ಕೂಟಕ್ಕೀಗ ಹೊಣೆಗಾರಿಕೆಯ ವಯಸ್ಸು

ಬ್ರಿಕ್ಸ್ ಒಕ್ಕೂಟ ಸ್ಥಾಪನೆಯಾಗಿ ಈಗ 20 ವರ್ಷಗಳು ಕಳೆದಿವೆ. ಮನುಷ್ಯನ ಜೀವನದಲ್ಲಿ 20ನೇ ವರ್ಷ ಎಂಬುದು ಹೇಗೆ ಪ್ರೌಢಾವಸ್ಥೆ ಮತ್ತು ಜವಾಬ್ದಾರಿಯ ಆರಂಭವೋ, ಹಾಗೆಯೇ ಬ್ರಿಕ್ಸ್ ಒಕ್ಕೂಟ ಕೂಡ ಈಗ ಪರಿಪೂರ್ಣ ಜಾಗತಿಕ ಶಕ್ತಿಯಾಗಿ ಹೊರಹೊಮ್ಮಿದೆ. ನಾವು ಯಾರೋ ಒಬ್ಬರ ವಿರುದ್ಧವಾಗಿ ಸಂಘಟನೆ ಕಟ್ಟಿಲ್ಲ, ಬದಲಿಗೆ ಎಲ್ಲರನ್ನೂ ಜತೆಯಲ್ಲಿ ಕರೆದುಕೊಂಡು ಹೋಗುವ ನೀತಿ ನಮ್ಮದಾಗಿದೆ ಎಂದು ಮೋದಿ ಹೇಳಿದರು. ಭಾರತದ ಅಧ್ಯಕ್ಷತೆಯಲ್ಲಿ ನಡೆದಿರುವ ಈ ಬಾರಿಯ ಒಕ್ಕೂಟವು ʼಜನಕೇಂದ್ರಿತ ಮತ್ತು ಮಾನವೀಯತೆಗೆ ಮೊದಲ ಆದ್ಯತೆʼ ಕೊಡುವ ತತ್ವದ ಮೇಲೆ ಮುನ್ನಡೆಯುತ್ತಿದೆ ಎಂದರು.

ಇದನ್ನೂ ಓದಿ:

ಯೋಜನೆಗಳ ಜಾರಿಗೆ ‘ಡಿಜಿಟಲ್ ರೆಪೊಸಿಟರಿ’ ಸ್ಥಾಪನೆ

ಬ್ರಿಕ್ಸ್ ಶೃಂಗಸಭೆಗಳಲ್ಲಿ ತೆಗೆದುಕೊಳ್ಳುವ ನಿರ್ಧಾರಗಳು ಕೇವಲ ಕಾಗದದ ಮೇಲೆ ಉಳಿಯಬಾರದು ಎಂದು ಹೇಳಿದ ಪ್ರಧಾನಿ ಮೋದಿ, ಇದಕ್ಕಾಗಿ ಒಂದು ಸುರಕ್ಷಿತವಾದ ‘ಡಿಜಿಟಲ್ ರೆಪೊಸಿಟರಿ’ ಸ್ಥಾಪಿಸಲು ಪ್ರಸ್ತಾಪಿಸಿದರು. ಇದರ ಅಡಿಯಲ್ಲಿ ಪ್ರತಿಯೊಂದು ನಿರ್ಧಾರದ ಜಾರಿ, ಅದರ ಟೈಮ್‌ಲೈನ್ ಮತ್ತು ಪ್ರಗತಿಯನ್ನು ಕಟ್ಟುನಿಟ್ಟಾಗಿ ಮೇಲ್ವಿಚಾರಣೆ ಮಾಡಬಹುದು ಎಂದು ವಿವರಿಸಿದರು.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !