September 12, 2026
Saturday, September 12, 2026
spot_img

ಬ್ರಿಕ್ಸ್ ಶೃಂಗಸಭೆ: ದೆಹಲಿಗೆ ಬಂದಿಳಿದ ಚೀನಾ ಅಧ್ಯಕ್ಷ: ಭಾರತೀಯ ನೃತ್ಯಗಳೊಂದಿಗೆ ಜಿನ್‌ಪಿಂಗ್‌ಗೆ ಭವ್ಯ ಸ್ವಾಗತ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ಜಾಗತಿಕ ರಾಜತಾಂತ್ರಿಕ ವಲಯದಲ್ಲಿ ಇಡೀ ವಿಶ್ವವೇ ಕಾತರದಿಂದ ಕಾಯುತ್ತಿದ್ದ ಕ್ಷಣ ಕೊನೆಗೂ ಬಂದಿದೆ. 18ನೇ ಬ್ರಿಕ್ಸ್ ಶೃಂಗಸಭೆಯಲ್ಲಿ ಭಾಗವಹಿಸಲು ಚೀನಾ ಅಧ್ಯಕ್ಷ ಷಿ ಜಿನ್‌ಪಿಂಗ್ ಅವರು ಶನಿವಾರ ರಾಜಧಾನಿ ನವದೆಹಲಿಗೆ ಬಂದಿಳಿದಿದ್ದಾರೆ. 2020ರ ಗಲ್ವಾನ್ ಗಡಿ ಸಂಘರ್ಷದ ನಂತರ ಉಭಯ ದೇಶಗಳ ನಡುವೆ ಇದ್ದ ಬಿಗುವಿನ ವಾತಾವರಣದ ಮಧ್ಯೆ, ಬರೋಬ್ಬರಿ ಏಳು ವರ್ಷಗಳ ನಂತರ ಜಿನ್‌ಪಿಂಗ್ ಭಾರತದಕ್ಕೆ ಬಂದಿದ್ದಾರೆ.

ವಿಮಾನ ನಿಲ್ದಾಣಕ್ಕೆ ಬಂದಿಳಿದ ಚೀನಾ ಅಧ್ಯಕ್ಷರನ್ನು ಭಾರತದ ಈಶಾನ್ಯ ರಾಜ್ಯಗಳು ಸೇರಿದಂತೆ ವಿವಿಧ ರಾಜ್ಯಗಳ ಸಾಂಪ್ರದಾಯಿಕ ಕಲಾತಂಡಗಳು ಶಾಸ್ತ್ರೀಯ ನೃತ್ಯಗಳ ಮೂಲಕ ಸ್ವಾಗತಿಸಲಾಗಿದೆ.

ಜಿನ್‌ಪಿಂಗ್ ಜತೆ ಬಂದಿದ್ದಾರೆ ಚೀನಾದ ನಾಯಕರು

ಚೀನಾ ಅಧ್ಯಕ್ಷರ ಈ ಪ್ರವಾಸ ಅತ್ಯಂತ ಹೈ-ಪ್ರೊಫೈಲ್ ಆಗಿದ್ದು, ಅವರ ಜತೆ ಚೀನಾ ಕಮ್ಯುನಿಸ್ಟ್ ಪಕ್ಷದ ಪ್ರಧಾನ ಕಚೇರಿ ನಿರ್ದೇಶಕ ಸಾಯ್ ಕಿ ಹಾಗೂ ಚೀನಾದ ವಿದೇಶಾಂಗ ಸಚಿವ ವಾಂಗ್ ಯಿ ಸೇರಿದಂತೆ ಪ್ರಭಾವಿ ನಾಯಕರ ದೊಡ್ಡ ತಂಡವೇ ದೆಹಲಿಗೆ ಆಗಮಿಸಿದೆ. ಭಾರತದ ಅಧ್ಯಕ್ಷತೆಯಲ್ಲಿ ನಡೆಯುತ್ತಿರುವ ಈ ಎರಡು ದಿನಗಳ ಬ್ರಿಕ್ಸ್ ಶೃಂಗಸಭೆಯ ನಡುವೆಯೇ, ಪ್ರಧಾನಿ ನರೇಂದ್ರ ಮೋದಿ ಹಾಗೂ ಷಿ ಜಿನ್‌ಪಿಂಗ್ ನಡುವೆ ನಡೆಯಲಿರುವ ದ್ವಿಪಕ್ಷೀಯ ಮಾತುಕತೆಯ ಮೇಲೆ ಇಡೀ ಜಗತ್ತಿನ ಕಣ್ಣು ನೆಟ್ಟಿದೆ.

‘ಗ್ಲೋಬಲ್ ಸೌತ್’ ಪರ ಧ್ವನಿ ಎತ್ತಲಿರುವ ಚೀನಾ

ಚೀನಾ ಮೂಲದ ಪ್ರಕಾರ, ಜಿನ್‌ಪಿಂಗ್ ಅವರು ಈ ಹಿಂದಿನ ಎಸ್‌ಸಿಒ ಶೃಂಗಸಭೆಯಂತೆಯೇ ಈ ಬ್ರಿಕ್ಸ್ ಸಭೆಯಲ್ಲೂ ಅಭಿವೃದ್ಧಿಶೀಲ ರಾಷ್ಟ್ರಗಳ ಸಹಕಾರದ ಕುರಿತು ಪ್ರಮುಖ ಪ್ರಸ್ತಾವನೆಗಳನ್ನು ಮಂಡಿಸಲಿದ್ದಾರೆ. ಬ್ರಿಕ್ಸ್ ಮತ್ತು ಎಸ್‌ಸಿಒ ಒಕ್ಕೂಟಗಳು ಜಗತ್ತಿನ ಅರ್ಧಕ್ಕಿಂತ ಹೆಚ್ಚು ಜನಸಂಖ್ಯೆಯನ್ನು ಹಾಗೂ ಜಾಗತಿಕ ಆರ್ಥಿಕತೆಯ ಶೇ. 30 ರಷ್ಟನ್ನು ಪ್ರತಿನಿಧಿಸುತ್ತವೆ. ಈ ವರ್ಷ ಬ್ರಿಕ್ಸ್ ಸಹಕಾರ ವ್ಯವಸ್ಥೆಗೆ 20 ವರ್ಷ ತುಂಬುತ್ತಿದ್ದು, ಅಭಿವೃದ್ಧಿಶೀಲ ರಾಷ್ಟ್ರಗಳ ಹಿತಾಸಕ್ತಿ ಕಾಯಲು ಈ ವೇದಿಕೆ ಅತ್ಯಂತ ಮುಖ್ಯವಾಗಿದೆ ಎಂದು ಚೀನಾ ಹೇಳಿದೆ.

ಇದನ್ನೂ ಓದಿ:

‘ಒಳ್ಳೆಯ ನೆರೆಹೊರೆಯವರಾಗಿರೋಣ’ ಎಂದ ರಾಯಭಾರಿ

ಈ ಮಹತ್ವದ ಭೇಟಿಯ ಬೆನ್ನಲ್ಲೇ ಭಾರತದಲ್ಲಿರುವ ಚೀನಾ ರಾಯಭಾರಿ ಕ್ಸು ಫೀಹಾಂಗ್ ಅವರು ಪಾಸಿಟಿವ್ ಸಂದೇಶ ನೀಡಿದ್ದಾರೆ. “ನಾವಿಬ್ಬರೂ ದೀರ್ಘಕಾಲದ ಸ್ನೇಹಕ್ಕೆ ಒತ್ತು ಕೊಡಬೇಕು. ಭಿನ್ನಾಭಿಪ್ರಾಯಗಳನ್ನು ಮಾತುಕತೆ ಮೂಲಕ ಬಗೆಹರಿಸಿಕೊಂಡು, ಒಬ್ಬರ ಯಶಸ್ಸಿಗೆ ಮತ್ತೊಬ್ಬರು ಹೆಗಲು ಕೊಡುವ ಒಳ್ಳೆಯ ನೆರೆಹೊರೆಯವರಾಗಬೇಕು ಎಂಬುದು ಚೀನಾದ ಆಶಯವಾಗಿದೆ” ಎಂದು ಅವರು ತಿಳಿಸಿದ್ದಾರೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !