September 12, 2026
Saturday, September 12, 2026
spot_img

‘ಅನ್ನಂ ಬ್ರಹ್ಮ’ ಮಾಲಿಕೆ | ಫ್ರಿಡ್ಜ್ ನೀರು ಕುಡಿಯುವ ಮುನ್ನ ಹುಷಾರ್! ಅತಿ ಶೀತ, ಉಷ್ಣ ನೀರಿನ ಬಗ್ಗೆ ರಾಘವೇಶ್ವರ ಶ್ರೀ ಎಚ್ಚರಿಕೆ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಅತಿ ಶೀತ ಅಥವಾ ಅತಿ ಉಷ್ಣ ನೀರನ್ನು ಸೇವಿಸುವುದು ಆರೋಗ್ಯಕ್ಕೆ ಹಾನಿಕರವಾಗಬಹುದು. ದೇಹದ ಉಷ್ಣತೆ ಅಥವಾ ತಂಪಿನಲ್ಲಿ ಏಕಾಏಕಿ ಬದಲಾವಣೆ ಉಂಟಾಗಬಾರದು. ಹಂತಹಂತವಾಗಿ ಬದಲಾವಣೆ ಆಗಬೇಕು ಎಂದು ಶ್ರೀರಾಮಚಂದ್ರಾಪುರ ಮಠದ ಜಗದ್ಗುರು ಶಂಕರಾಚಾರ್ಯ ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳು ಎಚ್ಚರಿಸಿದ್ದಾರೆ.

ಗೋಕರ್ಣದ ಅಶೋಕೆಯ ಮೂಲಮಠದ ಪರಿಸರದಲ್ಲಿ ನಡೆಯುತ್ತಿರುವ ‘ಅನ್ನಬ್ರಹ್ಮ ಚಾತುರ್ಮಾಸ್ಯ’ದ  ಶನಿವಾರದ ಧರ್ಮಸಭೆಯ ‘ಅನ್ನಂ ಬ್ರಹ್ಮ’ ಮಾಲಿಕೆಯಲ್ಲಿ ಶ್ರೀಗಳು ಪ್ರವಚನ ಅನುಗ್ರಹಿಸಿದರು.

ತಕ್ಷಣದ ತಂಪಿಗಾಗಿ ಫ್ರಿಡ್ಜ್‌ನಲ್ಲಿಟ್ಟ ಅತಿ ಶೀತ ನೀರು ಕುಡಿಯುವ ಅಭ್ಯಾಸ ಆರೋಗ್ಯಕ್ಕೆ ಸೂಕ್ತವಲ್ಲ. ಆಯುರ್ವೇದದ ಪ್ರಕಾರ ಅತಿ ಶೀತ ನೀರು ಜೀರ್ಣಕ್ರಿಯೆಗೆ ತೊಂದರೆ ಉಂಟುಮಾಡುವುದರ ಜೊತೆಗೆ ಜೀರ್ಣಾಗ್ನಿಯನ್ನು ದುರ್ಬಲಗೊಳಿಸಿ ವಾತ ಹಾಗೂ ಕಫ ದೋಷಗಳ ಮೇಲೆ ಪರಿಣಾಮ ಬೀರುತ್ತದೆ ಎಂದು ಶ್ರೀಗಳು ವಿವರಿಸಿದರು. ಆಧುನಿಕ ವಿಜ್ಞಾನದಲ್ಲೂ ಅತಿ ಶೀತ ನೀರಿನಿಂದ ರಕ್ತನಾಳಗಳ ಸಂಕುಚಿತತೆ ಸೇರಿದಂತೆ ಉಂಟಾಗಬಹುದಾದ ಪರಿಣಾಮಗಳ ಬಗ್ಗೆ ಉಲ್ಲೇಖವಿದೆ ಎಂದರು.

ಋತುಮಾನಕ್ಕೆ ಅನುಗುಣವಾಗಿ ನೀರನ್ನು ಕಾದಾರಿಸಿ ಸೇವಿಸುವ ವಿಧಾನಗಳನ್ನು ಆಯುರ್ವೇದ ಸೂಚಿಸಿದೆ. ನೀರನ್ನು ತಂಪಾಗಿಸುವ ಏಳು ವಿಧಾನಗಳನ್ನೂ ಹೇಳಿದೆ. ವಿವಿಧ ಹೂವುಗಳನ್ನು ನೀರಿಗೆ ಹಾಕಿಕೊಂಡು ಸುಗಂಧ ಭರಿತವಾದ ನೀರನ್ನು ಸೇವಿಸುವ ಕುರಿತಾಗಿಯೂ ಮಾಹಿತಿಗಳಿದ್ದು, ಚಿನ್ನ, ಬೆಳ್ಳಿ, ತಾಮ್ರ, ಗಾಜು, ಮಣ್ಣು ಮುಂತಾದ ಉತ್ತಮ ಪಾತ್ರೆಗಳಲ್ಲಿ ನೀರನ್ನು ಸೇವಿಸಬೇಕು. ಇಂದಿನ ಸ್ಟೀಲ್ ಲೋಟಗಳು ನೀರನ ಸೇವನೆಗೆ ವರ್ಜ್ಯ ಎಂದು ಶ್ರೀಗಳು ವಿವರಿಸಿದರು.

ಕರ್ನಾಟಕ ವಿಧಾನಸಭೆಯ ಉಪಸಭಾಧ್ಯಕ್ಷ ಮಂಕಾಳ ವೈದ್ಯ ಕುಟುಂಬದವರು ಮತ್ತು ಕುಮಟಾ ಶಾಸಕ ದಿನಕರ ಶೆಟ್ಟಿ ಮುಂತಾದವರು ಉಪಸ್ಥಿತರಿದ್ದು, ಶ್ರೀಗಳಿಂದ ಆಶೀರ್ವಾದ ಪಡೆದರು. ಬೆಂಗಳೂರು ಉತ್ತರ ಹವ್ಯಕ ಮಂಡಲದ ಪರವಾಗಿ ಕೇಶವ ಭಟ್ ಸರ್ಪಂಗಳ ಕುಟುಂಬದವರು ಭಿಕ್ಷಾಸೇವೆ ಸಮರ್ಪಿಸಿದರು. ದಿನಪ್ರಧಾನರಾಗಿ ಶಿವರಾಮ ಭಟ್ಟ ಬುರ್ಡೆ ದಂಪತಿ ಉಪಸ್ಥಿತರಿದ್ದರು.

ನವರಾತ್ರಿ ಆಹ್ವಾನ ಪತ್ರಿಕೆ ಲೋಕಾರ್ಪಣೆ :

ಇದೇ ವೇಳೆ ಬೆಂಗಳೂರಿನ ಗಿರಿನಗರದಲ್ಲಿರುವ ಶ್ರೀಮಠದ ಶಾಖೆಯಲ್ಲಿ ಅಕ್ಟೋಬರ್ 11ರಿಂದ 21ರವರೆಗೆ ನಡೆಯಲಿರುವ ‘ನವರಾತ್ರಿ ನಮಸ್ಯಾ’ ಮಹೋತ್ಸವದ ಆಹ್ವಾನ ಪತ್ರಿಕೆಯನ್ನು ಶ್ರೀಗಳು ಲೋಕಾರ್ಪಣೆ ಮಾಡಿದರು. ದೇವಿಯ ಆರಾಧನೆಯೊಂದಿಗೆ ವಿವಿಧ ಕಾರ್ಯಕ್ರಮಗಳು ನಡೆಯಲಿವೆ. ಪೂಜ್ಯ ಶ್ರೀಗಳು ಆಹ್ವಾನ ಪತ್ರಿಕೆಯನ್ನು ಲೋಕಾರ್ಪಣೆ ಮಾಡಿ ಆಶೀರ್ವದಿಸಿದರು. ಶಾಸನತಂತ್ರದ ಅಧ್ಯಕ್ಷ ಮೋಹನ ಭಾಸ್ಕರ ಹೆಗಡೆ, ವಿತ್ತಾಧ್ಯಕ್ಷ ಗಣೇಶ್ ಜೆ.ಎಲ್, ಮಹಾಮಂಡಲದ ಕಾರ್ಯದರ್ಶಿ ಮಹೇಶ್ ಚಟ್ನಳ್ಳಿ, ರಮೇಶ್ ಹೆಗಡೆ ಕೋರಮಂಗಲ, ವಾದಿರಾಜ ಸಾಮಗ, ತಿಮ್ಮಪ್ಪ ಗುಡ್ದೆದಿಂಬ ಉಪಸ್ಥಿತರಿದ್ದರು.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !