ಬೆಳಗ್ಗೆ ಎದ್ದ ತಕ್ಷಣ ಇವತ್ತು ತಿಂಡಿಗೆ ಏನು ಮಾಡೋದು ಅಂತ ತಲೆ ಕೆಡಿಸಿಕೊಳ್ಳೋದು ಪ್ರತಿಯೊಬ್ಬರ ಮನೆಯ ಕಥೆ. ಇಡ್ಲಿ, ದೋಸೆ, ಉಪ್ಪಿಟ್ಟು ತಿಂದು ಬೋರ್ ಆಗಿದ್ದಾಗ, ನಮಗೆ ತಕ್ಷಣ ನೆನಪಾಗೋದೇ ನಮ್ಮ ಅಜ್ಜಿಯ ಕಾಲದ ಅಡುಗೆಗಳು. ಅಂಥವುಗಳಲ್ಲಿಈ ‘ನುಚ್ಚಿನುಂಡೆ’ಯೂ ಒಂದು. ಒಂದ ಹನಿ ಎಣ್ಣೆಯೂ ಇಲ್ಲದೆ, ಕೇವಲ ಬೇಳೆ ಮತ್ತು ಸಬ್ಬಸಿಗೆ ಸೊಪ್ಪಿನ ಘಮದೊಂದಿಗೆ ಆವಿಯಲ್ಲಿ ಬೇಯಿಸುವ ಈ ತಿಂಡಿ ಬಾಯಿಗಷ್ಟೇ ಅಲ್ಲ, ಆರೋಗ್ಯಕ್ಕೂ ತುಂಬಾನೇ ಒಳ್ಳೆಯದು.
ಬೇಕಾಗುವ ಸಾಮಗ್ರಿಗಳು:
ತೊಗರಿಬೇಳೆ
ಕಡಲೆಬೇಳೆ
ಹಸಿರು ಮೆಣಸಿನಕಾಯಿ
ಶುಂಠಿ
ಸಬ್ಬಸಿಗೆ ಸೊಪ್ಪು
ಕೊತ್ತಂಬರಿ ಸೊಪ್ಪು
ತೆಂಗಿನಕಾಯಿ ತುರಿ
ಇಂಗು
ಉಪ್ಪು
ಮಾಡುವ ವಿಧಾನ:
ಮೊದಲು ತೊಗರಿಬೇಳೆ ಮತ್ತು ಕಡಲೆಬೇಳೆಯನ್ನು 2-3 ಗಂಟೆ ನೀರಲ್ಲಿ ಚೆನ್ನಾಗಿ ನೆನೆಯಲು ಬಿಡಬೇಕು. ನಂತರ ನೆನೆದ ಬೇಳೆಯಿಂದ ನೀರನ್ನು ಸೋಸಿಕೊಂಡು ಇದರ ಜೊತೆ ಹಸಿರು ಮೆಣಸಿನಕಾಯಿ, ಶುಂಠಿ, ಇಂಗು ಸೇರಿಸಿ, ನೀರು ಹಾಕದೆ ಮಿಕ್ಸಿಯಲ್ಲಿ ತರಿತರಿಯಾಗಿ ರುಬ್ಬಿಕೊಳ್ಳಬೇಕು. ಬಳಿಕೆ ರುಬ್ಬಿದ ಮಿಶ್ರಣಕ್ಕೆ ಸಣ್ಣಗೆ ಹೆಚ್ಚಿದ ಸಬ್ಬಸಿಗೆ ಸೊಪ್ಪು, ಕೊತ್ತಂಬರಿ ಸೊಪ್ಪು, ಹಸಿ ಕಾಯಿ ತುರಿ ಮತ್ತು ಉಪ್ಪು ಹಾಕಿ ಚೆನ್ನಾಗಿ ಕಲಸಬೇಕು.
ನಂತರ ರೆಡಿಯಾದ ಹಿಟ್ಟನ್ನು ಕೈಗೆ ತೆಗೆದುಕೊಂಡು ಉದ್ದುದ್ದ ಆಕಾರದ ಉಂಡೆಗಳನ್ನು ಮಾಡಿ, ಇಡ್ಲಿ ಪಾತ್ರೆಯಲ್ಲಿ ಈ ಉಂಡೆಗಳನ್ನು ಇಟ್ಟು 12 ರಿಂದ 15 ನಿಮಿಷ ಆವಿಯಲ್ಲಿ ಚೆನ್ನಾಗಿ ಬೇಯಲು ಬಿಡಬೇಕು. ಆಗ ನುಚ್ಚಿನುಂಡೆ ರೆಡಿ. ಈ ಬಿಸಿ ಉಂಡೆಗೆ ತುಪ್ಪ ಸವರಿ ಮಜ್ಜಿಗೆ ಹುಳಿ ಜತೆ ತಿನ್ನಲು ಅದ್ಭುತವಾಗಿರುತ್ತದೆ.



