September 13, 2026
Sunday, September 13, 2026
spot_img

ಮೋದಿ-ಕ್ಸಿ ಜಿನ್‌ಪಿಂಗ್ ಭೇಟಿ ಬೆನ್ನಲ್ಲೇ ಗಡಿ ವಿಚಾರದಲ್ಲಿ ಭಾರತ-ಚೀನಾ ನಡುವೆ ಭಿನ್ನ ನಿಲುವು

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ಪ್ರಧಾನಿ ನರೇಂದ್ರ ಮೋದಿ ಮತ್ತು ಚೀನಾ ಅಧ್ಯಕ್ಷ ಷಿ ಜಿನ್‌ಪಿಂಗ್ ನಡುವಿನ ಶನಿವಾರದ ಮಹತ್ವದ ಸಭೆಯ ನಂತರ, ಎರಡೂ ದೇಶಗಳು ಬಿಡುಗಡೆ ಮಾಡಿರುವ ಅಧಿಕೃತ ಹೇಳಿಕೆಗಳು ಗಡಿ ವಿವಾದ ಮತ್ತು ದ್ವಿಪಕ್ಷೀಯ ಸಂಬಂಧಗಳ ನಡುವಿನ ಲಿಂಕ್ ಅನ್ನು ಭಾರತ ಮತ್ತು ಚೀನಾ ಹೇಗೆ ವಿಭಿನ್ನವಾಗಿ ನೋಡುತ್ತಿವೆ ಎಂಬುದನ್ನು ಸ್ಪಷ್ಟಪಡಿಸಿವೆ.

ದೆಹಲಿಯಲ್ಲಿ ನಡೆಯುತ್ತಿರು 18ನೇ ಬ್ರಿಕ್ಸ್‌ ಶೃಂಗಸಭೆಯಲ್ಲಿ ನಿನ್ನೆ ಶನಿವಾರ ಈ ಇಬ್ಬರು ಉಭಯ ನಾಯಕರ ನಡುವೆ ಮಹತ್ವದ ಮಾತುಕತೆ ನಡೆದಿದೆ. 2020ರ ಗಲ್ವಾನ್ ಕಣಿವೆಯ ಸಂಘರ್ಷದ ನಂತರ, ಬರೋಬ್ಬರಿ ಏಳು ವರ್ಷಗಳ ಬಳಿಕ ಚೀನಾ ಅಧ್ಯಕ್ಷರು ಭಾರತಕ್ಕೆ ಭೇಟಿ ನೀಡಿರುವುದು ಈ ಸಭೆಯ ಪ್ರಾಮುಖ್ಯತೆಯನ್ನು ಹೆಚ್ಚಿಸಿದೆ. ಆದರೆ, ಸಭೆಯ ನಂತರ ಹೊರಬಿದ್ದಿರುವ ಉಭಯ ದೇಶಗಳ ಹೇಳಿಕೆಗಳಲ್ಲಿ ಸ್ಪಷ್ಟ ಭಿನ್ನಾಭಿಪ್ರಾಯ ಎದ್ದು ಕಾಣುತ್ತಿದೆ.

ಚೀನಾದ ನಿಲುವು

ಚೀನಾ ತನ್ನ ಹೇಳಿಕೆಯಲ್ಲಿ, ಎರಡೂ ದೇಶಗಳು ದ್ವಿಪಕ್ಷೀಯ ಸಂಬಂಧಗಳನ್ನು ಮುನ್ನಡೆಸಬೇಕು ಮತ್ತು ಅದೇ ಸಮಯದಲ್ಲಿ ಗಡಿ ಸಮಸ್ಯೆಯನ್ನೂ ಬಗೆಹರಿಸಿಕೊಳ್ಳಬೇಕು ಎಂದು ಕರೆ ನೀಡಿದೆ. ಅಂದರೆ, ಎರಡೂ ರಂಗಗಳಲ್ಲಿ “ಸಮಾನಾಂತರ ಮತ್ತು ಪರಸ್ಪರ ಪೂರಕ ಪ್ರಗತಿ” ಸಾಧಿಸಬೇಕು ಹಾಗೂ ಗಡಿಯಲ್ಲಿ ಶಾಂತಿ ಕಾಪಾಡಬೇಕು ಎಂಬುದು ಚೀನಾದ ವಾದ. ರಾಜಕೀಯ ಮುತ್ಸದ್ದಿತನ, ಪರಸ್ಪರ ಗೌರವ ಮತ್ತು ತಿಳುವಳಿಕೆಯಿಂದ ಮುನಿಸುಗಳನ್ನು ಮರೆತು ಸಂಬಂಧಗಳನ್ನು ವೃದ್ಧಿಸೋಣ ಎಂದು ಚೀನಾ ಪ್ರತಿಪಾದಿಸಿದೆ.

ಭಾರತದ ನಿಲುವು

ಆದರೆ ಭಾರತ ಬಿಡುಗಡೆ ಮಾಡಿರುವ ವರದಿ ತೀರಾ ಭಿನ್ನವಾಗಿದೆ. ಪ್ರಧಾನಿ ಮೋದಿ ಅವರು, ಗಡಿ ಭಾಗದಲ್ಲಿ ಶಾಂತಿ ಮತ್ತು ಸೌಹಾರ್ದತೆ ನೆಲೆಸುವುದು ದ್ವಿಪಕ್ಷೀಯ ಸಂಬಂಧಗಳ ಮುಂದುವರಿಕೆಗೆ ಅತ್ಯಗತ್ಯ ಮತ್ತು ಮೂಲಭೂತ ಆಧಾರ ಎಂದು ಸ್ಪಷ್ಟಪಡಿಸಿದ್ದಾರೆ. ಅಷ್ಟೇ ಅಲ್ಲದೆ, ಗಡಿಗೆ ಸಂಬಂಧಿಸಿದಂತೆ ಈಗಾಗಲೇ ಮಾಡಿಕೊಳ್ಳಲಾಗಿರುವ ಒಪ್ಪಂದಗಳನ್ನು ಎರಡೂ ದೇಶಗಳು ಕಡ್ಡಾಯವಾಗಿ ಪಾಲಿಸಬೇಕು ಎಂದು ಅವರು ಒತ್ತಿಹೇಳಿದ್ದಾರೆ. ಆದರೂ, ಉಭಯ ನಾಯಕರು ಒಟ್ಟಾರೆ ದ್ವಿಪಕ್ಷೀಯ ಹಿತಾಸಕ್ತಿಗಳನ್ನು ಗಮನದಲ್ಲಿಟ್ಟುಕೊಂಡು ಗಡಿ ಸಮಸ್ಯೆಗೆ “ನ್ಯಾಯಯುತ, ಸಮಂಜಸ ಮತ್ತು ಪರಸ್ಪರ ಸ್ವೀಕಾರಾರ್ಹ” ಪರಿಹಾರವನ್ನು ಕಂಡುಕೊಳ್ಳುವ ಬದ್ಧತೆಯನ್ನು ವ್ಯಕ್ತಪಡಿಸಿದ್ದಾರೆ.

ಮುಖ್ಯ ಭಿನ್ನಾಭಿಪ್ರಾಯ ಎಲ್ಲಿದೆ?

ಗಡಿ ವಿವಾದ ಇನ್ನೂ ಬಗೆಹರಿಯದಿದ್ದರೂ, ಅದನ್ನು ಬದಗಿಟ್ಟು ಉಳಿದ ವ್ಯಾಪಾರ ಮತ್ತು ರಾಜತಾಂತ್ರಿಕ ಸಂಬಂಧಗಳನ್ನು ಮುನ್ನಡೆಸಿಕೊಂಡು ಹೋಗಬಹುದು ಎಂದು ಚೀನಾ ಹೇಳುತ್ತಿದೆ.  ಆದರೆ ಭಾರತ ಗಡಿಯಲ್ಲಿ ಮೊದಲು ಶಾಂತಿ ಸ್ಥಾಪನೆಯಾಗಬೇಕು. ಅಲ್ಲಿ ಶಾಂತಿ ಇಲ್ಲದೆ, ಚೀನಾದೊಂದಿಗೆ ಬೇರೆ ಯಾವುದೇ ವ್ಯವಹಾರ ಅಥವಾ ಉತ್ತಮ ಸಂಬಂಧ ಸಾಧ್ಯವೇ ಇಲ್ಲ ಎಂದು ಪ್ರತಿಪಾದಿಸಿದೆ.

ಇದನ್ನೂ ಓದಿ:

2020ರ ಗಲ್ವಾನ್ ಸಂಘರ್ಷದ ನಂತರ ಉಭಯ ದೇಶಗಳ ನಡುವಿನ ಸಂಬಂಧ ತೀರಾ ಹಳಸಿತ್ತು. ಅಂದಿನಿಂದಲೂ ಭಾರತ ಗಡಿಯ ಪರಿಸ್ಥಿತಿಯನ್ನು ದೇಶಗಳ ನಡುವಿನ ಒಟ್ಟಾರೆ ಸಂಬಂಧದಿಂದ ಬೇರ್ಪಡಿಸಲು ಸಾಧ್ಯವಿಲ್ಲ ಎಂಬ ಕಠಿಣ ನಿಲುವನ್ನೇ ತಳೆದಿದೆ. ಆದರೆ ಚೀನಾ ಮಾತ್ರ ಗಡಿ ಸಮಸ್ಯೆಯನ್ನು ನನೆಗುದಿಗೆ ಇಟ್ಟುಕೊಂಡೇ, ದ್ವಿಪಕ್ಷೀಯ ಸಂಬಂಧಗಳನ್ನು ಮುಂದುವರಿಸುವ ಹುನ್ನಾರ ನಡೆಸುತ್ತಿರುವಂತೆ ಕಾಣುತ್ತಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !