ಹೊಸದಿಗಂತ ಡಿಜಿಟಲ್ ಡಸ್ಕ್:
‘ಎಲ್ ನಿನೋ’ ಪರಿಣಾಮ ಇನ್ನಷ್ಟು ತೀವ್ರಗೊಳ್ಳುತ್ತಿದ್ದು, ಅಮೆರಿಕದ ಅಟ್ಲಾಂಟಿಕ್ ಪ್ರದೇಶದಲ್ಲಿ ಈ ವರ್ಷದ ಹ್ಯುರಿಕೇನ್ ಅವಧಿ ಆರಂಭವಾಗಿ 100 ದಿನ ಕಳೆದರೂ ಇದುವರೆಗೆ ಒಂದೇ ಒಂದು ಹ್ಯುರಿಕೇನ್ ಕೂಡ ರೂಪುಗೊಳ್ಳದೇ ಇರುವುದು ಜಾಗತಿಕ ಆತಂಕ ಹೆಚ್ಚಿಸಿದೆ.
ಸಾಮಾನ್ಯವಾಗಿ ಸೆಪ್ಟೆಂಬರ್ ಹ್ಯುರಿಕೇನ್‌ಗಳ ಚಟುವಟಿಕೆ ಗರಿಷ್ಠವಾಗುವ ಅವಧಿಯಾಗಿದ್ದರೂ, ಈ ಬಾರಿ ಮಾತ್ರ ಪರಿಸ್ಥಿತಿ ಸಂಪೂರ್ಣ ಭಿನ್ನವಾಗಿದೆ.
ಇದಕ್ಕೆ ಪ್ರಮುಖ ಕಾರಣ ‘ಎಲ್ ನಿನೋ’ ಎಂದು ಹವಾಮಾನ ತಜ್ಞರು ಸ್ಪಷ್ಟವಾಗಿ ಹೇಳುತ್ತಿದ್ದಾರೆ. ಎಲ್ ನಿನೋ ಪರಿಣಾಮದಿಂದ ಅಟ್ಲಾಂಟಿಕ್‌ನಲ್ಲಿ ಮೇಲ್ಮಟ್ಟದ ಗಾಳಿಯ ವೇಗ ಮತ್ತು ದಿಕ್ಕಿನಲ್ಲಿ ತೀವ್ರ ಬದಲಾವಣೆ ಉಂಟಾಗಿದ್ದು, ಇದನ್ನು ವಿಂಡ್ ಶೇರ್ ಎಂದು ಕರೆಯಲಾಗುತ್ತಿದ್ದು, ಇದರ ಪರಿಣಾಮದಿಂದ ರೂಪುಗೊಳ್ಳಲು ಆರಂಭಿಸುವ ಚಂಡಮಾರುತಗಳು ಬಲಿಷ್ಠವಾಗುವ ಮೊದಲೇ ಚದುರಿಹೋಗುತ್ತಿವೆ. ಜೊತೆಗೆ ಒಣ ಗಾಳಿ ಮತ್ತು ಕೆಳಮುಖ ಗಾಳಿಯ ಪ್ರವಾಹವೂ ಚಂಡಮಾರುತಗಳ ಬೆಳವಣಿಗೆಗೆ ಅಡ್ಡಿಯಾಗುತ್ತಿದೆ.
ಈ ವರ್ಷ ಇದುವರೆಗೆ ಅಟ್ಲಾಂಟಿಕ್‌ನಲ್ಲಿ ಹೆಸರಿಸಬಹುದಾದ ಕೇವಲ ಐದು ಉಷ್ಣವಲಯದ ಬಿರುಗಾಳಿಗಳು ಮಾತ್ರ ದಾಖಲಾಗಿವೆ. ಇದು ಯಾವುದೂ ಕೂಡಾ ಹ್ಯುರಿಕೇನ್ ಮಟ್ಟಕ್ಕೆ ತಲುಪಿಲ್ಲ. ಸಾಮಾನ್ಯವಾಗಿ ಒಂದು ಅಟ್ಲಾಂಟಿಕ್ ಹ್ಯುರಿಕೇನ್ ಅವಧಿಯಲ್ಲಿ ಸುಮಾರು 14 ಹೆಸರಿನ ಬಿರುಗಾಳಿಗಳು, 7 ಹ್ಯುರಿಕೇನ್‌ಗಳು ಮತ್ತು 3 ಪ್ರಮುಖ ಹ್ಯುರಿಕೇನ್‌ಗಳು ಉಂಟಾಗುತ್ತವೆ. ಈ ಬಾರಿ ಪರಿಸ್ಥಿತಿ ಭಿನ್ನವಾಗಿದೆ.
ಈಗ ವಿಶ್ವದ ಸಾಗರಗಳ ನೀರು ಅಸಾಮಾನ್ಯವಾಗಿ ಬಿಸಿಯಾಗಿದ್ದರೂ ಅಟ್ಲಾಂಟಿಕ್‌ನಲ್ಲಿ ಹ್ಯುರಿಕೇನ್ ಚಟುವಟಿಕೆ ಮಾತ್ರ ಕುಂಠಿತವಾಗಿದೆ. ಇದರಿಂದ ಎಲ್ ನಿನೋದ ವಾತಾವರಣದ ಪರಿಣಾಮ ಎಷ್ಟು ಪ್ರಬಲವಾಗಿದೆ ಎಂಬುದು ಸ್ಪಷ್ಟವಾಗುತ್ತದೆ ಎಂದು ತಜ್ಞರು ಹೇಳಿದ್ದಾರೆ.
ಏನಿದು ಹ್ಯುರಿಕೇನ್?
ಹ್ಯುರಿಕೇನ್ ಎಂದರೆ ಸಮುದ್ರದ ಮೇಲೆ ರೂಪುಗೊಳ್ಳುವ ಅತ್ಯಂತ ಬಲಿಷ್ಠ ಉಷ್ಣವಲಯದ ಚಂಡಮಾರುತ. ಸಾಮಾನ್ಯವಾಗಿ ಅಟ್ಲಾಂಟಿಕ್ ಮಹಾಸಾಗರ, ಕ್ಯಾರಿಬಿಯನ್ ಸಮುದ್ರ ಮತ್ತು ಈಶಾನ್ಯ ಪೆಸಿಫಿಕ್ ಪ್ರದೇಶಗಳಲ್ಲಿ ರೂಪುಗೊಳ್ಳುವ ಬಲಿಷ್ಠ ಚಂಡಮಾರುತಗಳಿಗೆ ‘ಹ್ಯುರಿಕೇನ್’ ಎಂಬ ಹೆಸರು ಬಳಸಲಾಗುತ್ತದೆ.
ಇವು ಸಮುದ್ರದ ಮೇಲ್ಮೈಯ ಬಿಸಿಯಾದ ನೀರಿನಿಂದ ಶಕ್ತಿ ಪಡೆಯುತ್ತವೆ. ಬಿಸಿಯಾದ ಸಮುದ್ರದ ನೀರಿನಿಂದ ನೀರಾವಿ ಮೇಲಕ್ಕೆ ಏರಿ, ಅದು ತಣ್ಣಗಾದಾಗ ಬಿಡುಗಡೆಯಾಗುವ ಶಕ್ತಿ ಚಂಡಮಾರುತದ ವ್ಯವಸ್ಥೆಯನ್ನು ಮತ್ತಷ್ಟು ಬಲಪಡಿಸುತ್ತದೆ. ಹೀಗೆ ಚಂಡಮಾರುತದ ಒಳಗೆ ಗಾಳಿಯ ಒತ್ತಡ ಕಡಿಮೆಯಾಗುತ್ತಾ, ಸುತ್ತಮುತ್ತಲಿನ ಗಾಳಿ ವೇಗವಾಗಿ ಕೇಂದ್ರದತ್ತ ಚಲಿಸಲು ಆರಂಭಿಸುತ್ತದೆ. ಹ್ಯುರಿಕೇನ್‌ಗಳ ಕೇಂದ್ರಭಾಗವನ್ನು ಸಾಮಾನ್ಯವಾಗಿ ‘Eye’ ಎಂದು ಕರೆಯಲಾಗುತ್ತದೆ. ಇದರ ಸುತ್ತಲಿರುವ ‘Eyewall’ ಭಾಗದಲ್ಲಿ ಅತ್ಯಂತ ಬಲವಾದ ಗಾಳಿ ಮತ್ತು ಭಾರಿ ಮಳೆ ಕಂಡುಬರುತ್ತದೆ.



