November 10, 2026
Tuesday, November 10, 2026
spot_img

ಪ್ರಧಾನಿ ಮೋದಿ ಕರ್ನಾಟಕ ಪ್ರವಾಸ: ಮೆಟ್ರೋ ಚಾಲನೆ ಸೇರಿ ವಿವಿಧ ಯೋಜನೆಗಳಿಗೆ ಮುಹೂರ್ತ ಫಿಕ್ಸ್

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ಪ್ರಧಾನಿ ನರೇಂದ್ರ ಮೋದಿ ಅವರು ನವೆಂಬರ್ 13ರಂದು ಕರ್ನಾಟಕಕ್ಕೆ ಭೇಟಿ ನೀಡಲಿದ್ದು, ರಾಜಧಾನಿ ಬೆಂಗಳೂರು ಮತ್ತು ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ   ವಿವಿಧ ಅಭಿವೃದ್ಧಿ ಯೋಜನೆಗಳಿಗೆ ಚಾಲನೆ ನೀಡಲಿದ್ದಾರೆ.

ದೆಹಲಿಯಿಂದ ವಿಶೇಷ ಐಎಎಫ್‌ ಬಿಬಿಜೆ ವಿಮಾನದ ಮೂಲಕ ಆಗಮಿಸಲಿರುವ ಪ್ರಧಾನಿಯವರ ಒಂದು ದಿನದ ಭರಪೂರ ಅಧಿಕೃತ ಕಾರ್ಯಕ್ರಮಗಳ ಸಂಪೂರ್ಣ ವೇಳಾಪಟ್ಟಿ ಇಲ್ಲಿದೆ.

ಪ್ರಶಾಂತಿ ಕುಟೀರಂ ಸುವರ್ಣ ಮಹೋತ್ಸವ

ಪ್ರಧಾನಿ ಮೋದಿಯವರು ದೆಹಲಿಯಿಂದ ನೇರವಾಗಿ ಹೆಚ್ಎಎಲ್ (HAL) ವಿಮಾನ ನಿಲ್ದಾಣಕ್ಕೆ ವಾಯುಪಡೆಯ ವಿಶೇಷ ವಿಮಾನದಲ್ಲಿ ಬರಲಿದ್ದಾರೆ. ಅಲ್ಲಿಂದ MI-17 ಹೆಲಿಕಾಪ್ಟರ್ ಮೂಲಕ ಬೆಂಗಳೂರು ಹೆಲಿಪ್ಯಾಡ್-1ಕ್ಕೆ ತಲುಪಲಿದ್ದಾರೆ. ಹೆಲಿಪ್ಯಾಡ್‌ನಿಂದ ರಸ್ತೆ ಮಾರ್ಗವಾಗಿ ತೆರಳಿ, ಪ್ರಶಾಂತಿ ಕುಟೀರಂ ಸಂಸ್ಥೆಯ ಪ್ರತಿಷ್ಠಿತ ಸುವರ್ಣ ಮಹೋತ್ಸವ ಆಚರಣೆಯನ್ನು ಉದ್ಘಾಟಿಸಲಿದ್ದಾರೆ.

ಮೆಟ್ರೋ ಸಂಚಾರಕ್ಕೆ ಚಾಲನೆ, ಐಐಎಂನಲ್ಲಿ ಶಂಕುಸ್ಥಾಪನೆ

ಪ್ರಶಾಂತಿ ಕುಟೀರಂ ಕಾರ್ಯಕ್ರಮ ಮುಗಿಸಿ ಹೆಲಿಪ್ಯಾಡ್-2ಕ್ಕೆ ಬರಲಿರುವ ಮೋದಿ, ಅಲ್ಲಿಂದ ರಸ್ತೆ ಮಾರ್ಗವಾಗಿ ತಾವರೆಕೆರೆ ಮೆಟ್ರೋ ನಿಲ್ದಾಣಕ್ಕೆ ಧಾವಿಸಲಿದ್ದಾರೆ. ಇಲ್ಲಿ ನೂತನ ಮೆಟ್ರೋ ರೈಲು ಸಂಚಾರಕ್ಕೆ ಹಸಿರು ನಿಶಾನೆ ತೋರಲಿದ್ದಾರೆ. ಕೇವಲ ಚಾಲನೆ ನೀಡುವುದಷ್ಟೇ ಅಲ್ಲದೆ, ಪ್ರಧಾನಿಯವರು ತಾವರೆಕೆರೆ ನಿಲ್ದಾಣದಿಂದ ಐಐಎಂ ಬೆಂಗಳೂರು ಮೆಟ್ರೋ ನಿಲ್ದಾಣದವರೆಗೆ ಮೆಟ್ರೋ ರೈಲಿನಲ್ಲಿ ಸ್ವತಃ ಪ್ರಯಾಣ ಬೆಳೆಸಲಿದ್ದಾರೆ.

ಯೋಜನೆಗಳ ಸಮರ್ಪಣೆ

ತದನಂತರ ಐಐಎಂ ಬೆಂಗಳೂರು ಸಭಾಂಗಣದಲ್ಲಿ ಆಯೋಜಿಸಲಾಗಿರುವ ಬೃಹತ್ ಸಮಾರಂಭದಲ್ಲಿ ಭಾಗವಹಿಸಿ, ವಿವಿಧ ಹೊಸ ಮೂಲಸೌಕರ್ಯ ಯೋಜನೆಗಳಿಗೆ ಶಂಕುಸ್ಥಾಪನೆ ನೆರವೇರಿಸಲಿದ್ದಾರೆ ಹಾಗೂ ಮುಕ್ತಾಯಗೊಂಡಿರುವ ಯೋಜನೆಗಳನ್ನು ಉದ್ಘಾಟಿಸಿ ರಾಷ್ಟ್ರಕ್ಕೆ ಸಮರ್ಪಿಸಲಿದ್ದಾರೆ.

ಮೈಸೂರಿನಲ್ಲಿ ‘ಭಾರತ್ ವನ್’, ಕಾಸ್ಮೋಸ್ ಉದ್ಘಾಟನೆ

ಬೆಂಗಳೂರಿನ ಕಾರ್ಯಕ್ರಮಗಳ ಸರಣಿ ಮುಗಿದ ತಕ್ಷಣ ಪ್ರಧಾನಿ ಮೋದಿಯವರು ವಿಶೇಷ ಹೆಲಿಕಾಪ್ಟರ್ ಮೂಲಕ ಮೈಸೂರಿಗೆ ಹಾರಲಿದ್ದಾರೆ. ಮೈಸೂರಿಗೆ ಬಂದಿಳಿದ ನಂತರ ರಸ್ತೆ ಮಾರ್ಗವಾಗಿ ಕೆ.ಸಿ. ಲೇಔಟ್ ಪಾರ್ಕ್‌ಗೆ ಭೇಟಿ ನೀಡಿ, ಅಲ್ಲಿ ಸಜ್ಜಾಗಿರುವ ‘ಭಾರತ್ ವನ್’ಗೆ ಚಾಲನೆ ನೀಡಲಿದ್ದಾರೆ. ಇದರ ಬೆನ್ನಲ್ಲೇ ಮೈಸೂರಿನ ಬಹುನಿರೀಕ್ಷಿತ ‘ಕಾಸ್ಮೋಸ್’ (COSMOS) ವಿಜ್ಞಾನ ಕೇಂದ್ರವನ್ನು ಉದ್ಘಾಟಿಸಲಿದ್ದಾರೆ.

ಇದನ್ನೂ ಓದಿ:

ದೆಹಲಿಗೆ ವಾಪಸ್

ಮೈಸೂರಿನ ಎಲ್ಲಾ ಅಧಿಕೃತ ಕಾರ್ಯಕ್ರಮಗಳು ಮುಕ್ತಾಯಗೊಂಡ ನಂತರ ಪ್ರಧಾನಿಯವರು ಮೈಸೂರು ವಿಮಾನ ನಿಲ್ದಾಣಕ್ಕೆ ತಲುಪಿ, ಅಲ್ಲಿಂದ ಐಎಎಫ್ ಬಿಬಿಜೆ ವಿಮಾನದ ಮೂಲಕ ನೇರವಾಗಿ ದೆಹಲಿಗೆ ನಿರ್ಗಮಿಸಲಿದ್ದಾರೆ. ಒಟ್ಟಾರೆಯಾಗಿ ಪ್ರಧಾನಿಯವರ ಈ ಒಂದು ದಿನದ ಬಿಡುವಿಲ್ಲದ ಪ್ರವಾಸವು ರಾಜ್ಯದ ಸಾರಿಗೆ ಮತ್ತು ವಿಜ್ಞಾನ ಕ್ಷೇತ್ರಕ್ಕೆ ಭಾರೀ ಕೊಡುಗೆ ನೀಡಲಿದೆ.

Must Read

Skip to toolbar