September 13, 2026
Sunday, September 13, 2026
spot_img

‘ಅನ್ನಭಾಗ್ಯ’ ಅಕ್ಕಿ ಅಕ್ರಮ ಸಾಗಾಟಕ್ಕೆ ಯತ್ನ: 15 ಕ್ವಿಂಟಾಲ್ ಅಕ್ಕಿ ಜಪ್ತಿ, ಇಬ್ಬರು ಅರೆಸ್ಟ್

ಹೊಸದಿಗಂತ ವರದಿ ಯಲ್ಲಾಪುರ

ಬಡವರ ಹೊಟ್ಟೆ ತುಂಬಿಸಬೇಕಾದ ಸರ್ಕಾರಿ ‘ಅನ್ನಭಾಗ್ಯ’ ಯೋಜನೆಯ ಅಕ್ಕಿಯನ್ನು ಯಲ್ಲಾಪುರ ಪಟ್ಟಣದ ನೂತನ ನಗರ ಜಡ್ಡಿ ಮಸೀದಿ ಬಳಿ ಶನಿವಾರ ರಾತ್ರಿ ಅಕ್ರಮವಾಗಿ ಸಾಗಾಟ ಮಾಡುತ್ತಿದ್ದ ಇಬ್ಬರು ಆರೋಪಿಗಳನ್ನು ಪೋಲೀಸರು ಕಾರ್ಯಾಚರಣೆ ನಡೆಸಿ ಕಂಬಿ ಎಣಿಸುವಂತೆ ಮಾಡಿದ್ದಾರೆ.


ಖಚಿತ ಮಾಹಿತಿ ಮೇರೆಗೆ ತಹಶೀಲ್ದಾರ್ ಕಚೇರಿ ಸಿಬ್ಬಂದಿ ಹಾಗೂ ಯಲ್ಲಾಪುರ ಪೊಲೀಸ್ ಠಾಣೆ ಸಿಬ್ಬಂದಿ ಜಂಟಿಯಾಗಿ ಟಾಟಾ ಇಂಟ್ರಾ ವಾಹನ ಪರಿಶೀಲಿಸಿದಾಗ 30 ಪ್ಲಾಸ್ಟಿಕ್ ಚೀಲಗಳಲ್ಲಿ ಸುಮಾರು 15 ಕ್ವಿಂಟಲ್ ಅಕ್ಕಿ ಪತ್ತೆಯಾಗಿದೆ. ಇದರ ಮೌಲ್ಯ ಸುಮಾರು 51,000.ಎಂದು ಅಂದಾಜಿಸಲಾಗಿದೆ. ಆಹಾರ ನಿರೀಕ್ಷಕ ರಾಘವೇಂದ್ರ ರಾಮಾ ಗೌಡ ಅವರು ಪರಿಶೀಲಿಸಿ ಇದು ಅನ್ನಭಾಗ್ಯ ಯೋಜನೆಯ ಸರ್ಕಾರಿ ಪಡಿತರ ಅಕ್ಕಿ ಎಂದು ಖಚಿತಪಡಿಸಿದ್ದಾರೆ.


ಈ ಅಕ್ರಮ ಅಕ್ಕಿ ಸಾಗಾಟದ ಹಿಂದೆ ಇದ್ದ ಕಲಘಟಗಿ ತಾಲೂಕಿನ ಗಾಂಧಿನಗರದ ಶಾರೂಕ್ ನಜೀರ ಅಹಮ್ಮದ ನೇಸರಗಿ (31) ಮತ್ತು ಕಲಘಟಗಿ ನಿವಾಸಿ ಶಾನು ರೇಹಮಾನ ಯಾದವಾಡ (30) ಎಂಬ ಇಬ್ಬರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಈ ಇಬ್ಬರ ಮೇಲೂ ‘ಅಗತ್ಯ ವಸ್ತುಗಳ ಕಾಯ್ದೆ-1955’ರ ಕಲಂ 3 ಮತ್ತು 7ರ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !