September 13, 2026
Sunday, September 13, 2026
spot_img

2029ರೊಳಗೆ 21 ರಾಜ್ಯಗಳಲ್ಲಿ UCC: ಅಮಿತ್ ಶಾ ಘೋಷಣೆಯ ಹಿಂದಿದೆ ದೊಡ್ಡ ಪ್ಲ್ಯಾನ್

ಹೊಸದಿಗಂತ ಡಿಜಿಟಲ್ ಡೆಸ್ಕ್:

ಬಿಜೆಪಿ ನೇತೃತ್ವದ ಎನ್‌ಡಿಎ ಆಡಳಿತವಿರುವ ಎಲ್ಲಾ 21 ರಾಜ್ಯಗಳಲ್ಲಿ 2029ರೊಳಗೆ ಏಕರೂಪ ನಾಗರಿಕ ಸಂಹಿತೆ (UCC) ಜಾರಿಗೊಳಿಸುವ ವಿಶ್ವಾಸವಿದೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಹೇಳಿದ್ದಾರೆ.

ವಿವಾಹ, ವಿಚ್ಛೇದನ, ವಾರಸುದಾರಿಕೆ ಹಾಗೂ ದತ್ತು ಸೇರಿದಂತೆ ವೈಯಕ್ತಿಕ ಕಾನೂನುಗಳಿಗೆ ಧರ್ಮದ ಆಧಾರವಿಲ್ಲದೆ ಏಕರೂಪ ನಿಯಮ ರೂಪಿಸುವುದು UCCಯ ಉದ್ದೇಶವಾಗಿದೆ ಎಂದು ಅವರು ತಿಳಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಶಾ, ಈಗಾಗಲೇ ಹಲವು ರಾಜ್ಯಗಳಲ್ಲಿ UCC ಜಾರಿಗೆ ತರಲಾಗಿದೆ. ಎನ್‌ಡಿಎ ಆಡಳಿತದ ಉಳಿದ ರಾಜ್ಯಗಳಲ್ಲೂ 2029ಕ್ಕೂ ಮುನ್ನ ಈ ಕಾನೂನು ಜಾರಿಯಾಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

‘ಶೂನ್ಯ ಸಹಿಷ್ಣುತೆ’ ನೀತಿ ಸ್ಪಷ್ಟ

ಇದೇ ವೇಳೆ ಕೇಂದ್ರ ಸರ್ಕಾರದ ಭದ್ರತಾ ನೀತಿಯನ್ನು ಸಮರ್ಥಿಸಿಕೊಂಡ ಶಾ, ಸರ್ಜಿಕಲ್ ಸ್ಟ್ರೈಕ್, ಏರ್‌ಸ್ಟ್ರೈಕ್ ಹಾಗೂ ಆಪರೇಷನ್ ಸಿಂದೂರ ಮೂಲಕ ಭಯೋತ್ಪಾದನೆಯ ವಿರುದ್ಧ ‘ಶೂನ್ಯ ಸಹಿಷ್ಣುತೆ’ ನೀತಿಯನ್ನು ಸ್ಪಷ್ಟಪಡಿಸಲಾಗಿದೆ ಎಂದರು. 2014ಕ್ಕೂ ಮುನ್ನ ದೇಶ ಭ್ರಷ್ಟಾಚಾರ, ಜಾತೀಯತೆ ಮತ್ತು ಕುಟುಂಬ ರಾಜಕಾರಣದಿಂದ ಬಳಲುತ್ತಿತ್ತು. ಬಿಜೆಪಿ ನೇತೃತ್ವದ ಸರ್ಕಾರ ಅಧಿಕಾರಕ್ಕೆ ಬಂದ ಬಳಿಕ ಕಾರ್ಯಕ್ಷಮತೆ ಆಧಾರಿತ ರಾಜಕೀಯಕ್ಕೆ ಆದ್ಯತೆ ನೀಡಲಾಗಿದೆ ಎಂದು ಹೇಳಿದರು.

ಇದನ್ನೂ ಓದಿ:

ಶೇ.7.8ರಷ್ಟು ಜಿಡಿಪಿ ಬೆಳವಣಿಗೆ

ಆರ್ಥಿಕ ಬೆಳವಣಿಗೆಯನ್ನೂ ಪ್ರಸ್ತಾಪಿಸಿದ ಅವರು, ಭಾರತ ‘Fragile Five’ ಆರ್ಥಿಕತೆಗಳ ಪಟ್ಟಿಯಿಂದ ವಿಶ್ವದ ಪ್ರಮುಖ ಐದು ಆರ್ಥಿಕತೆಗಳ ಸಾಲಿಗೆ ಏರಿದೆ ಎಂದರು. ಪ್ರಸಕ್ತ ಹಣಕಾಸು ವರ್ಷದ ಮೊದಲ ತ್ರೈಮಾಸಿಕದಲ್ಲಿ ಶೇ.7.8ರಷ್ಟು ಜಿಡಿಪಿ ಬೆಳವಣಿಗೆ ಕಂಡಿರುವುದನ್ನೂ ಉಲ್ಲೇಖಿಸಿದರು. ಆರ್ಟಿಕಲ್ 370, ನಕ್ಸಲಿಸಂ ಹಾಗೂ ಈಶಾನ್ಯ ರಾಜ್ಯಗಳಲ್ಲಿನ ದೀರ್ಘಕಾಲದ ಸಮಸ್ಯೆಗಳನ್ನು ಸರ್ಕಾರ ಸಮರ್ಥವಾಗಿ ಎದುರಿಸಿದೆ ಎಂದು ಹೇಳಿದರು.

ಮಣಿಪುರದಲ್ಲಿ 1951ರ ಆಧಾರದಲ್ಲಿ NRC ಜಾರಿಗೆ ತರುವ ಕುರಿತು ಚರ್ಚೆಗಳು ನಡೆಯುತ್ತಿವೆ. ಈ ಬಗ್ಗೆ ಯಾವುದೇ ನಿರ್ಧಾರ ಕೈಗೊಂಡ ಬಳಿಕ ಮಾಹಿತಿ ನೀಡಲಾಗುವುದು ಎಂದ ಶಾ, ಅಕ್ರಮ ವಲಸಿಗರನ್ನು ಗುರುತಿಸಿ ದೇಶದಿಂದ ಹೊರಹಾಕುವ ಸರ್ಕಾರದ ನಿಲುವನ್ನು ಪುನರುಚ್ಚರಿಸಿದರು.

ಸೆ.17ರಿಂದ ‘ಸೇವಾ ಸಂಕಲ್ಪ ಅಭಿಯಾನ’

ಇದೇ ವೇಳೆ ಸೆ.17ರಿಂದ ಅ.17ರವರೆಗೆ ದೇಶಾದ್ಯಂತ ‘ಸೇವಾ ಸಂಕಲ್ಪ ಅಭಿಯಾನ’ ನಡೆಸಲಾಗುವುದು ಎಂದು ಘೋಷಿಸಿದರು. ಪ್ರಧಾನಿ ನರೇಂದ್ರ ಮೋದಿ ಅವರ ಸಾರ್ವಜನಿಕ ಜೀವನದ 25 ವರ್ಷಗಳನ್ನು ಗುರುತಿಸುವ ಈ ಅಭಿಯಾನವನ್ನು ರಾಜ್ಯ, ಜಿಲ್ಲೆ, ಲೋಕಸಭೆ, ವಿಧಾನಸಭೆ ಹಾಗೂ ಬೂತ್ ಮಟ್ಟದಲ್ಲಿ ಹಮ್ಮಿಕೊಳ್ಳಲಾಗುವುದು ಎಂದು ತಿಳಿಸಿದರು.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !