September 13, 2026
Sunday, September 13, 2026
spot_img

ಭದ್ರಾ ನೀರಿಗಾಗಿ ಕದನ: ಸೆ. 15ಕ್ಕೆ ಬಾಡಾ ಕ್ರಾಸ್ ಬಳಿ NH-48 ಹೆದ್ದಾರಿ ಬಂದ್‌!

ಹೊಸದಿಗಂತ ವರದಿ ದಾವಣಗೆರೆ:

ಭದ್ರಾ ಜಲಾಶಯದಿಂದ ಭದ್ರಾ ಮೇಲ್ದಂಡೆಗೆ 3 ಟಿಎಂಸಿ ನೀರು ಹರಿಸುತ್ತಿರುವುದನ್ನು ವಿರೋಧಿಸಿ ಹಾಗೂ ಅಚ್ಚುಕಟ್ಟು ಪ್ರದೇಶಕ್ಕೆ ಮಳೆಗಾಲದ ಬೆಳೆ, ತೋಟದ ಬೆಳೆಗಳಿಗೆ ಪೂರೈಸುವಂತೆ ಒತ್ತಾಯಿಸಿ ಸೆ.15ರಂದು ನಗರದ ಹೊರವಲಯದಲ್ಲಿರುವ ಬಾಡಾ ಕ್ರಾಸ್ ಸಮೀಪದ ರಾಷ್ಟ್ರೀಯ ಹೆದ್ದಾರಿ-48ರಲ್ಲಿ ರಸ್ತೆ ತಡೆ ನಡೆಸಲಾಗುವುದು ಎಂದು ಬಿಜೆಪಿ ಮುಖಂಡ, ಮಾಜಿ ಸಚಿವ ಎಂ.ಪಿ.ರೇಣುಕಾಚಾರ್ಯ ತಿಳಿಸಿದರು.

ನಗರದಲ್ಲಿ ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅಂದು ಬೆಳಿಗ್ಗೆ 10 ಗಂಟೆಗೆ ಜಿಲ್ಲಾ ರೈತರ ಒಕ್ಕೂಟದ ನೇತೃತ್ವದಲ್ಲಿ ನಮ್ಮ ಹಕ್ಕಿನ ನೀರಿಗಾಗಿ ನಡೆಯುವ ಹೋರಾಟದಲ್ಲಿ ರೈತರು ಪಕ್ಷಾತೀತವಾಗಿ ಪಾಲ್ಗೊಳ್ಳಬೇಕು. ಭದ್ರಾ ನೀರಿಗಾಗಿ ನಡೆಯುವ ರೈತಪರ ಹೋರಾಟವನ್ನು ಯಶಸ್ವಿಗೊಳಿಸಬೇಕು ಎಂದರು.

ಮೇಲ್ದಂಡೆಗೆ ಒಟ್ಟು 29.90 ಟಿಎಂಸಿ ನೀರನ್ನು ಬಿಡಬೇಕು. ಅದರಲ್ಲಿ ತುಂಗಾದಿಂದ 17.41 ಟಿಎಂಸಿ ನೀರನ್ನು ಭದ್ರಾ ಡ್ಯಾಂ ಗೆ ಲಿಫ್ಟ್ ಮಾಡಬೇಕು. ಮುತ್ತಿನಕೊಪ್ಪ ಏತ ಯೋಜನೆಯ ಬಾಕಿ ಕಾಮಗಾರಿಗೆ 30 ಕೋಟಿ ಬಿಡುಗಡೆ ಮಾಡಿ, ಕೆಲಸ ಪೂರ್ಣಗೊಳಿಸಿ. 3 ಟಿಎಂಸಿ ನೀರು ಹರಿಸುತ್ತಿರುವ ಸರ್ಕಾರದ ಕ್ರಮದಿಂದ ಅಚ್ಚುಕಟ್ಟು ಜಿಲ್ಲೆಗಳಲ್ಲಿ ಸಂಕಷ್ಟ ಬಂದೊದಗಿದೆ. ಇಂತಹ ಬರದಲ್ಲಿ ರೈತರ ಶಾಪ, ರಕ್ತದ ಕಣ್ಣೀರು ಮುಖ್ಯಮಂತ್ರಿ, ನೀರಾವರಿ ಸಚಿವ ಕಣ್ಣಿಗೆ ಕಾಣುತ್ತಿಲ್ಲವೇ ಎಂದು ಅವರು ಕಿಡಿಕಾರಿದರು.

ಮಾಜಿ ಶಾಸಕ ಎಂ.ಬಸವರಾಜನಾಯ್ಕ, ಚನ್ನಗಿರಿ ಯುವ ಮುಖಂಡ ಮಾಡಾಳ್ ಮಲ್ಲಿಕಾರ್ಜುನ, ರೈತ ಒಕ್ಕೂಟದ ಅಧ್ಯಕ್ಷ ಬಿ.ಎಂ.ಸತೀಶ ಕೊಳೇನಹಳ್ಳಿ, ಮುಖಂಡರಾದ ಬಿ.ಎಸ್.ಜಗದೀಶ, ಚಂದ್ರಶೇಖರ ಪೂಜಾರ್, ಧನಂಜಯ ಕಡ್ಲೇಬಾಳು, ಬಿ.ಜಿ.ಅಜಯಕುಮಾರ, ಪ್ರವೀಣ ಜಾಧವ್, ರಾಜು ವೀರಣ್ಣ, ಕುರ್ಕಿ ರೇವಣ್ಣ, ದಿಗ್ಗೇನಹಳ್ಳಿ ನಾಗರಾಜ, ವಿಶ್ವನಾಥ, ರಾಜು ಗೌಡ್ರು ಇತರರು ಸುದ್ದಿಗೋಷ್ಠಿಯಲ್ಲಿದ್ದರು.

ಭದ್ರಾ ಅಚ್ಚುಕಟ್ಟು ಪ್ರದೇಶಕ್ಕೆ ನೀರು ಒದಗಿಸದ ಜಿಲ್ಲಾ ಉಸ್ತುವಾರಿ ಸಚಿವರು, ಶಾಸಕರು ಸೇರಿದಂತೆ ಜನಪ್ರತಿನಿಧಿಗಳು ನೈತಿಕ ಹೊಣೆ ಹೊತ್ತು ರಾಜೀನಾಮೆ ನೀಡಬೇಕು. ಜಿಲ್ಲೆಯ ಜನಪ್ರತಿನಿಧಿಗಳು ಅಚ್ಚುಕಟ್ಟುದಾರರಿಗೆ ನೀರು ಒದಗಿಸುವ ಇಚ್ಛಾಶಕ್ತಿ ಪ್ರದರ್ಶಿಸುತ್ತಿಲ್ಲ. ನೀರು ದೊರೆಯದೆ ರೈತರು ಕಣ್ಣೀರು ಹಾಕುವಂತಾಗಿದೆ. ಜನಪ್ರತಿನಿಧಿಗಳಿಗೆ ನಿಜವಾಗಿಯೂ ರೈತರ ಪರ ಕಾಳಜಿ ಇದ್ದಲ್ಲಿ ರಾಜೀನಾಮೆ ಕೊಟ್ಟು ನಮ್ಮ ಹೋರಾಟದಲ್ಲಿ ಪಾಲ್ಗೊಳ್ಳಲಿ ಎಂದು ಎಂ.ಪಿ.ರೇಣುಕಾಚಾರ್ಯ ಸವಾಲು ಹಾಕಿದ್ದಾರೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !