September 15, 2026
Tuesday, September 15, 2026
spot_img

ವಿಶ್ವಕಪ್ ತಂದುಕೊಟ್ಟ ನಾಯಕನಿಗೆ ಚಿಕಿತ್ಸೆಯೂ ಇಲ್ಲವೇ? ಇಮ್ರಾನ್ ಆರೋಗ್ಯದ ಬಗ್ಗೆ ಆಸ್ಟ್ರೇಲಿಯಾ ದಿಗ್ಗಜರ ಕಳವಳ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಪಾಕಿಸ್ತಾನಕ್ಕೆ ಏಕದಿನ ವಿಶ್ವಕಪ್ ಗೆದ್ದು ಕೊಟ್ಟು, ಆಮೇಲೆ ದೇಶದ ಪ್ರಧಾನಿಯೂ ಆಗಿದ್ದ ಇಮ್ರಾನ್ ಖಾನ್ ಅವರ ಇವತ್ತಿನ ಸ್ಥಿತಿ ನೋಡಿ ಇಡೀ ಕ್ರಿಕೆಟ್ ಜಗತ್ತೇ ಅಚ್ಚರಿ ಪಡ್ತಿದೆ. ಭ್ರಷ್ಟಾಚಾರದ ಆರೋಪದ ಮೇಲೆ ಜೈಲು ಸೇರಿರೋ ಇಮ್ರಾನ್ ಖಾನ್ ಅವರಿಗೆ ಹುಷಾರಿಲ್ಲದಿದ್ದರೂ, ಪಾಕಿಸ್ತಾನ ಸರ್ಕಾರ ಅವರಿಗೆ ಸರಿಯಾದ ಚಿಕಿತ್ಸೆ ಕೊಡ್ತಿಲ್ಲ ಎಂದು ಅವರ ಕುಟುಂಬದವರು ಕಣ್ಣೀರಿಡ್ತಿದ್ದಾರೆ. ಹೊರಗಡೆ ಇಮ್ರಾನ್ ಖಾನ್ ಹೇಗಿದ್ದಾರೆ ಅನ್ನೋ ಸಣ್ಣ ಸುಳಿವನ್ನು ಕೂಡ ಪಾಕ್ ಸರ್ಕಾರ ಬಿಟ್ಟುಕೊಡ್ತಿಲ್ಲ.

ಈ ವಿಚಾರ ಈಗ ಜಾಗತಿಕ ಮಟ್ಟದಲ್ಲಿ ದೊಡ್ಡ ಸದ್ದು ಮಾಡ್ತಿದೆ. ಮೊನ್ನೆ ಆಗಸ್ಟ್ 23 ರಂದು ವಿಶ್ವದ 22 ಮಾಜಿ ಪ್ರಮುಖ ನಾಯಕರು ಪಾಕ್ ಪ್ರಧಾನಿ ಶಹಬಾಜ್ ಷರೀಫ್‌ಗೆ ಲೇಖನ ಬರೆದು, ಇಮ್ರಾನ್‌ಗೆ ಸೂಕ್ತ ಚಿಕಿತ್ಸೆ ಕೊಡಿ ಅಂತ ಕೇಳಿಕೊಂಡಿದ್ದರು. ಈಗ ಈ ಸಾಲಿಗೆ ಆಸ್ಟ್ರೇಲಿಯಾದ 7 ದಿಗ್ಗಜ ಕ್ರಿಕೆಟರ್ಸ್ ಸೇರಿಕೊಂಡಿದ್ದಾರೆ.

ಅಲನ್ ಬಾರ್ಡರ್, ಗ್ರೆಗ್ ಚಾಪೆಲ್, ಇಯಾನ್ ಚಾಪೆಲ್, ಬೆಲಿಂಡಾ ಕ್ಲಾರ್ಕ್, ಕಿಮ್ ಹ್ಯೂಸ್, ಮಾರ್ಕ್ ಟೇಲರ್ ಮತ್ತು ಸ್ಟೀವ್ ವಾ ಸೇರಿದಂತೆ ಆಸ್ಟ್ರೇಲಿಯಾದ ಮಾಜಿ ನಾಯಕರು ನೇರವಾಗಿ ತಮ್ಮ ವಿದೇಶಾಂಗ ಸಚಿವೆ ಪೆನ್ನಿ ವಾಂಗ್ ಅವರಿಗೆ ಪತ್ರ ಬರೆದಿದ್ದಾರೆ.

ಆಸೀಸ್ ನಾಯಕರು ಇಮ್ರಾನ್ ಅವರ ಕ್ರಿಕೆಟ್ ಸಾಧನೆ ಮತ್ತು ಅವರು ಕಟ್ಟಿಸಿದ ಕ್ಯಾನ್ಸರ್ ಆಸ್ಪತ್ರೆಯ ಸೇವೆಯನ್ನು ನೆನಪಿಸಿಕೊಂಡಿದ್ದಾರೆ. “ಇಮ್ರಾನ್ ಖಾನ್ ಅಂದರೆ ಆಸ್ಟ್ರೇಲಿಯನ್ನರಿಗೆ ಅಪಾರ ಗೌರವ. ಅವರು ಪಾಕಿಸ್ತಾನಕ್ಕೆ ವಿಶ್ವಕಪ್ ತಂದುಕೊಟ್ಟವರು. ಅಷ್ಟೇ ಅಲ್ಲ, ಕ್ಯಾನ್ಸರ್ ಆಸ್ಪತ್ರೆ ಕಟ್ಟಿ ಸಾವಿರಾರು ಜನರ ಪ್ರಾಣ ಉಳಿಸಿದವರು. ಅವರ ಮಕ್ಕಳು ಮತ್ತು ತಂಗಿ ಕಳೆದ ಕೆಲವು ತಿಂಗಳುಗಳಿಂದ ಚಿಕಿತ್ಸೆಗಾಗಿ ಪರದಾಡುತ್ತಿರುವುದನ್ನು ನಾವು ನೋಡುತ್ತಿದ್ದೇವೆ. ಅವರನ್ನು ಭೇಟಿಯಾಗಲು ಬಿಡುತ್ತಿಲ್ಲ, ಸರಿಯಾದ ವೈದ್ಯರು ಸಿಗುತ್ತಿಲ್ಲ. ಇದು ಸರಿಯಲ್ಲ. ಆಸ್ಟ್ರೇಲಿಯಾ ಸರ್ಕಾರ ತಕ್ಷಣ ಪಾಕ್ ಸರ್ಕಾರದ ಜೊತೆ ಮಾತನಾಡಿ ಅವರಿಗೆ ಸೂಕ್ತ ಚಿಕಿತ್ಸೆ ಸಿಗುವಂತೆ ಮಾಡಬೇಕು” ಎಂದು ಪತ್ರದಲ್ಲಿ ವಿನಂತಿಸಿದ್ದಾರೆ.

ಕ್ರಿಕೆಟ್ ಮೈದಾನದಲ್ಲಿ ಎಷ್ಟೇ ಎದುರಾಳಿಗಳಾಗಿದ್ದರೂ, ಕಷ್ಟದ ಸಮಯದಲ್ಲಿ ಒಬ್ಬ ಕ್ರಿಕೆಟರ್ ಪರವಾಗಿ ಇಡೀ ಆಸ್ಟ್ರೇಲಿಯಾದ ದಿಗ್ಗಜರೇ ಒಟ್ಟುಗೂಡಿರುವುದು ನಿಜಕ್ಕೂ ದೊಡ್ಡ ವಿಷಯ. ಈಗಲಾದರೂ ಪಾಕಿಸ್ತಾನ ಸರ್ಕಾರ ಮನಸ್ಸು ಮಾಡಿ ಇಮ್ರಾನ್ ಖಾನ್‌ಗೆ ಸೂಕ್ತ ವೈದ್ಯಕೀಯ ನೆರವು ನೀಡುತ್ತಾ ಎಂಬುದನ್ನು ಕಾದು ನೋಡಬೇಕಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !