ಹೊಸದಿಗಂತ ಡಿಜಿಟಲ್ ಡೆಸ್ಕ್:
ಕ್ರಿಕೆಟ್ ಪ್ರಿಯರಿಗೆ ಇವತ್ತು ಪಕ್ಕಾ ಮಜಾ ಇರಲಿದೆ. ಭಾರತ ಮತ್ತು ಅಫ್ಘಾನಿಸ್ತಾನ ನಡುವಿನ 3 ಪಂದ್ಯಗಳ ಟಿ20 ಸರಣಿಯ 2ನೇ ಹಣಾಹಣಿ ಇವತ್ತು ದೆಹಲಿಯ ಅರುಣ್ ಜೇಟ್ಲಿ ಕ್ರೀಡಾಂಗಣದಲ್ಲಿ ನಡೆಯಲಿದೆ. ಮೊದಲನೇ ಮ್ಯಾಚ್ನಲ್ಲಿ ಭಾರತ ಪಡೆ ಅಫ್ಘಾನ್ ಪಡೆಯನ್ನು ಧೂಳೀಪಟ ಮಾಡಿ 1-0 ಮುನ್ನಡೆ ಕಾಯ್ದುಕೊಂಡಿದ್ದಾರೆ. ಇವತ್ತಿನ ಪಂದ್ಯದಲ್ಲೂ ಗೆದ್ದು ಸರಣಿಯನ್ನು ವಶ ಮಾಡಿಕೊಳ್ಳುವುದು ಟೀಮ್ ಇಂಡಿಯಾ ಪ್ಲಾನ್. ಇನ್ನೊಂದೆಡೆ, ಮೊದಲ ಪಂದ್ಯದಲ್ಲಿ ಪೆಟ್ಟು ತಿಂದಿರೋ ಅಫ್ಘಾನಿಸ್ತಾನ ತಂಡ ಹೇಗಾದರೂ ಮಾಡಿ ಇವತ್ತು ಕಂಬ್ಯಾಕ್ ಮಾಡಿ, ಸರಣಿಯನ್ನು 1-1 ರಿಂದ ಸಮಬಲಗೊಳಿಸಲು ರೆಡಿಯಾಗಿದೆ.
ದೆಹಲಿಯ ಅರುಣ್ ಜೇಟ್ಲಿ ಸ್ಟೇಡಿಯಂ ಎಂದ ತಕ್ಷಣ ನೆನಪಾಗೋದು ಸಣ್ಣ ಬೌಂಡರಿಗಳು. ಈ ಪಿಚ್ ಪಕ್ಕಾ ಬ್ಯಾಟಿಂಗ್ ಪ್ಯಾರಡೈಸ್. ಚೆಂಡು ಬ್ಯಾಟ್ಗೆ ತುಂಬಾ ಚೆನ್ನಾಗಿ ಬರೋದ್ರಿಂದ ಬ್ಯಾಟರ್ಗಳು ಮನಬಂದಂತೆ ಸಿಕ್ಸರ್-ಫೋರ್ಗಳ ಸುರಿಮಳೆ ಹೊಡೆಯೋದು ಖಚಿತ. ಬೌಂಡರಿಗಳು ಚಿಕ್ಕದಾಗಿರೋದ್ರಿಂದ ಬೌಲರ್ಗಳು ಸ್ವಲ್ಪ ಎಡವಿದ್ರೂ ಚೆಂಡು ನೇರವಾಗಿ ಗ್ಯಾಲರಿ ಸೇರುತ್ತೆ. ಹಾಗಾಗಿ ಟಾಸ್ ಗೆದ್ದ ನಾಯಕ ಕಣ್ಣು ಮುಚ್ಚಿಕೊಂಡು ಮೊದಲು ಬೌಲಿಂಗ್ ಆಯ್ಕೆ ಮಾಡಿಕೊಳ್ಳೋದು ಗ್ಯಾರಂಟಿ, ಯಾಕಂದ್ರೆ ಈ ಮೈದಾನದಲ್ಲಿ ಚೇಸಿಂಗ್ ಮಾಡೋದು ತುಂಬಾ ಈಸಿ.
ಪಂದ್ಯಕ್ಕೆ ಮಳೆಯ ಭೀತಿ ಸ್ವಲ್ಪ ಮಟ್ಟಿಗೆ ಕಾಡ್ತಿದೆ. ಹವಾಮಾನ ವರದಿ ಪ್ರಕಾರ ಇವತ್ತು ದೆಹಲಿಯಲ್ಲಿ ಮೋಡ ಕವಿದ ವಾತಾವರಣ ಇರಲಿದ್ದು, ಶೇ. 55 ರಷ್ಟು ಮಳೆಯಾಗುವ ಸಾಧ್ಯತೆ ಇದೆ. ಸಂಜೆ ವೇಳೆ ಜೋರು ಗಾಳಿ ಜೊತೆ ಮಳೆ ಬರೋ ಮುನ್ಸೂಚನೆ ಇದ್ರೂ, ಪಂದ್ಯ ಪೂರ್ತಿಯಾಗಿ ರದ್ದಾಗುವ ಲಕ್ಷಣಗಳಿಲ್ಲ. ಒಂದು ವೇಳೆ ಮಳೆ ಬಂದ್ರೆ ಓವರ್ಗಳನ್ನು ಕಡಿಮೆ ಮಾಡಿ ಪಂದ್ಯ ಮುಂದುವರಿಸಬಹುದು.
ಈ ಹೈ-ವೋಲ್ಟೇಜ್ ಪಂದ್ಯ ಭಾರತೀಯ ಕಾಲಮಾನ ಸಂಜೆ 7:30ಕ್ಕೆ ಶುರುವಾಗಲಿದೆ. ಸೋನಿ ಸ್ಪೋರ್ಟ್ಸ್ ನೆಟ್ವರ್ಕ್ ಚಾನೆಲ್ಗಳಲ್ಲಿ ಪಂದ್ಯವನ್ನು ವೀಕ್ಷಿಸಬಹುದು.



