September 15, 2026
Tuesday, September 15, 2026
spot_img

ಸ್ಟಾರ್ ಪವರ್ ಅಲ್ಲ, ಕಂಟೆಂಟ್ ಮುಖ್ಯ! ‘ಹನುಮಾನ್ ಅಂಶ್’ ಚಮತ್ಕಾರಕ್ಕೆ ಮಾರುಹೋದ ಸೋನು ಸೂದ್!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಬಾಲಿವುಡ್‌ನಲ್ಲಿ ಬಿಗ್ ಬಜೆಟ್ ಸಿನಿಮಾಗಳು, ದೊಡ್ಡ ದೊಡ್ಡ ಹೀರೋಗಳನ್ನಿಟ್ಟುಕೊಂಡು ಕೋಟಿ ಕೋಟಿ ಖರ್ಚು ಮಾಡಿ ಪ್ರಮೋಷನ್ ಮಾಡಿದ್ರೂ ಥಿಯೇಟರ್‌ಗಳು ಖಾಲಿ ಹೊಡೆಯುತ್ತಿರೋ ಕಾಲ ಇದು. ಇಂಥಾ ಸಮಯದಲ್ಲಿ, ಯಾವ ಸೌಂಡೂ ಇಲ್ಲದೆ ಬಂದು ಬಾಕ್ಸಾಫೀಸ್ ಚಿಂದಿ ಉಡಾಯಿಸಿರೋ ಸಿನಿಮಾನೇ ‘ಹನುಮಾನ್ ಅಂಶ್’.

ಪ್ರಸಿದ್ಧ ಆಧ್ಯಾತ್ಮಿಕ ಗುರು ನೀಮ್ ಕರೋಲಿ ಬಾಬಾ ಅವರ ನಿಜ ಜೀವನದ ಕಥೆ ಮತ್ತು ಭಕ್ತರ ನಂಬಿಕೆಯ ಚಮತ್ಕಾರಗಳನ್ನಿಟ್ಟುಕೊಂಡು ಈ ಸಿನಿಮಾ ಮಾಡಲಾಗಿದೆ. ರಿಲೀಸ್ ಆದ ಆರಂಭದಲ್ಲಿ ಈ ಸಿನಿಮಾ ಬಗ್ಗೆ ಯಾರೂ ಅಷ್ಟಾಗಿ ತಲೆಕೆಡಿಸಿಕೊಂಡಿರಲಿಲ್ಲ. ಆದರೆ ದಿನ ಕಳೆಯುತ್ತಿದ್ದಂತೆ, ಜನರ ಬಾಯಿಂದ ಬಾಯಿಗೆ ಹರಡಿದ ಮಾತುಗಳಿಂದ ಥಿಯೇಟರ್‌ಗಳಲ್ಲಿ ಹೌಸ್‌ಫುಲ್ ಬೋರ್ಡ್ ಬೀಳಲು ಶುರುವಾಯ್ತು. ನೋಡ್ತಾ ನೋಡ್ತಾ ಈ ಸಿನಿಮಾ ಬಾಕ್ಸಾಫೀಸ್‌ನಲ್ಲಿ ಬರೊಬ್ಬರಿ 220 ಕೋಟಿಗೂ ಹೆಚ್ಚು ಕಲೆಕ್ಷನ್ ಮಾಡಿ ಎಲ್ಲರ ಹುಬ್ಬೇರಿಸುವಂತೆ ಮಾಡಿದೆ.

ಈ ಅನಿರೀಕ್ಷಿತ ಪವಾಡದ ಬಗ್ಗೆ ರಿಯಲ್ ಹೀರೋ, ಬಾಲಿವುಡ್ ನಟ ಸೋನು ಸೂದ್ ರಿಯಾಕ್ಟ್ ಮಾಡಿದ್ದಾರೆ. “ಹನುಮಾನ್ ಅಂಶ್ ಸಿನಿಮಾ ಇಷ್ಟೊಂದು ದೊಡ್ಡ ಮಟ್ಟದಲ್ಲಿ ಗೆದ್ದಿರೋದು ನನಗೆ ತುಂಬಾ ಖುಷಿ ತಂದಿದೆ. ಈ ಗೆಲುವು ನಮಗೆ ಒಂದು ವಿಷಯ ಸ್ಪಷ್ಟವಾಗಿ ತಿಳಿಸಿಕೊಟ್ಟಿದೆ. ಸಿನಿಮಾ ಓಡೋಕೆ ದೊಡ್ಡ ಬಜೆಟ್, ಸೂಪರ್ ಸ್ಟಾರ್ ಮುಖಗಳು ಅಥವಾ ಆಡಂಬರದ ಮಾರ್ಕೆಟಿಂಗ್ ಬೇಕಿಲ್ಲ. ಜನರ ಮನಸ್ಸಿಗೆ ಮುಟ್ಟುವ, ಆತ್ಮಕ್ಕೆ ಕನೆಕ್ಟ್ ಆಗುವ ಕಂಟೆಂಟ್ ಇದ್ರೆ ಸಾಕು, ಜನ ಖಂಡಿತ ಗೆಲ್ಲಿಸ್ತಾರೆ” ಎಂದು ಹೇಳಿದ್ದಾರೆ.

ಅಷ್ಟೇ ಅಲ್ಲದೆ, ಬಾಲಿವುಡ್ ಮಂದಿಗೆ ಒಂದು ಸಂದೇಶ ಕೊಟ್ಟಿರೋ ಸೋನು, “ಇನ್ಮುಂದೆ ಆದ್ರೂ ನಮ್ಮ ಚಿತ್ರರಂಗ ಬರೀ ಗ್ಲಾಮರ್, ಬಿಲ್ಡಪ್ ಮತ್ತು ಕೇವಲ ಸ್ಟಾರ್ ಪವರ್ ನಂಬಿ ಸಿನಿಮಾ ಮಾಡೋದನ್ನ ಬಿಡಬೇಕು. ಜನರಿಗೆ ರಿಲೇಟ್ ಆಗೋ, ಅವರ ಹೃದಯ ಮುಟ್ಟೋ ಒಳ್ಳೆ ಕಥೆಗಳನ್ನು ಹೇಳೋಕೆ ಶುರು ಮಾಡಬೇಕು. ಈ ಸಿನಿಮಾದ ಗೆಲುವಿನಿಂದ ನಾವೆಲ್ಲರೂ ಕಲಿಯಬೇಕಾದ ದೊಡ್ಡ ಪಾಠ ಅಂದ್ರೆ ಇದೇ” ಎಂದು ಸೀರಿಯಸ್ ಆಗಿ ಟಿಪ್ಸ್ ಕೊಟ್ಟಿದ್ದಾರೆ.

ಒಟ್ಟಿನಲ್ಲಿ, ಯಾವುದೇ ಆಡಂಬರ ಇಲ್ಲದೆ ಬಂದ ‘ಹನುಮಾನ್ ಅಂಶ್’, ಕಂಟೆಂಟ್ ಚೆನ್ನಾಗಿದ್ದರೆ ಪ್ರೇಕ್ಷಕನೇ ನಿಜವಾದ ಸ್ಟಾರ್ ಎಂಬುದನ್ನು ಮತ್ತೊಮ್ಮೆ ಸಾಬೀತು ಮಾಡಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !