ಹೊಸದಿಗಂತ ಡಿಜಿಟಲ್ ಡೆಸ್ಕ್:
ಬಿಸಿಲಿನ ಬೇಗೆಯಿಂದ ಬಳಲುತ್ತಿದ್ದ ಜನಕ್ಕೆ ಈಗ ತಂಪಾದ ಸುದ್ದಿ ಸಿಕ್ಕಿದೆ. ರಾಜ್ಯದಲ್ಲಿ ಮುಂಗಾರು ಮತ್ತೆ ಜೋರಾಗಿದ್ದು, ಭಾರತೀಯ ಹವಾಮಾನ ಇಲಾಖೆ ಹೇಳಿಕೆಯ ಪ್ರಕಾರ, ಮುಂದಿನ 24 ರಿಂದ 48 ಗಂಟೆಗಳ ಕಾಲ ಕರ್ನಾಟಕದಾದ್ಯಂತ ಗಾಳಿ ಸಹಿತ ಭಾರೀ ಮಳೆಯಾಗೋ ಎಲ್ಲಾ ಲಕ್ಷಣಗಳು ಕಾಣಿಸ್ತಿವೆ.
ಕರಾವಳಿ, ಮಲೆನಾಡಲ್ಲಿ ಮಳೆ ಫುಲ್ ಜೋರು
ಕರಾವಳಿ ಕಡೆ ಇರೋ ಮಂಗಳೂರು, ಉಡುಪಿ, ಉತ್ತರ ಕನ್ನಡ ಜಿಲ್ಲೆಯ ಜನ ಸ್ವಲ್ಪ ಎಚ್ಚರದಿಂದ ಇರಬೇಕು. ಯಾಕಂದ್ರೆ ಸಮುದ್ರದಲ್ಲಿ ಗಾಳಿ ವೇಗ ಗಂಟೆಗೆ 30 ರಿಂದ 40 ಕಿಲೋಮೀಟರ್ ಸ್ಪೀಡಲ್ಲಿ ಬೀಸ್ತಿದೆ, ಅಲೆಗಳ ಅಬ್ಬರ ಕೂಡ ಜಾಸ್ತಿ ಇರುತ್ತೆ. ಅದಕ್ಕೆ ಹವಾಮಾನ ಇಲಾಖೆಯವರು ಮೀನುಗಾರರಿಗೆ ಯಾರೂ ಕಡಲಿಗೆ ಇಳಿಯಬೇಡಿ, ಬೋಟ್ ಬದಿಗೆ ಕಟ್ಟಿ ಹಾಕಿ ಎಂದು ವಾರ್ನಿಂಗ್ ಕೊಟ್ಟಿದ್ದಾರೆ.
ಇತ್ತ ಮಲೆನಾಡಿನ ಶಿವಮೊಗ್ಗ, ಚಿಕ್ಕಮಗಳೂರು, ಕೊಡಗು ಮತ್ತೆ ಹಾಸನದ ಬೆಟ್ಟಗುಡ್ಡಗಳ ಪ್ರದೇಶದಲ್ಲಂತೂ ವಾತಾವರಣ ಪೂರ್ತಿ ಕೂಲ್ ಆಗಿದೆ. ಅಲ್ಲಿ ಭಾರಿ ಮಳೆಯಾಗೋ ಸಾಧ್ಯತೆ ಇರೋದ್ರಿಂದ ‘ಯೆಲ್ಲೋ ಅಲರ್ಟ್’ ಘೋಷಣೆ ಮಾಡಿದ್ದಾರೆ.
ಸಿಲಿಕಾನ್ ಸಿಟಿ, ದಕ್ಷಿಣ ಒಳನಾಡಿನಲ್ಲಿ ಹೇಗಿದೆ ವೆದರ್?
ಬೆಂಗಳೂರು, ರಾಮನಗರ, ಕೋಲಾರ, ಮೈಸೂರು, ಮಂಡ್ಯ, ತುಮಕೂರು, ಚಾಮರಾಜನಗರ ಕಡೆ ಇವತ್ತು ದಿನಪೂರ್ತಿ ಮೋಡ ಮುಸುಕಿದ ವಾತಾವರಣ ಇರಲಿದೆ. ಸಂಜೆ ಅಥವಾ ರಾತ್ರಿ ಹೊತ್ತಿಗೆ ಸಾಧಾರಣದಿಂದ ಉತ್ತಮ ಮಳೆಯಾಗಲಿದೆ.
ಉತ್ತರ ಕರ್ನಾಟಕದಲ್ಲೂ ಗುಡುಗು ಸಿಡಿಲು ಸೌಂಡ್!
ಬೆಳಗಾವಿ, ಧಾರವಾಡ, ಹಾವೇರಿ, ಗದಗ, ವಿಜಯಪುರ, ಬಾಗಲಕೋಟೆ, ಕಲಬುರಗಿ, ಯಾದಗಿರಿ ಮತ್ತು ಬಳ್ಳಾರಿ ಕಡೆ ಬಿಸಿಲು ಕಮ್ಮಿಯಾಗಿ, ಸಿಡಿಲು-ಗುಡುಗು ಸಹಿತ ಮಳೆ ಬರೋ ಮುನ್ಸೂಚನೆ ಇದೆ. ಜೋರಾಗಿ ಗಾಳಿ ಕೂಡ ಬೀಸೋದ್ರಿಂದ ತೋಟದ ಕೆಲಸ ಅಥವಾ ಹೊಲದ ಕೆಲಸಕ್ಕೆ ಹೋಗೋ ರೈತರು ಹಾಗೂ ಸಾರ್ವಜನಿಕರು ಸಿಡಿಲು ಬರೋವಾಗ ಮರದ ಕೆಳಗೆ ನಿಲ್ಲದೆ ಸುರಕ್ಷಿತ ಜಾಗದಲ್ಲಿ ಇರೋದು ಬಹಳ ಮುಖ್ಯ.



