September 15, 2026
Tuesday, September 15, 2026
spot_img

ಶಿವಮೊಗ್ಗದ ಫೇಮಸ್‌ ಜ್ಯೂಸ್‌ ಅಂಗಡಿಗೆ ಎಸಿ ಡಾ. ಮೈತ್ರಿ ದಿಢೀರ್‌ ಭೇಟಿ: ಹುಳಗಳು ಪತ್ತೆ!

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಶಿವಮೊಗ್ಗದ ಜನರ ಫೇವರೆಟ್‌ ಜ್ಯೂಸ್‌ ಕಾರ್ನರ್‌ ತನು ಜ್ಯೂಸ್‌ ಸೆಂಟರ್‌ ಹಾಗೂ ಕಬಾಬ್‌ ಶಾಪ್‌ಗಳಿಗೆ ಮಂಗಳವಾರ ಶಿವಮೊಗ್ಗ ಉಪ ವಿಭಾಗಾಧಿಕಾರಿ‌ ಡಾ.ಮೈತ್ರಿ ಅವರು ದಿಢೀರ್‌ ಭೇಟಿ ನೀಡಿದ್ದಾರೆ.

ಜ್ಯೂಸ್‌ಸೆಂಟರ್‌ನಲ್ಲಿ ಹುಳುಗಳು ಹಾಗೂ ಕಬಾಬ್‌ ಸೆಂಟರ್‌ನಲ್ಲಿ ಆರ್ಟಿಫಿಶಿಯಲ್‌ ಬಣ್ಣಗಳನ್ನು ಬಳಕೆ ಮಾಡಿದ ಕಾರಣ ನೊಟೀಸ್‌ ನೀಡಿದ್ದು, ಅಂಗಡಿಗಳನ್ನು ಬಂದ್‌ ಮಾಡಿಸಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದೆ. ತಿಲಕ್‌ ನಗರದ ವಿವಿಧ ಜ್ಯೂಸ್‌ ಸೆಂಟರ್‌ಗಳಿಗೆ ಹಾಗೂ ಕಬಾಬ್‌ ಕಾರ್ನರ್‌ಗಳಿಗೆ ದಿಢೀರ್‌ ಭೇಟಿ ನೀಡಿ ಪರಿಶೀಲನೆ ಮಾಡಲಾಗಿದೆ.

ಎಕ್ಸ್‌ಪೈರ್‌ ಆದ ಪದಾರ್ಥಗಳನ್ನು ಬಳಕೆ ಮಾಡುವಂತಿಲ್ಲ, ವಸ್ತುಗಳ ಗುಣಮಟ್ಟ ಕಾಯ್ದುಕೊಳ್ಳಬೇಕು ಎಂದು ಮಾಲೀಕರಿಗೆ ತಾಕೀತು ಮಾಡಿದ್ದಾರೆ. ನಂತರ ತಿಲಕ್ ನಗರಲ್ಲಿ ಹಲವು ವರ್ಷಗಳಿಂದ ಕಾರ್ಯ ನಿರ್ವಹಿಸುತ್ತಿದ್ದ ತನು ಜ್ಯೂಸ್ ಸೆಂಟರ್​​ಗೆ ಭೇಟಿ ನೀಡಿ ಪರಿಶೀಲಿಸಿದರು. ಈ ವೇಳೆ ಹಣ್ಣಿನಲ್ಲಿ ಹುಳ‌ ಕಂಡುಬಂದಿತು. ನಂತರ ತಿಲಕ್ ನಗರದಲ್ಲಿಯೇ ರಾಘವೇಂದ್ರ ಸ್ವಾಮಿ ಮಠದ ಮುಂದೆ ಇರುವ ಇನ್ನೂಂದು ತನು ಜ್ಯೂಸ್ ಸೆಂಟರ್​ಗೂ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಈ ವೇಳೆ ಇಲ್ಲೂ ಸಹ ಹಣ್ಣಿನಲ್ಲಿ ಹುಳ ಕಂಡುಬಂದಿತು. ಇದರಿಂದ ತಕ್ಷಣ ತಮ್ಮೂಂದಿಗೆ ಬಂದಿದ್ದ ತಹಶೀಲ್ದಾರ್ ರಾಜೀವ್ ಹಾಗೂ ಆರೋಗ್ಯ ಇಲಾಖೆಯ ಅಧಿಕಾರಿಗಳಿಗೆ ಎರಡು ಜ್ಯೂಸ್ ಸೆಂಟರ್​​ ಅನ್ನು ಬಂದ್​​ ಮಾಡಿಸಿ, ನೋಟಿಸ್ ನೀಡುವಂತೆ ಸೂಚಿಸಿದರು.

ಸಾರ್ವಜನಿಕರಿಂದ ದೂರು

ಜ್ಯೂಸ್‌ ಕುಡಿಯೋಕೆ ಬಂದ ಜನ ಕೊಳೆತ ಹಣ್ಣುಗಳ ಬಳಕೆ ಆಗ್ತಿದೆ ಎಂದು ದೂರು ನೀಡಿದ್ರು. ಅದು ಸತ್ಯವೇ ಆಗಿತ್ತು. ಇದು ತುಂಬಾ ಜನ ಬರುವ ಜ್ಯೂಸ್‌ ಜಾಯಿಂಟ್‌. ಇಲ್ಲಿನ ವಾತಾವರಣ ನೋಡಿ ಶಾಕ್‌ ಆಯ್ತು. ಫಂಗಸ್‌ ಕೂಡ ಇದೆ, ಕೊಳೆತ ಹಣ್ಣುಗಳಿವೆ. ನೊಟೀಸ್‌ ನೀಡಿದ್ದೇವೆ. ಹಣ್ಣುಗಳು ಬಹಳ ದಿನಗಳಿಂದ ಸಂಗ್ರಹವಾಗಿವೆ. ಇನ್ನು ಹೋಟೆಲ್​​ಗಳಿಗೆ ಹೋದಾಗ ಲೈಸನ್ಸ್ ಕಾಣುವ ಹಾಗೆ ಹಾಕಿಲ್ಲ. ಎಲ್ಲೂ ಸ್ವಚ್ಛತೆ ಕಾಪಾಡಿಕೊಂಡಿಲ್ಲ. ಹೋಟೆಲ್​​ಗಳಲ್ಲಿ ಎಲ್ಲೂ ಸಹ ಆಹಾರ ಸುರಕ್ಷತೆಯ ನಿಯಮಗಳನ್ನು ಪಾಲಿಸಿಲ್ಲ. ಲೋಪದೋಷಗಳು ಕಂಡುಬಂದ ಕಡೆ ನೋಟಿಸ್ ಜಾರಿ ಮಾಡುತ್ತೇವೆ. ಅವರು ಅದಕ್ಕೆ 15 ದಿನದ ಒಳಗೆ ಉತ್ತರ ಕೊಡದೇ ಹೋದ್ರೆ, ಅವರ ಅಂಗಡಿಯ ಲೈಸನ್ಸ್ ರದ್ದು ಮಾಡಲಾಗುತ್ತದೆ ಎಂದು ಅವರು ಎಚ್ಚರಿಕೆ ನೀಡಿದರು.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !