ಹೊಸದಿಗಂತ ಡಿಜಿಟಲ್ ಡೆಸ್ಕ್:
ಬೆಂಗಳೂರಿನ ಇತಿಹಾಸಕ್ಕೆ, ಹಸಿರಿಗೆ ಹೇಳಿ ಮಾಡಿಸಿದಂತಿರುವ ಜಯನಗರ ನಾಲ್ಕನೇ ಬ್ಲಾಕ್‌ನ ಸ್ಥಿತಿ ನೋಡ್ತಾ ಇದ್ರೆ ಅಸಹ್ಯ ಆಗುತ್ತಿದೆ ಎಂದು ಬೆಂಗಳೂರು ನಗರಾಭಿವೃದ್ಧಿ ಸಚಿವ ಕೃಷ್ಣ ಭೈರೇಗೌಡ ಹೇಳಿದ್ದಾರೆ. ಇದರ ಜತೆಗೆ ಪೊಲೀಸರು ಜಪ್ತಿ ಮಾಡಿದ ವಾಹನಗಳನ್ನು ಪೊಲೀಸ್ ಠಾಣೆಯಿಂದ ಬೆಂಗಳೂರಿನ ಹೊರವಲಯಕ್ಕೆ ಸಾಗಿಸುವ ಅಭಿಯಾನಕ್ಕೆ ಸಚಿವರು ಚಾಲನೆ ನೀಡಿದ್ದಾರೆ.
ನಿತ್ಯವೂ ಏನೆಲ್ಲಾ ಸಮಸ್ಯೆ ಆಗುತ್ತಿದೆಯೋ ಅದನ್ನು ಹೋಗಲಾಡಿಸಲು ಪ್ರಯತ್ನ ಪಡುತ್ತಿದ್ದೇವೆ. ಈಗಾಗಲೇ ಫುಟ್‌ಪಾತ್ ಕ್ಲಿಯರ್ ಆಗಿದೆ. ಅನಾಥವಾಗಿ ಬಿದ್ದ ವಾಹನಗಳ ಟೋಯಿಂಗ್ ಆಗುತ್ತಿದೆ. ಜೊತೆಗೆ ಉಳಿದ ಡೆಬರಿಸ್ ತೆರವು ಕೂಡ ಮಾಡುತ್ತಿದ್ದೇವೆ. ಇದರ ಜೊತೆಗೆ ಪೊಲೀಸ್ ಇಲಾಖೆ ಹಾಗೂ ಕಂದಾಯ ಇಲಾಖೆ ಸಹಯೋಗದೊಂದಿಗೆ, ಹತ್ತಾರು ವರ್ಷಗಳಿಂದ ಜಪ್ತಿಯಾಗಿರುವ ವಾಹನಗಳನ್ನ ತೆರವು ಮಾಡುವ ಕಾರ್ಯಕ್ಕೆ ಚಾಲನೆ ನೀಡಲಾಗಿದೆ.
ಪೊಲೀಸ್ ಠಾಣೆಯ ಬಳಿ ನೂರಾರು ವಾಹನಗಳು ನಿಂತಿವೆ. ಓಡಾಟಕ್ಕೆ ತೊಂದರೆಯಾಗುತ್ತಿದೆ ಎಂದು ಜನರು ದೂರಿದ್ದರು. ಅದನ್ನು ನೋಡೋಕೆ ಬಂದಾಗ ಅಸಹ್ಯವಾಗುವಂತಹ ವಾತಾವರಣ ಇತ್ತು. ಜಪ್ತಿಯಾಗಿರುವ ವಾಹನಗಳನ್ನು ತೆರವು ಮಾಡಿ ಓಡಾಡಲು ಜಾಗಮಾಡಿಕೊಡಿ ಎಂದು ಶಾಸಕರು, ಸಂಸದರು ಮನವಿ ಮಾಡಿದ್ದರು. ಹೀಗಾಗಿ ಎರಡು ತಿಂಗಳಿಂದ ಇದಕ್ಕೆ ಬೇಕಾದ ಪೂರ್ವಭಾವಿ ಸಭೆ ಮಾಡಿದ್ದೆವು.
ಕೋರ್ಟ್ ಕೇಸ್‌ನಲ್ಲಿ ಸಿಲುಕಿರುವ ಕಾರಣ ವಿಶೇಷ ಮನವಿ ಮಾಡಿ ಕ್ಲಿಯರ್ ಮಾಡುವುದಕ್ಕೆ ಹೇಳಿದ್ದೆವು. ಜಾಗ ಕ್ಲಿಯರ್ ಮಾಡೋಕೆ ಸಮಸ್ಯೆ ಇಲ್ಲ. ಆದರೆ ಈ ವಾಹನಗಳನ್ನು ಎಲ್ಲಿ ಪಾರ್ಕ್ ಮಾಡೋದು ಎಂದು ಪೊಲೀಸರು ಪ್ರಶ್ನಿಸಿದ್ದರು. ಇದೀಗ ಕಂದಾಯ ಇಲಾಖೆಯ ಬಳಿ ಮನವಿ ಮಾಡಿ ಏಳು ಕಡೆ 26 ಎಕರೆ ಜಾಗ ನೀಡಿದ್ದಾರೆ. ಇವತ್ತಿನಿಂದ ಶಿಫ್ಟ್ ಮಾಡೋ ಕಾರ್ಯ ನಡೆಯಲಿದೆ, 11,346 ಗಾಡಿಗಳು ಪೊಲೀಸ್ ಇಲಾಖೆಯ ಸುತ್ತ ನಿಂತಿವೆ ಎಂದು ಕೃಷ್ಣ ಬೈರೇಗೌಡ ಹೇಳಿದರು.



