ಹೊಸದಿಗಂತ ವರದಿ ರಾಮನಗರ:
ಶಾಲೆಯ ಮೆಟ್ಟಿಲು ಹತ್ತಿ ಅಕ್ಷರ ಕಲಿಸಿದ ಗುರುಗಳು… ಬದುಕಿನ ದಾರಿಯಲ್ಲಿ ಹೆಜ್ಜೆ ಇಡಲು ಮಾರ್ಗದರ್ಶನ ನೀಡಿದ ಶಿಕ್ಷಕರು… ವರ್ಷಗಳು ಉರುಳಿದರೂ ಮನದಾಳದಲ್ಲಿ ಅಚ್ಚಳಿಯದೆ ಉಳಿದ ಆ ಗುರುಗಳ ನೆನಪನ್ನು ಹೊತ್ತು ಬಂದ ಹಳೆಯ ವಿದ್ಯಾರ್ಥಿಗಳು.
ಬರೋಬ್ಬರಿ 34 ವರ್ಷಗಳ ಬಳಿಕ ಗುರುಗಳ ಮುಂದೆ ಶಿಷ್ಯರು ಮತ್ತೊಮ್ಮೆ ವಿದ್ಯಾರ್ಥಿಗಳಾಗಿ ನಿಂತು ಗೌರವ ಸಮರ್ಪಿಸಿದ ಅಪೂರ್ವ ಕ್ಷಣಕ್ಕೆ ತಾಲೂಕಿನ ಬನ್ನಿಕುಪ್ಪೆ (ಕೆ) ಗ್ರಾಮದ ಶ್ರೀ ಕೆಂಗಲ್ ಆಂಜನೇಯಸ್ವಾಮಿ ಗ್ರಾಮಾಂತರ ಪ್ರೌಢಶಾಲೆ ಸಾಕ್ಷಿಯಾಯಿತು.
ಶಾಲೆಯಲ್ಲಿ 1990-93ನೇ ಬ್ಯಾಚ್ನಲ್ಲಿ ವ್ಯಾಸಂಗ ಮಾಡಿದ ವಿದ್ಯಾರ್ಥಿಗಳು ತಮಗೆ ಅಂದು ಬೋಧನೆ ಮಾಡಿದ ನಿವೃತ್ತ ಹಾಗೂ ಹಿರಿಯ ಶಿಕ್ಷಕರನ್ನು ಒಂದೆಡೆ ಸೇರಿಸಿ, ಗುರುವಂದನೆ ಹಾಗೂ ಸನ್ಮಾನ ಕಾರ್ಯಕ್ರಮವನ್ನು ಶಾಲಾ ಆವರಣದಲ್ಲಿ ಅರ್ಥಪೂರ್ಣವಾಗಿ ಆಯೋಜಿಸುವ ಮೂಲಕ ಗುರು–ಶಿಷ್ಯ ಸಂಬಂಧದ ಮೌಲ್ಯವನ್ನು ಸಾರಿದರು.
34 ವರ್ಷಗಳ ಹಿಂದಿನ ನೆನಪುಗಳಿಗೆ ಮರುಜೀವ
ಕಾರ್ಯಕ್ರಮದಲ್ಲಿ ಅಂದು ದೈಹಿಕ ಶಿಕ್ಷಕರಾಗಿ ಸೇವೆ ಸಲ್ಲಿಸಿದ್ದ 81 ವರ್ಷದ ಬಿ.ಸಿದ್ದಪ್ಪ ಅವರು ತಮ್ಮ ಸೇವಾ ಅವಧಿಯ ನೆನಪುಗಳನ್ನು ಮೆಲುಕು ಹಾಕಿದರು. ಬರೋಬ್ಬರಿ 34 ವರ್ಷಗಳ ಕಾಲ ಶಿಕ್ಷಣ ಕ್ಷೇತ್ರದಲ್ಲಿ ಸಲ್ಲಿಸಿದ ಸೇವೆ, ವಿದ್ಯಾರ್ಥಿಗಳೊಂದಿಗೆ ಬೆಸೆದುಕೊಂಡಿದ್ದ ಆತ್ಮೀಯ ಒಡನಾಟ ಹಾಗೂ ಅಂದಿನ ಶಾಲಾ ದಿನಗಳ ಸ್ಮರಣೆಯನ್ನು ಹಂಚಿಕೊಂಡ ಅವರು, ಹಳೆಯ ವಿದ್ಯಾರ್ಥಿಗಳನ್ನು ಮತ್ತೊಮ್ಮೆ ಒಂದೇ ವೇದಿಕೆಯಲ್ಲಿ ನೋಡುವ ಅವಕಾಶ ದೊರೆತಿರುವುದು ಸಂತಸ ತಂದಿದೆ ಎಂದು ಭಾವನಾತ್ಮಕವಾಗಿ ನುಡಿದರು.
ಇದನ್ನೂ ಓದಿ:
ನಿವೃತ್ತ ಶಿಕ್ಷಕ ಬಿ.ಜಿ.ಪುಟ್ಟಸ್ವಾಮಿಗೌಡ ಅವರು ತಮ್ಮ 32 ವರ್ಷಗಳ ಸೇವಾ ಅವಧಿಯನ್ನು ಸ್ಮರಿಸಿಕೊಂಡು, ಶಿಕ್ಷಕ ವೃತ್ತಿಯಲ್ಲಿದ್ದಾಗ ವಿದ್ಯಾರ್ಥಿಗಳೊಂದಿಗೆ ಬೆಳೆಸಿಕೊಂಡಿದ್ದ ಆತ್ಮೀಯ ಸಂಬಂಧವನ್ನು ನೆನಪಿಸಿಕೊಂಡರು. ಹಳೆಯ ವಿದ್ಯಾರ್ಥಿಗಳು ಇಷ್ಟು ವರ್ಷಗಳ ಬಳಿಕವೂ ತಮ್ಮ ಗುರುಗಳನ್ನು ನೆನಪಿಸಿಕೊಂಡು ಗೌರವಿಸುತ್ತಿರುವುದು ಶಿಕ್ಷಕ ವೃತ್ತಿಯ ಸಾರ್ಥಕತೆಯನ್ನು ಮತ್ತಷ್ಟು ಹೆಚ್ಚಿಸಿದೆ ಎಂದು ಅಭಿಪ್ರಾಯಪಟ್ಟರು.
ಕನಕಪುರದ ಆರ್ ಇಎಸ್ ಶಿಕ್ಷಣ ಸಂಸ್ಥೆಯ ಕೃಷಿ ಪದವೀಧರ ವಿಭಾಗದ ಪ್ರಾಧ್ಯಾಪಕ, ಆಡಳಿತಾಧಿಕಾರಿ ಡಾ.ಟಿ.ಬಿ.ಪುಟ್ಟರಾಜು ವಿಶೇಷ ಉಪನ್ಯಾಸ ನೀಡಿದರು.
ಗುರುಗಳ ಪಾದಕ್ಕೆ ಶಿಷ್ಯರ ಗೌರವ:
ನಿವೃತ್ತ ಶಿಕ್ಷಕರಾದ ಬಿ.ಸಿದ್ದಪ್ಪ, ಬಿ.ಜಿ.ಪುಟ್ಟಸ್ಬಾಮಿಗೌಡ, ಶಂಕರಪ್ಪ, ನಿವೃತ್ತ ಗ್ರಂಥಪಾಲಕ ಆನಂದಗಿರಿಯಪ್ಪ ಸೇರಿದಂತೆ ಹಿರಿಯ ಶಿಕ್ಷಕರನ್ನು ಹಳೆಯ ವಿದ್ಯಾರ್ಥಿಗಳು ಆತ್ಮೀಯವಾಗಿ ಅಭಿನಂದಿಸಿ ಸನ್ಮಾನಿಸಿದರು. ಇತ್ತೀಚೆಗಷ್ಟೇ ನಿವೃತ್ತರಾದ ಎಸ್.ಪಿ.ಅಪ್ಪಾಜಿಗೌಡ, ಶ್ರೀನಿವಾಸ್ ಸೇರಿದಂತೆ ಹಲವು ಶಿಕ್ಷಕರನ್ನೂ ಗೌರವಿಸಲಾಯಿತು.
ವರ್ಷಗಳ ಹಿಂದೆ ತಮಗೆ ಜ್ಞಾನಧಾರೆ ಹರಿಸಿ, ಶಿಸ್ತು–ಸಂಸ್ಕಾರ ಹಾಗೂ ಬದುಕಿನ ಮೌಲ್ಯಗಳನ್ನು ಕಲಿಸಿದ ಗುರುಗಳಿಗೆ ಹಳೆಯ ವಿದ್ಯಾರ್ಥಿಗಳು ಗೌರವ ಸಮರ್ಪಿಸಿದ ಸಂದರ್ಭ ಭಾವುಕತೆಗೆ ಸಾಕ್ಷಿಯಾಯಿತು. ಗುರುಗಳ ಸೇವೆಯನ್ನು ಸ್ಮರಿಸುತ್ತಾ, ಅವರೊಂದಿಗೆ ಕಳೆದ ಶಾಲಾ ದಿನಗಳ ನೆನಪುಗಳನ್ನು ಹಂಚಿಕೊಂಡ ಹಳೆಯ ವಿದ್ಯಾರ್ಥಿಗಳ ಮುಖದಲ್ಲಿ ಸಂತಸದ ಹೊಳಪು ಮೂಡಿತ್ತು.
168 ಮಕ್ಕಳಿಗೆ ಶೂ–ಸಾಕ್ಸ್ ಕೊಡುಗೆ:
ಗುರುವಂದನೆ ಕಾರ್ಯಕ್ರಮವನ್ನು ಕೇವಲ ಸನ್ಮಾನಕ್ಕೆ ಸೀಮಿತಗೊಳಿಸದೆ, ಹಳೆಯ ವಿದ್ಯಾರ್ಥಿಗಳು ಸಮಾಜಮುಖಿ ಕಾರ್ಯಕ್ಕೂ ಮುಂದಾದರು. ಶಾಲೆಯಲ್ಲಿ ವ್ಯಾಸಂಗ ಮಾಡುತ್ತಿರುವ 168 ವಿದ್ಯಾರ್ಥಿಗಳಿಗೂ ಶೂ ಮತ್ತು ಸಾಕ್ಸ್ಗಳನ್ನು ಕೊಡುಗೆಯಾಗಿ ನೀಡುವ ಮೂಲಕ ವಿದ್ಯಾರ್ಥಿಗಳ ಶಿಕ್ಷಣದ ಜೊತೆಗೆ ಅವರ ಅಗತ್ಯಗಳಿಗೂ ಸ್ಪಂದಿಸಿದರು.
ಹಳೆಯ ವಿದ್ಯಾರ್ಥಿಗಳ ಈ ಕಾರ್ಯವು ಶಾಲೆಯ ಹಾಲಿ ವಿದ್ಯಾರ್ಥಿಗಳಲ್ಲಿ ಸಂತಸ ಮೂಡಿಸಿತು. ತಾವು ಕಲಿತ ಶಾಲೆಯೊಂದಿಗಿನ ಬಾಂಧವ್ಯವನ್ನು ಮುಂದುವರಿಸಿಕೊಂಡು, ಮುಂದಿನ ಪೀಳಿಗೆಯ ವಿದ್ಯಾರ್ಥಿಗಳಿಗೂ ನೆರವಾಗುವ ಮೂಲಕ 1990-93ನೇ ಬ್ಯಾಚ್ ವಿದ್ಯಾರ್ಥಿಗಳು ಮಾದರಿಯಾದರು.
ಗುರುಗಳ ಆಶೀರ್ವಾದವೇ ಶಿಷ್ಯರ ಸಂಪತ್ತು
ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಹಳೆಯ ವಿದ್ಯಾರ್ಥಿಗಳು, ತಮ್ಮ ಜೀವನದ ಯಶಸ್ಸಿನ ಹಿಂದೆ ಶಾಲೆಯ ಶಿಕ್ಷಕರು ನೀಡಿದ ಶಿಕ್ಷಣ, ಮಾರ್ಗದರ್ಶನ, ಶಿಸ್ತು ಮತ್ತು ಸಂಸ್ಕಾರದ ಮಹತ್ವವನ್ನು ಸ್ಮರಿಸಿದರು. ಕಾಲ ಬದಲಾಗಬಹುದು, ವಿದ್ಯಾರ್ಥಿಗಳು ಬದುಕಿನಲ್ಲಿ ಎತ್ತರಕ್ಕೆ ಏರಬಹುದು; ಆದರೆ ಬಾಲ್ಯದಲ್ಲಿ ದಾರಿ ತೋರಿದ ಗುರುಗಳ ಸ್ಥಾನ ಮಾತ್ರ ಎಂದಿಗೂ ಬದಲಾಗುವುದಿಲ್ಲ ಎಂಬ ಸಂದೇಶ ಕಾರ್ಯಕ್ರಮದ ಮೂಲಕ ಅನಾವರಣಗೊಂಡಿತು.
ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಎಲ್ಲರಿಗೂ ಕುಂಬಾಪುರದ ರೇಣುಕ ಅವರು ಆತ್ಮೀಯವಾಗಿ ಒಬ್ಬಟ್ಟು ಭೋಜನದ ವ್ಯವಸ್ಥೆ ಮಾಡಿದ್ದರು. 1990-93ನೇ ಬ್ಯಾಚ್ನ ಎಲ್ಲ ವಿದ್ಯಾರ್ಥಿಗಳು ಕಾರ್ಯಕ್ರಮದ ಯಶಸ್ಸಿಗೆ ವಿವಿಧ ರೀತಿಯಲ್ಲಿ ಕೈಜೋಡಿಸಿದರು.
ಶಾಲೆಯ ಆಡಳಿತ ಮಂಡಳಿ ಅಧ್ಯಕ್ಷ ಶಿವಲಿಂಗಯ್ಯ, ಕಾರ್ಯದರ್ಶಿ ಚಿಕ್ಕಬೈರೇಗೌಡ, ಮುಖ್ಯಶಿಕ್ಷಕ ಹೆಚ್.ಡಿ.ಶಿವಕುಮಾರಸ್ವಾಮಿ, ಸಹ ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.



