October 8, 2026
Thursday, October 8, 2026
spot_img

ಬಡವರಿಗೆ ಜಾಗ, ಜನರ ಅರ್ಜಿಗೆ ವೇಗ: ಜಿಲ್ಲಾಧಿಕಾರಿಗಳಿಗೆ ಉಪ ಮುಖ್ಯಮಂತ್ರಿ ಜಿ. ಪರಮೇಶ್ವರ್ ಖಡಕ್ ಸೂಚನೆ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಬಡವರು ಹಾಗೂ ನಿವೇಶನ ರಹಿತರಿಗೆ ನಿವೇಶನ ಕಲ್ಪಿಸುವ ಸರ್ಕಾರದ ಯೋಜನೆಗೆ ಜನರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿರುವ ಬೆನ್ನಲ್ಲೇ, ಭೂಮಿ ಗುರುತಿಸುವ ಪ್ರಕ್ರಿಯೆಯಲ್ಲಿ ಯಾವುದೇ ವಿಳಂಬಕ್ಕೆ ಅವಕಾಶ ನೀಡಬಾರದು ಎಂದು ಉಪ ಮುಖ್ಯಮಂತ್ರಿ ಹಾಗೂ ಕಂದಾಯ ಸಚಿವ ಡಾ. ಜಿ. ಪರಮೇಶ್ವರ್ ಜಿಲ್ಲಾಧಿಕಾರಿಗಳಿಗೆ ಸೂಚಿಸಿದ್ದಾರೆ.

ತಿಂಗಳ ಕೊನೆಯೊಳಗೆ ಪೂರ್ಣಗೊಳಿಸಿ

ವಿಧಾನಸೌಧದಲ್ಲಿ ಎಲ್ಲ ಜಿಲ್ಲಾಧಿಕಾರಿಗಳೊಂದಿಗೆ ವೀಡಿಯೋ ಕಾನ್ಫರೆನ್ಸ್ ಮೂಲಕ ಕಂದಾಯ ಇಲಾಖೆಯ ಪ್ರಗತಿ ಪರಿಶೀಲನಾ ಸಭೆ ನಡೆಸಿದ ಅವರು, ಕೆಲ ಜಿಲ್ಲೆಗಳಲ್ಲಿ ನಿವೇಶನ ಅಭಿವೃದ್ಧಿಗೆ ಅಗತ್ಯ ಭೂಮಿ ಗುರುತಿಸುವ ಕಾರ್ಯ ಇನ್ನೂ ಪೂರ್ಣಗೊಂಡಿಲ್ಲ ಎಂಬುದರ ಬಗ್ಗೆ ಮಾಹಿತಿ ನೀಡಿದರು. ನಿವೇಶನ ಸಿದ್ಧಪಡಿಸಲು ಸೂಕ್ತ ಜಮೀನು ಗುರುತಿಸುವ ಕಾರ್ಯವನ್ನು ತಿಂಗಳ ಕೊನೆಯೊಳಗೆ ಪೂರ್ಣಗೊಳಿಸುವಂತೆ ಸೂಚನೆ ನೀಡಿದ್ರು.

ಭಾರತ್ ಜೋಡೋ ಸಂಘಗಳ ನೋಂದಣಿ ವೇಗ ಹೆಚ್ಚಿಸಿ

ಇದೇ ವೇಳೆ ಭಾರತ್ ಜೋಡೋ ಯುವ ಸಂಘಗಳ ನೋಂದಣಿ ಪ್ರಕ್ರಿಯೆಗೂ ವೇಗ ನೀಡುವಂತೆ ಪರಮೇಶ್ವರ ಸೂಚಿಸಿದರು. ಸಂಘಗಳ ನೋಂದಣಿ, ಮೆಂಟರ್‌ಗಳ ನೇಮಕ ಸೇರಿದಂತೆ ಸಂಘಗಳ ಸ್ಥಾಪನೆಗೆ ಸಂಬಂಧಿಸಿದ ಪ್ರಕ್ರಿಯೆಗಳನ್ನು ಚುರುಕುಗೊಳಿಸಬೇಕು. ರಾಜ್ಯದಲ್ಲಿ 10 ಸಾವಿರ ಭಾರತ್ ಜೋಡೋ ಯುವ ಸಂಘಗಳನ್ನು ಸ್ಥಾಪಿಸುವ ಯೋಜನೆಗೆ ಸರ್ಕಾರ ಈಗಾಗಲೇ ಅಧಿಕೃತ ಆದೇಶ ಹೊರಡಿಸಿದೆ.

ಇದನ್ನೂ ಓದಿ:

ಪ್ರಜಾಸೇವಾ ಅರ್ಜಿಗಳ ತ್ವರಿತ ವಿಲೇವಾರಿ

ಪ್ರಜಾಸೇವಾ ಅಭಿಯಾನದಲ್ಲಿ ಕಂದಾಯ ಇಲಾಖೆಗೆ ಸಂಬಂಧಿಸಿದ ಅರ್ಜಿಗಳು ಹೆಚ್ಚಿನ ಸಂಖ್ಯೆಯಲ್ಲಿ ಬರುತ್ತಿರುವ ಹಿನ್ನೆಲೆಯಲ್ಲಿ, ಪಹಣಿ ತಿದ್ದುಪಡಿ, ಪಿಂಚಣಿ ಸೇರಿದಂತೆ ವಿವಿಧ ಅರ್ಜಿಗಳನ್ನು ತ್ವರಿತವಾಗಿ ವಿಲೇವಾರಿ ಮಾಡುವಂತೆ ಸೂಚಿಸಿದರು. ಆರ್‌ಟಿಸಿ ಮತ್ತು ಪೋಡಿ ಪ್ರಕರಣಗಳನ್ನು ಸರಳೀಕರಿಸಲಾಗಿದ್ದರೂ, ಯಾವುದೇ ಗೊಂದಲವಿದ್ದರೆ ಹಿರಿಯ ಅಧಿಕಾರಿಗಳ ಸಲಹೆ ಪಡೆದು ಕ್ರಮ ಕೈಗೊಳ್ಳುವಂತೆ ತಿಳಿಸಿದರು.

ಬಡವರಿಗೆ ನಿವೇಶನ ಒದಗಿಸುವುದರಿಂದ ಹಿಡಿದು ಕಂದಾಯ ಅರ್ಜಿಗಳ ತ್ವರಿತ ವಿಲೇವಾರಿವರೆಗೆ, ಜಿಲ್ಲಾಮಟ್ಟದಲ್ಲಿ ಆಡಳಿತದ ವೇಗ ಹೆಚ್ಚಿಸುವಂತೆ ಜಿಲ್ಲಾಧಿಕಾರಿಗಳಿಗೆ ಪರಮೇಶ್ವರ ನೀಡಿರುವ ಸೂಚನೆಗಳು ಜನರ ದೈನಂದಿನ ಸಮಸ್ಯೆಗಳ ಪರಿಹಾರಕ್ಕೆ ಒತ್ತು ನೀಡಿದ್ದಂತೂ ನಿಜ.

Must Read