September 16, 2026
Wednesday, September 16, 2026
spot_img

ಐದು ದಶಕಗಳ ಅಭಿನಯಕ್ಕೆ ‘ಫಾಲ್ಕೆ’ ಗೌರವ: ಅನಂತ್ ನಾಗ್‌ಗೆ ಅಭಿನಂದನೆಗಳ ಮಹಾಪೂರ

ಹೊಸದಿಗಂತ ಡಿಜಿಟಲ್ ಡೆಸ್ಕ್:

ದಶಕಗಳ ಕಾಲ ಸಹಜ ಅಭಿನಯ, ವಿಭಿನ್ನ ಪಾತ್ರಗಳು ಹಾಗೂ ತಮ್ಮದೇ ಆದ ನಟನಾ ಶೈಲಿಯಿಂದ ಕನ್ನಡ ಚಿತ್ರರಂಗದಲ್ಲಿ ವಿಶಿಷ್ಟ ಛಾಪು ಮೂಡಿಸಿದ್ದ ಹಿರಿಯ ನಟ ಅನಂತ್ ನಾಗ್ ಅವರಿಗೆ 2024ನೇ ಸಾಲಿನ ಪ್ರತಿಷ್ಠಿತ ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿ ಘೋಷಣೆಯಾಗುತ್ತಿದ್ದಂತೆ ಅಭಿನಂದನೆಗಳ ಮಹಾಪೂರವೇ ಹರಿದುಬಂದಿದೆ.

ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಕೇಂದ್ರ ಸಚಿವರು, ಕರ್ನಾಟಕದ ಮುಖ್ಯಮಂತ್ರಿ, ಸಂಸದರು ಹಾಗೂ ಚಿತ್ರರಂಗದ ಹಲವು ಗಣ್ಯರು ಸಾಮಾಜಿಕ ಜಾಲತಾಣಗಳ ಮೂಲಕ ಹಿರಿಯ ನಟನಿಗೆ ಶುಭಾಶಯ ಕೋರಿದ್ದಾರೆ.

ಅನಂತ್ ನಾಗ್ ಅವರ ಐದು ದಶಕಗಳಿಗೂ ಮೀರಿದ ಸಿನಿ ಪಯಣ ಮತ್ತು ಭಾರತೀಯ ಚಿತ್ರರಂಗಕ್ಕೆ ನೀಡಿದ ಕೊಡುಗೆಯನ್ನು ಹಲವು ನಾಯಕರು ಹಾಗೂ ಕಲಾವಿದರು ಸ್ಮರಿಸಿದ್ದಾರೆ.

‘ಕನ್ನಡ ಚಿತ್ರರಂಗದ ಗರಿಮೆ’

ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಅನಂತ್ ನಾಗ್ ಅವರಿಗೆ ಅಭಿನಂದನೆ ಸಲ್ಲಿಸಿ, ಅವರ ನೈಜ ಅಭಿನಯ, ಸಂಯಮ ಮತ್ತು ವಿಶಿಷ್ಟ ಪಾತ್ರಗಳ ಮೂಲಕ ಭಾರತೀಯ ಕಲಾರಂಗವನ್ನು ಶ್ರೀಮಂತಗೊಳಿಸಿರುವುದನ್ನು ಉಲ್ಲೇಖಿಸಿದ್ದಾರೆ.

ಈ ಗೌರವ ಕನ್ನಡ ಕಲಾಜಗತ್ತಿಗೆ ಸಂದ ಮನ್ನಣೆ ಎಂದು ಅವರು ಹೇಳಿದ್ದಾರೆ. ಉಪ ಮುಖ್ಯಮಂತ್ರಿ ಡಾ. ಜಿ. ಪರಮೇಶ್ವರ್ ಕೂಡ ಅನಂತ್ ನಾಗ್ ಅವರ ಕಲಾಸೇವೆಯನ್ನು ಶ್ಲಾಘಿಸಿ, ಅವರ ಕೊಡುಗೆ ಕನ್ನಡಿಗರಿಗೆ ಹೆಮ್ಮೆಯ ಸಂಗತಿ ಎಂದಿದ್ದಾರೆ.

ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ, ಎಚ್.ಡಿ. ಕುಮಾರಸ್ವಾಮಿ, ವಿ. ಸೋಮಣ್ಣ ಹಾಗೂ ಅಶ್ವಿನಿ ವೈಷ್ಣವ್ ಸೇರಿದಂತೆ ಹಲವು ನಾಯಕರು ಅನಂತ್ ನಾಗ್ ಅವರಿಗೆ ಅಭಿನಂದನೆ ಸಲ್ಲಿಸಿದ್ದಾರೆ. ಅನಂತ್ ನಾಗ್ ಅವರ ದೀರ್ಘಕಾಲದ ಕಲಾ ಪಯಣ, ಸಹಜ ಅಭಿನಯ ಮತ್ತು ಹಲವು ತಲೆಮಾರುಗಳ ಪ್ರೇಕ್ಷಕರ ಮೇಲೆ ಬೀರಿದ ಪ್ರಭಾವವನ್ನು ಅವರು ತಮ್ಮ ಸಂದೇಶಗಳಲ್ಲಿ ಉಲ್ಲೇಖಿಸಿದ್ದಾರೆ. ಸಂಸದರಾದ ತೇಜಸ್ವಿ ಸೂರ್ಯ ಹಾಗೂ ಪಿ.ಸಿ. ಮೋಹನ್ ಕೂಡ ಶುಭಾಶಯ ಕೋರಿದ್ದಾರೆ.

ಕಲಾವಿದರ ಮಾತಿನಲ್ಲಿ ‘ಅನಂತಣ್ಣ’

ರಾಜಕೀಯ ವಲಯದ ಜೊತೆಗೆ ಚಿತ್ರರಂಗದಲ್ಲೂ ಅನಂತ್ ನಾಗ್ ಅವರಿಗೆ ಅಭಿನಂದನೆಗಳ ಸುರಿಮಳೆಯಾಗಿದೆ. ನಟ ರಮೇಶ್ ಅರವಿಂದ್, ‘ಹಂಸಗೀತೆ’ಯಿಂದ ಹಿಡಿದು ಇತ್ತೀಚಿನ ಚಿತ್ರಗಳವರೆಗಿನ ಅನಂತ್ ನಾಗ್ ಅವರ ಪಯಣವೇ ನಟರಿಗೆ ಒಂದು ಕಲಾಶಾಲೆಯಂತಿದೆ ಎಂದು ಹೇಳಿದ್ದಾರೆ.

ನಟ ಜಗ್ಗೇಶ್ ತಮ್ಮ ಹಳೆಯ ಸಿನಿಮಾ ನೆನಪುಗಳನ್ನು ಹಂಚಿಕೊಂಡು, ಅನಂತ್ ನಾಗ್ ಅವರ ಚಿತ್ರಗಳನ್ನು ವಿದ್ಯಾರ್ಥಿ ದಿನಗಳಿಂದಲೇ ನೋಡುತ್ತಿದ್ದ ಅನುಭವವನ್ನು ಸ್ಮರಿಸಿದ್ದಾರೆ.

ನಟಿ ಮಾಳವಿಕಾ ಅವಿನಾಶ್ ಅವರು ಅನಂತ್ ನಾಗ್ ಅವರನ್ನು ಬಹುಮುಖ ಪ್ರತಿಭೆಯ ನಟ ಎಂದು ಬಣ್ಣಿಸಿ, ಅವರ ಸಹಜ ಅಭಿನಯ, ಕನ್ನಡ ಭಾಷೆಯ ಮೇಲಿನ ಹಿಡಿತ, ಗಂಭೀರ ಪಾತ್ರಗಳಲ್ಲಿನ ತೀವ್ರತೆ ಮತ್ತು ಹಾಸ್ಯ ದೃಶ್ಯಗಳಲ್ಲಿನ ಸಮಯಪ್ರಜ್ಞೆಯನ್ನು ಸ್ಮರಿಸಿದ್ದಾರೆ.

ನಟಿ ರಮ್ಯಾ ಕೂಡ ಅನಂತ್ ನಾಗ್ ಅವರೊಂದಿಗೆ ಕೆಲಸ ಮಾಡಿದ ಅನುಭವವನ್ನು ನೆನಪಿಸಿಕೊಂಡು, ಅವರು ಈ ಗೌರವಕ್ಕೆ ಅರ್ಹರು ಎಂದು ಅಭಿನಂದಿಸಿದ್ದಾರೆ.

ಅನಂತ್ ನಾಗ್ ಅವರ ಸುದೀರ್ಘ ಕಲಾ ಪಯಣಕ್ಕೆ ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿ ಮತ್ತೊಂದು ಮಹತ್ವದ ಅಧ್ಯಾಯವಾಗಿದೆ. ದಶಕಗಳ ಕಾಲ ಪ್ರೇಕ್ಷಕರನ್ನು ರಂಜಿಸಿದ ಹಿರಿಯ ನಟನಿಗೆ ದೇಶದ ಅತ್ಯುನ್ನತ ಸಿನಿಮಾ ಗೌರವ ಒಲಿದಿರುವುದು ಕನ್ನಡ ಚಿತ್ರರಂಗದ ಇತಿಹಾಸದಲ್ಲಿ ಗಮನಾರ್ಹ ಕ್ಷಣವಾಗಿ ದಾಖಲಾಗುತ್ತಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !