ಹೊಸದಿಗಂತ ಡಿಜಿಟಲ್ ಡೆಸ್ಕ್:
ಇಂದು ಪ್ರಧಾನಿ ಮೋದಿ 76ನೇ ವಸಂತಕ್ಕೆ ಕಾಲಿಟ್ಟಿದ್ದಾರೆ. ಇದರ ಜತೆಗೆ ಪ್ರಧಾನಿ ಜನಸೇವೆ ಆರಂಭಿಸಿ 25 ವರ್ಷಗಳು ತುಂಬಿವೆ. ಈ ಎರಡು ವಿಶೇಷ ಸಂದರ್ಭದ ಹಿನ್ನೆಲೆ ಇಂದಿನಿಂದ ಒಂದು ತಿಂಗಳು ದೇಶಾದ್ಯಂತ ಸೇವಾ ಸಂಕಲ್ಪ ಅಭಿಯಾನ ನಡೆಯಲಿದೆ. ಸಾರ್ವಜನಿಕ ಸೇವೆಯಲ್ಲಿ ಬರೋಬ್ಬರಿ 25 ವಸಂತಗಳನ್ನು ಪೂರೈಸುವುದು ಸುಲಭದ ಮಾತಲ್ಲ. ಈ ಸುದೀರ್ಘ ಅವಧಿಯನ್ನು ಗುರುತಿಸಲು ಭಾರತೀಯ ಜನತಾ ಪಕ್ಷ ಸೇವಾ ಸಂಕಲ್ಪ ಅಭಿಯಾನಕ್ಕೆ ಚಾಲನೆ ನೀಡಿದೆ.
ಜನಸೇವೆಯೇ ಪ್ರಭುಸೇವೆ ಎನ್ನುವ ಧ್ಯೇಯ ವಾಕ್ಯದೊಂದಿಗೆ ಸಂಕಲ್ಪ ಆರಂಭವಾಗಿದೆ. ಒಂದು ತಿಂಗಳು ವಿವಿಧ ಸೇವಾ ಚಟುವಟಿಕೆ, ಜನಜಾಗೃತಿ ಕಾರ್ಯಕ್ರಮಗಳನ್ನು ನಡೆಸಲಾಗುತ್ತದೆ.ಬಿಜೆಪಿ, ಎನ್ಡಿಎ ಸಹಪಕ್ಷಗಳು ಹಾಗೂ ವಿವಿಧ ಸ್ವಯಂಸೇವಾ ಸಂಘಟನೆಗಳ ಸಹಯೋಗದಲ್ಲಿ ರಾಜ್ಯದಿಂದ ಬೂತ್ ಮಟ್ಟದ ವರೆಗೆ ಅಭಿಯಾನ ನಡೆಯಲಿದೆ. ದೇಶವನ್ನು 2047ರ ವೇಳೆಗೆ ಅಭಿವೃದ್ಧಿ ಹೊಂದಿದ ರಾಷ್ಟ್ರವನ್ನಾಗಿಸುವ ಸಂಕಲ್ಪವನ್ನು ಜನರೊಂದಿಗೆ ಹಂಚಿಕೊಳ್ಳುವುದು ಅಭಿಯಾನದ ಪ್ರಮುಖ ಉದ್ದೇಶವಾಗಿದೆ.
ಆಶೀರ್ವಾದ ದೀಪ ಬೆಳಗಿಸಿ
ಇಂದು ಸಂಜೆ ಆರರಿಂದ ಏಳುಗಂಟೆವರೆಗೆ ಪ್ರತೀ ಮನೆ ಹಾಗೂ ಮತಗಟ್ಟೆ ವ್ಯಾಪ್ತಿಯಲ್ಲಿ ಆಶೀರ್ವಾದ ದೀಪವನ್ನು ಬೆಳಗಿಸಲಾಗುತ್ತದೆ. ತದನಂತರ ಅಭಿಯಾನ ಆರಂಭವಾಗುತ್ತದೆ. ಶಾಲೆಗಳಲ್ಲಿ ಮಕ್ಕಳಿಗೆ ಚಿತ್ರಕಲೆ, ಭಾಷಣ ಸ್ಪರ್ಧೆಗಳನ್ನು ಆಯೋಜಿಸಲಾಗುತ್ತದೆ. ಇನ್ನು ಪಾದಯಾತ್ರೆ, ಬೈಕ್ ರ್ಯಾಲಿ ಹಾಗೂ ಬೀದಿ ನಾಟಕಗಳನ್ನೂ ಮಾಡಲಾಗುತ್ತದೆ. “ನಮೋ ಸೇವಾ ಗಾಥಾ ” ಮೂಲಕ ಮೋದಿ ಅವರ 25 ವರ್ಷಗಳ ಸಾರ್ವಜನಿಕ ಸೇವೆ ಹಾಗೂ ಕೇಂದ್ರ ಸರ್ಕಾರದ ಯೋಜನೆಗಳ ಕುರಿತು ಜನರಿಗೆ ಮಾಹಿತಿ ನೀಡಲಾಗುತ್ತದೆ.
ಬದಲಾವಣೆಯ ಕಥೆ
ಬದಲಾವಣೆಯ ಕಥೆ ಎನ್ನುವ ಹೆಸರಿನ ಮೂಲಕ ಡಿಜಿಟಲ್ ಅಭಿಯಾನವನ್ನು ಆರಂಭಿಸಲಾಗುತ್ತದೆ. ನಿಜವಾಗಿಯೂ ಸರ್ಕಾರದಿಂದ ಜನರಿಗೆ ಏನು ಸಹಾಯ ಆಗಿದೆ ಎನ್ನುವ ಬದಲಾವಣೆಯ 25 ಲಕ್ಷ ನೈಜ ಕಥೆಗಳನ್ನು ಸಂಗ್ರಹಿಸುವ ಗುರಿ ಇದೆ. ಪ್ರತಿ ಶಕ್ತಿ ಕೇಂದ್ರದಿಂದಲೂ ಡಿಜಿಟಲ್ ಕ್ರಾಂತಿ, ಗ್ರಾಮೀಣ ಸಂಪರ್ಕ, ಸೆಮಿಕಂಡಕ್ಟರ್ ಹಾಗೂ ಚಿಪ್ ಉತ್ಪಾದನೆ ಸೇರಿದಂತೆ ಅಭಿವೃದ್ಧಿಯ ವಿವಿಧ ಆಯಾಮಗಳ ಕುರಿತು ವಿಡಿಯೊಗಳನ್ನು ಸಿದ್ಧಪಡಿಸಲಾಗುವುದು. ಪ್ರತಿ ನಾಗರಿಕರೂ ಕನಿಷ್ಠ 25 ನಿಮಿಷವನ್ನು ಸೇವಾ ಕಾರ್ಯಕ್ಕೆ ಮೀಸಲಿಡುವಂತೆ ಪ್ರೇರೇಪಿಸುವ “ಸೇವಾ ಮೇರಾ ಯೋಗದಾನ ” ಕಾರ್ಯಕ್ರಮವೂ ನಡೆಯಲಿದೆ



