September 19, 2026
Saturday, September 19, 2026
spot_img

‘ಯಾವ ಕಾರಣಕ್ಕೂ ಕಾಂಗ್ರೆಸ್ ಬಿಡುವ ಪ್ರಶ್ನೆಯೇ ಇಲ್ಲ’: ಪಕ್ಷಾಂತರದ ವದಂತಿಗಳಿಗೆ ಬ್ರೇಕ್ ಹಾಕಿದ ಕೆ.ಎನ್. ರಾಜಣ್ಣ

ಹೊಸದಿಗಂತ ಡಿಜಿಟಲ್‌ ಡೆಸ್ಕ್:

ಕಳೆದ ಕೆಲವು ದಿನಗಳಿಂದ ರಾಜಕೀಯ ವಲಯದಲ್ಲಿ ಕೇಳಿಬರುತ್ತಿದ್ದ ಎಲ್ಲಾ ಗಾಸಿಪ್‌ಗಳಿಗೆ ಕಾಂಗ್ರೆಸ್ ಮುಖಂಡ ಕೆ.ಎನ್. ರಾಜಣ್ಣ ಅವರು ತೆರೆ ಎಳೆದಿದ್ದಾರೆ. ತಾವು ಯಾವುದೇ ಕಾರಣಕ್ಕೂ ಕಾಂಗ್ರೆಸ್‌ನ್ನು ತೊರೆಯುವುದಿಲ್ಲ ಮತ್ತು ಬೇರೆ ಯಾವುದೇ ಪಕ್ಷವನ್ನು ಸೇರುವುದಿಲ್ಲ ಎಂದು ಅವರು ಸ್ಪಷ್ಟವಾಗಿ ತಿಳಿಸಿದ್ದಾರೆ.

ಶುಕ್ರವಾರ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಸಮಾಜದ ಧ್ವನಿ ಇಲ್ಲದ ಹಾಗೂ ಶೋಷಿತ ವರ್ಗಗಳಿಗೆ ನ್ಯಾಯ ಒದಗಿಸುವ ಶಕ್ತಿ ಇರುವುದು ಕೇವಲ ಕಾಂಗ್ರೆಸ್ ಪಕ್ಷಕ್ಕೆ ಮಾತ್ರ ಎಂದು ಅಭಿಪ್ರಾಯಪಟ್ಟಿದ್ದಾರೆ. ಕಾಂಗ್ರೆಸ್ ಪಕ್ಷ ನನಗೆ ಎಲ್ಲವನ್ನೂ ನೀಡಿದೆ. ನಾನು ಕಾಂಗ್ರೆಸ್‌ನಲ್ಲೇ ಉಳಿಯುವ ಮನಸ್ಸು ಮಾಡಿದ್ದೇನೆ ಎಂದು ತಮ್ಮ ನಿಲುವನ್ನು ಸ್ಪಷ್ಟಪಡಿಸಿದರು.

ಲೋಕಸಭೆ ಸ್ಪರ್ಧೆಗೆ ರಾಜಣ್ಣ ಲೆಕ್ಕಾಚಾರ

ತಮ್ಮ ಮುಂದಿನ ರಾಜಕೀಯ ನಡೆ ಮತ್ತು ಲೋಕಸಭೆ ಸ್ಪರ್ಧೆಯ ಕುರಿತು ಮಾತನಾಡಿದ ರಾಜಣ್ಣ, ದೇಶದಲ್ಲಿ ಪ್ರತಿ 10 ಲಕ್ಷ ಜನಸಂಖ್ಯೆಗೆ ಒಂದು ಲೋಕಸಭಾ ಕ್ಷೇತ್ರವನ್ನು ಮಾಡುವ ನಿಟ್ಟಿನಲ್ಲಿ ಕ್ಷೇತ್ರಗಳ ಮರುವಿಂಗಡಣೆ ಪ್ರಕ್ರಿಯೆಯ ಪ್ರಸ್ತಾಪವಿದೆ ಎಂದಿದ್ದಾರೆ. ಒಂದು ವೇಳೆ ಕ್ಷೇತ್ರಗಳ ಮರುವಿಂಗಡಣೆ ನಡೆದು, ಮಧುಗಿರಿ ಉಪವಿಭಾಗದ ತಾಲೂಕುಗಳು ಹೊಸ ಲೋಕಸಭಾ ಕ್ಷೇತ್ರದ ವ್ಯಾಪ್ತಿಗೆ ಬಂದರೆ, ನಾನು ಖಂಡಿತವಾಗಿಯೂ ಲೋಕಸಭೆ ಚುನಾವಣೆಗೆ ಸ್ಪರ್ಧಿಸುತ್ತೇನೆ ಎಂಬ ಇಂಗಿತವನ್ನು ಹೊರಹಾಕಿದ್ದಾರೆ.

ಸಿದ್ದರಾಮಯ್ಯ ದುರ್ಬಲರಲ್ಲ, ಅವರೇ ನಮ್ಮ ಶಕ್ತಿ

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ದುರ್ಬಲರಾಗುತ್ತಿದ್ದಾರೆ ಎಂಬ ಮಾತುಗಳನ್ನು ರಾಜಣ್ಣ ಸಂಪೂರ್ಣವಾಗಿ ತಳ್ಳಿಹಾಕಿದ್ದಾರೆ. ಸಿದ್ದರಾಮಯ್ಯನವರು ದುರ್ಬಲರಾಗುತ್ತಿದ್ದಾರೆ ಎನ್ನುವುದು ತಪ್ಪು ಕಲ್ಪನೆ. ಒಂದು ವೇಳೆ ಅವರು ದುರ್ಬಲರಾದರೆ ಅದು ಇಡೀ ಕಾಂಗ್ರೆಸ್ ಪಕ್ಷವೇ ದುರ್ಬಲಗೊಂಡಂತೆ. ಏಕೆಂದರೆ, ಕಾಂಗ್ರೆಸ್‌ನಲ್ಲಿ ‘ಅಹಿಂದ’ ಮತಗಳನ್ನು ಸೆಳೆಯುವ ಸಾಮರ್ಥ್ಯ ಇರುವುದು ಕೇವಲ ಸಿದ್ದರಾಮಯ್ಯ ಅವರಿಗೆ ಮಾತ್ರ ಎಂದಿದ್ದಾರೆ. ಇದೇ ವೇಳೆ ಅವರು ವಿರೋಧ ಪಕ್ಷಗಳ ಬಗ್ಗೆಯೂ ಮಾತನಾಡಿ, ಬಿಜೆಪಿಯಲ್ಲಿ ಯಡಿಯೂರಪ್ಪ ಹಾಗೂ ಜೆಡಿಎಸ್‌ನಲ್ಲಿ ದೇವೇಗೌಡರಿಗೆ ಮಾತ್ರ ಜನರಿಂದ ವೋಟ್ ತರಿಸುವ ತಾಕತ್ತಿದೆ ಎಂದು ಹೇಳಿದ್ದಾರೆ.

ಇದನ್ನೂ ಓದಿ:

ತಾವು ಪರಿಶಿಷ್ಟ ಪಂಗಡ ಸಮುದಾಯಕ್ಕೆ ಸೇರಿದವರಾಗಿದ್ದರೂ ಕಾಂಗ್ರೆಸ್ ತಮಗೆ ಸಾಮಾನ್ಯ ಕ್ಷೇತ್ರದಿಂದ ಸ್ಪರ್ಧಿಸಲು ಟಿಕೆಟ್ ನೀಡಿ ಬೆಳೆಸಿದೆ ಎಂದು ಸ್ಮರಿಸಿದ ಅವರು, ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರು ಎಸ್ಟಿ ಸಮುದಾಯಕ್ಕೆ ಮೀಸಲಾತಿ ತರಲು ಶ್ರಮಿಸಿದ್ದನ್ನು ಗೌರವದಿಂದ ನೆನಸಿಕೊಂಡರು.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !