ಹೊಸದಿಗಂತ ಡಿಜಿಟಲ್ ಡೆಸ್ಕ್:
ಆಸ್ಕರ್ ಪ್ರಶಸ್ತಿಗೆ ಆಯ್ಕೆಯಾಗಿರೋ ಭಾರತದ ಮರಾಠಿಯ ‘ಗೋಂಧಲ್’ ಸಿನಿಮಾ ನೀವೂ ನೋಡ್ಬೇಕು ಅಂತಿದ್ದೀರಾ? ಆದ್ರೆ OTTಯಲ್ಲಿ ಬಂದಿದ್ಯಾ ಅನ್ನೋ ಅನುಮಾನ ನಿಮ್ಮನ್ನು ಕಾಡ್ತಿದ್ಯಾ? ಎಲ್ಲದಕ್ಕೂ ಉತ್ತರ ಈ ಸ್ಟೋರಿನಲ್ಲಿದೆ ನೋಡಿ
ದೇಶದಾದ್ಯಂತ ಸಿನಿಪ್ರೇಕ್ಷಕರ ಗಮನ ಹರಿಸಿರೋದು ಈಗ ಮರಾಠಿಯ ‘ಗೋಂಧಲ್’ ಸಿನಿಮಾ ಮೇಲೆ. ಗ್ರಾಮೀಣ ಮಹಾರಾಷ್ಟ್ರದ ಹಿನ್ನೆಲೆ, ಕೌಟುಂಬಿಕ ಸಂಘರ್ಷ, ಅಪರಾಧ ಮತ್ತು ಸಸ್ಪೆನ್ಸ್ ಅಂಶಗಳನ್ನು ಒಳಗೊಂಡಿರುವ ಸಿನಿಮಾ ಇದೀಗ ಅಂತಾರಾಷ್ಟ್ರೀಯ ವೇದಿಕೆಯಲ್ಲಿ ಭಾರತದ ಪ್ರತಿನಿಧಿಯಾಗಿ ಗುರುತಿಸಿಕೊಂಡಿದ್ದು, ಈ ಸಿನಿಮಾ OTTಯಲ್ಲಿ ಸ್ಟ್ರೀಮಿಂಗ್ಗೆ ಲಭ್ಯವಿಲ್ಲ. ಅಷ್ಟೇ ಅಲ್ಲದೆ ಆನ್ಲೈನ್ನಲ್ಲಿ ಸಿನಿಮಾ ಬಾಡಿಗೆಗೆ ಪಡೆಯಲು ಅಥವಾ ಖರೀದಿಸಲು ಕೂಡ ಸದ್ಯ ಅವಕಾಶ ಚಿತ್ರ ತಂಡ ಕೊಟ್ಟಿಲ್ಲ.
ಏನಿದು ಕಥೆ?
ಇನ್ನು ‘ಗೋಂಧಲ್’ ಚಿತ್ರದ ಕಥೆಯೂ ಸಾಕಷ್ಟು ಕುತೂಹಲ ಮೂಡಿಸುವಂತಿದೆ. ಗ್ರಾಮೀಣ ಮಹಾರಾಷ್ಟ್ರದಲ್ಲಿ ನಡೆಯುವ ಕಥೆಯ ಕೇಂದ್ರದಲ್ಲಿ ಸುಮನ್ ಎಂಬ ಮಹಿಳೆ ಅಸಂತುಷ್ಟ ವೈವಾಹಿಕ ಜೀವನದಿಂದ ಹೊರಬಂದು ತನ್ನ ಪ್ರಿಯಕರನೊಂದಿಗೆ ಹೊಸ ಬದುಕು ಕಟ್ಟಿಕೊಳ್ಳಲು ಬಯಸುತ್ತಾಳೆ. ತನ್ನ ಪತಿಯಿಂದ ಬಿಡುಗಡೆ ಪಡೆಯೋ ಸಲುವಾಗಿ ಭಯಂಕರ ಯೋಜನೆಯೊಂದನ್ನು ರೂಪಿಸುತ್ತಾಳೆ. ಈ ಯೋಜನೆ ಮುಂದೆ ಕೊಲೆ, ಸಂಬಂಧಗಳ ಸಂಘರ್ಷ ಮತ್ತು ಹಲವು ಅನಿರೀಕ್ಷಿತ ತಿರುವುಗಳಿಗೆ ಕಾರಣವಾಗುತ್ತೆ.
ಇದನ್ನೂ ಓದಿ:
ಚಿತ್ರವನ್ನು ಸಂತೋಷ್ ದವಾಖರ್ ನಿರ್ದೇಶಿಸಿದ್ದಾರೆ. ಮಾನವ ಸಂಬಂಧಗಳ ಸಂಕೀರ್ಣತೆ ಮತ್ತು ಗ್ರಾಮೀಣ ಸಾಮಾಜಿಕ ವಾತಾವರಣವನ್ನು ಸಸ್ಪೆನ್ಸ್ ಕಥೆಯೊಂದಿಗೆ ಬೆಸೆದು ಸಿನಿಮಾ ರೂಪಿಸಲಾಗಿದೆ. ಆರಂಭದಲ್ಲಿ ಕೌಟುಂಬಿಕ ಕಥೆಯಂತೆ ಸಾಗುವ ಚಿತ್ರ, ನಂತರ ಅಪರಾಧದ ರಹಸ್ಯವನ್ನು ತೆರೆದಿಡುವ ಮೂಲಕ ಪ್ರೇಕ್ಷಕರ ಕುತೂಹಲವನ್ನು ಹೆಚ್ಚಿಸುತ್ತದೆ.
ಫಿಲ್ಮ್ ಫೆಡರೇಶನ್ ಆಫ್ ಇಂಡಿಯಾ ನಡೆಸಿದ ಆಯ್ಕೆ ಪ್ರಕ್ರಿಯೆಯಲ್ಲಿ 33 ಚಿತ್ರಗಳು ಪರಿಗಣನೆಯಲ್ಲಿದ್ದವು. ಅವುಗಳ ಪೈಕಿ ‘ಗೋಂಧಲ್’ ಭಾರತದಿಂದ ಆಸ್ಕರ್ಗೆ ಅಧಿಕೃತ ಪ್ರವೇಶ ಪಡೆದಿದೆ. ಈ ಗೌರವದ ಬಳಿಕ ಚಿತ್ರದ ಮೇಲಿನ ನಿರೀಕ್ಷೆ ಮತ್ತಷ್ಟು ಹೆಚ್ಚಾಗಿದ್ದು, ಮುಂದಿನ ದಿನಗಳಲ್ಲಿ OTT ಬಿಡುಗಡೆ ಕುರಿತು ಅಧಿಕೃತ ಘೋಷಣೆ ಯಾವಾಗ ಹೊರಬೀಳಲಿದೆ ಎಂಬುದೇ ಇದೀಗ ಪ್ರೇಕ್ಷಕರ ಗಮನ ಸೆಳೆದಿದೆ.



