September 18, 2026
Friday, September 18, 2026
spot_img

ʼನಾವು ಜನರ ಬದುಕಿನ ಮೇಲೆ ರಾಜಕೀಯ ಮಾಡುತ್ತೇವೆಯೇ ಹೊರತು, ಭಾವನೆಗಳ ಮೇಲಲ್ಲʼ: ಡಿ.ಕೆ.ಶಿವಕುಮಾರ್

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ಕರಾವಳಿ ನಗರಿ ಮಂಗಳೂರಿನಲ್ಲಿ ಇತಿಹಾಸದಲ್ಲೇ ಮೊದಲ ಬಾರಿಗೆ ರಾಜ್ಯ ಸಚಿವ ಸಂಪುಟ ಸಭೆಯನ್ನು ಹಮ್ಮಿಕೊಳ್ಳಲಾಗಿದೆ. ಈ ಹಿನ್ನೆಲೆ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಸೇರಿ ರಾಜ್ಯದ ಎಲ್ಲಾ ಸಚಿವರು ಮಂಗಳೂರಿನಲ್ಲಿ ಬೀಡುಬಿಟ್ಟಿದ್ದಾರೆ.

ಈ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಸಿಎಂ, ಸರ್ಕಾರದ ಈ ಐತಿಹಾಸಿಕ ಹೆಜ್ಜೆಗೆ ಇಕ್ಕಟ್ಟಿಗೆ ಸಿಲುಕಿರುವ ವಿರೋಧ ಪಕ್ಷದ ನಾಯಕರು “ಅನಗತ್ಯವಾಗಿ ಗಾಬರಿಯಾಗಬೇಡಿ” ಎಂದು ವ್ಯಂಗ್ಯವಾಡಿದ್ದಾರೆ.

ಮುಂದುವರೆದು, ನಮಗೆ ಜನರ ಜೀವನೋಪಾಯ ಮತ್ತು ಅವರ ಬದುಕು ಅತ್ಯಂತ ಮುಖ್ಯವಾಗಿದೆ. ನಾವು ಜನರ ಬದುಕು ಮತ್ತು ಅವರ ಜೀವನದ ಆಧಾರದ ಮೇಲೆ ರಾಜಕೀಯ ಮಾಡುತ್ತೇವೆಯೇ ಹೊರತು, ಜನರ ಭಾವನೆಗಳ ಮೇಲೆ ರಾಜಕೀಯ ಮಾಡುವುದಿಲ್ಲ ಎಂದು ವಿರೋಧ ಪಕ್ಷಗಳಿಗೆ ತಿರುಗೇಟು ನೀಡಿದ್ದಾರೆ. ಧರ್ಮ ಅಥವಾ ಭಾವನಾತ್ಮಕ ವಿಚಾರಗಳಿಗಿಂತ ಜನರ ದಿನನಿತ್ಯದ ಬದುಕಿನ ಸುಧಾರಣೆಯೇ ಕಾಂಗ್ರೆಸ್ ಸರ್ಕಾರಕ್ಕೆ ಮುಖ್ಯ ಎಂದಿದ್ದಾರೆ.

ಹುತಾತ್ಮರಿಗೆ ನಮನ ಸಲ್ಲಿಸಿದ ಸಿಎಂ

ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ದೇಶಕ್ಕಾಗಿ ಪ್ರಾಣ ಅರ್ಪಿಸಿದ ವೀರ ಯೋಧರನ್ನು ಸ್ಮರಿಸಿದ್ದಾರೆ. ಮಾತೃಭೂಮಿಯ ರಕ್ಷಣೆಗಾಗಿ ಪರಮೋಚ್ಚ ಬಲಿದಾನಗೈದ ನಮ್ಮ ಸಶಸ್ತ್ರ ಪಡೆಗಳ ವೀರಯೋಧರ ಸಂಸ್ಮರಣಾರ್ಥವಾಗಿ ಮಂಗಳೂರಿನಲ್ಲಿ ನಿರ್ಮಿಸಲಾಗಿರುವ ಯುದ್ಧ ಸ್ಮಾರಕಕ್ಕೆ ಇಂದು ಭೇಟಿ ನೀಡಿ, ವೀರ ಹುತಾತ್ಮರಿಗೆ ನಮನಗಳನ್ನು ಸಲ್ಲಿಸಿದರು.

ಇದನ್ನೂ ಓದಿ:

ಈ ಸಂದರ್ಭದಲ್ಲಿ ಮಾಜಿ ಸೈನಿಕರು, ಸಚಿವ ಯು. ಟಿ. ಖಾದರ್‌, ಮುಖಂಡರು ಹಾಗೂ ಅಧಿಕಾರಿಗಳು ಉಪಸ್ಥಿತರಿದ್ದರು.

ಇಂದು ಬೆಳಗ್ಗೆ ಸಿಎಂ ಗಾಂಧಿ ಸ್ಕ್ವೇರ್ ಕೆಫೆಯಲ್ಲಿ ಮಂಗಳೂರಿನ ಯುವ ಸಮೂಹದೊಂದಿಗೆ ಬ್ರೇಕ್‌ ಫಾಸ್ಟ್‌ ಮಾಡಿ, ಅವರೊಂದಿಗೆ ಮಾತುಕತೆ ನಡೆಸಿದ್ದಾರೆ. ನಂತರ ಸಿಎಂ ಮತ್ತು ಸಚಿವರು ಐತಿಹಾಸಿಕ ಕದ್ರಿ ಮಂಜುನಾಥ ದೇವಸ್ಥಾನಕ್ಕೆ ಭೇಟಿ ನೀಡಿ, ವಿಶೇಷ ಪೂಜೆ ಹಾಗೂ ಪ್ರಾರ್ಥನೆ ಸಲ್ಲಿಸಿದರು.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !