ಹೊಸದಿಗಂತ ವರದಿ ಹಾವೇರಿ:
ಹಿರೇಕೇರೂರು ತಾಲೂಕನ್ನು ಬರ ಪೀಡಿತ ಎಂದು ಘೋಷಣೆ ಮಾಡದಿದ್ದಕ್ಕೆ ತಹಶಿಲ್ದಾರರ ಕಚೇರಿ ಎದುರು ರಸ್ತೆ ತಡೆದು ಮಾಜಿ ಸಚಿವ ಬಿ.ಸಿ. ಪಾಟೀಲ್ ಪ್ರತಿಭಟನೆ ನಡೆಸಿದರು.
ನೂರಾರು ಕಾರ್ಯಕರ್ತರು, ರೈತರ ಜೊತೆ ರಸ್ತೆ ತಡೆದು ಪ್ರತಿಭಟನೆ ನಡೆಸುತ್ತಿದ್ದು, ಪ್ರಜಾ ಸೇವೆ ಕಾರ್ಯಕ್ರಮದ ನಿಮಿತ್ತ ಹಿರೇಕೇರೂರಿಗೆ ಆಗಮಿಸಿದ್ದ ಸಚಿವ ರುದ್ರಪ್ಪ ಲಮಾಣಿ ಅವರನ್ನು ತಡೆದು ತಮ್ಮ ಅಸಮಾಧಾನ ಹೊರಹಾಕಿದರು.
ಪ್ರತಿಭಟನಾ ನಿರತ ಬಿ.ಸಿ. ಪಾಟೀಲ್ ಬಳಿ ಮನವಿ ಸ್ವೀಕರಿಸಲು ಬಂದ ರುದ್ರಪ್ಪ ಲಮಾಣಿ ಅವರನ್ನು ಪಕ್ಕದಲ್ಲೇ ನಿಲ್ಲಿಸಿಕೊಂಡು ಸರ್ಕಾರದ ವಿರುದ್ದ ಪಾಟೀಲ್ ವಾಗ್ದಾಳಿ ನಡೆಸಿದರು. ವಾಲ್ಮೀಕಿ ಹಗರಣ ಪ್ರಸ್ತಾಪಿಸಿ ತೀವ್ರ ವಾಗ್ದಾಳಿ ನಡೆಸಿ, ದಲಿತರ ಹಣ ತಿಂದವರನ್ನೇ ಮತ್ತೆ ಮಂತ್ರಿ ಮಾಡುತ್ತೀರಿ, ಬಿಜೆಪಿಯವರು ಭ್ರಷ್ಟರು ಅಂತಾರೆ, ಹಾಗಾದರೆ ನಾಗೇಂದ್ರರನ್ನ ಯಾಕೆ ಮಂತ್ರಿ ಮಾಡಿದರು ಎಂದು ಪ್ರಶ್ನಿಸಿದರು.
ಹಿರೇಕೇರೂರು ಶಾಸಕ ಯು.ಬಿ ಬಣಕಾರ್ ವಿರುದ್ದವೂ ಕಿಡಿ ಕಾರಿದ ಬಿ.ಸಿ. ಪಾಟೀಲ್, ರೈತರ ಪಂಪಸೆಟ್ ಗಳಿಗೆ ಕರೆಂಟ್ ಕೊಡುತ್ತಿಲ್ಲ 7 ತಾಸು ಕರೆಂಟ್ ಕೊಡೋದನ್ನ 5 ತಾಸು ಮಾಡಿದ್ದಾರೆ, ಅದನ್ನ ಪುನಃ 7 ತಾಸು ಕರೆಂಟ್ ಕೊಡಿ. ಕುಡಿಯೋ ನೀರಿನ ಸಮಸ್ಯೆ ಇದೆ, ಮೋಡ ಬಿತ್ತನೆ ಮಾಡ್ತೀವಿ ಅಂತ 28 ಕೋಟಿ ಲೂಟಿ ಮಾಡ್ತಿದಾರೆ ಎಂದು ಆಕ್ರೋಶ ಹೊರಹಾಕಿದರು.
ನಾನು ಕೃಷಿ ಸಚಿವ ಇದ್ದಾಗ ಇದರಲ್ಲಿ ಆದಾಯ ಇದೆ, ಮೋಡ ಬಿತ್ತನೆ ಮಾಡೋಣ ಎಂದು ಆಫರ್ ಬಂದಿತ್ತು ನಾನು ನಿರಾಕರಿಸಿದೆ. ಇಂಥ ಭೀಕರ ಬರದಲ್ಲಿ 28 ಕೋಟಿ ಖರ್ಚು ಮಾಡಿ ಮೋಡ ಬಿತ್ತನೆ ಮಾಡ್ತಿದಾರೆ. ನಮ್ಮ ಹಿರೇಕೇರೂರು ತಾಲೂಕನ್ನು ಬರ ಪೀಡಿತ ತಾಲೂಕು ಅಂತ ಘೋಷಣೆ ಮಾಡಬೇಕು ಎಂದು ಒತ್ತಾಯಿಸಿದರು.



