September 19, 2026
Saturday, September 19, 2026
spot_img

‘ಅನ್ನಂ ಬ್ರಹ್ಮ’ ಮಾಲಿಕೆ | ನೀರಿನಿಂದ ಬದುಕು.. ತುಪ್ಪದಿಂದ ಬದುಕಿನ ಸಾರ್ಥಕತೆ: ರಾಘವೇಶ್ವರ ಶ್ರೀ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಬದುಕಲು ನೀರು ಅಗತ್ಯವಾದರೆ, ಬದುಕನ್ನು ಸಾರ್ಥಕವಾಗಿಸಿಕೊಳ್ಳಲು ಗೋವಿನ ತುಪ್ಪ ಅಗತ್ಯ. ಕ್ರಿಮಿ-ಕೀಟಗಳ ಮಟ್ಟದಿಂದ ಮೇಲೇರಿ ಅರಿವಿನ ಬದುಕನ್ನು ಕಟ್ಟಿಕೊಳ್ಳಲು ಗೋವಿನ ತುಪ್ಪದ ಪಾತ್ರ ಮಹತ್ವದ್ದಾಗಿದೆ ಎಂದು ಶ್ರೀರಾಮಚಂದ್ರಾಪುರ ಮಠದ ಜಗದ್ಗುರು ಶಂಕರಾಚಾರ್ಯ ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳು ಹೇಳಿದರು.

ಗೋಕರ್ಣದ ಅಶೋಕೆಯ ಮೂಲಮಠದ ಪರಿಸರದಲ್ಲಿ ನಡೆಯುತ್ತಿರುವ ‘ಅನ್ನಬ್ರಹ್ಮ ಚಾತುರ್ಮಾಸ್ಯ’ದ ಶನಿವಾರದ ಧರ್ಮಸಭೆಯ ‘ಅನ್ನಂ ಬ್ರಹ್ಮ’ ಮಾಲಿಕೆಯಲ್ಲಿ ಶ್ರೀಗಳು ಪ್ರವಚನ ಅನುಗ್ರಹಿಸಿದರು.

ಗೋವು ಸೃಷ್ಟಿಯ ಸಾರವಾದರೆ, ಹಾಲು ಗೋವಿನ ಸಾರ. ತುಪ್ಪವು ಸಾರಗಳ ಸಾರವಾಗಿದೆ ಎಂದು ವಿವರಿಸಿದರು. ಸಾಮಾನ್ಯವಾಗಿ ದಿನ ಕಳೆದಂತೆ ವಸ್ತುಗಳ ಗುಣ ಕುಸಿಯುತ್ತವೆ. ಆದರೆ ತುಪ್ಪದ ಗುಣ ಮಾತ್ರ ಕಾಲ ಕಳೆದಂತೆ ಹೆಚ್ಚಾಗುತ್ತದೆ. ಆಯುರ್ವೇದದಲ್ಲಿ ನೂರು ವರ್ಷಗಳ ಹಳೆಯ ತುಪ್ಪವನ್ನು ಮಹಾ ಔಷಧವೆಂದು ಪರಿಗಣಿಸಲಾಗಿದೆ ಎಂದರು.

ದೇಶಿ ಗೋವಿನ ತುಪ್ಪವೇ ನಿಜವಾದ ತುಪ್ಪ ಎಂದು ಹೇಳಿದ ಅವರು, A2 ಅಲ್ಲದ ಹಾಲಿನಿಂದ ತಯಾರಿಸಿದ ತುಪ್ಪ ನಿಜವಾದ ತುಪ್ಪವಲ್ಲ ಎಂದು ಅಭಿಪ್ರಾಯಪಟ್ಟರು. ಸುಶ್ರುತರು ಜೀವಿಗಳಿಗೆ ಹಿತವಾದ ಆಹಾರಗಳ ಪಟ್ಟಿಯಲ್ಲಿ ನೀರಿನ ನಂತರ ತುಪ್ಪಕ್ಕೆ ಸ್ಥಾನ ನೀಡಿದ್ದಾರೆ. ಆದರೆ ಇಂದು ತುಪ್ಪ ಆರೋಗ್ಯಕ್ಕೆ ಹಾನಿಕರ ಎಂಬ ರೀತಿಯಲ್ಲಿ ಪ್ರಚಾರ ಮಾಡಲಾಗುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದರು.

ಆಹಾರದ ದೋಷಗಳನ್ನು ನಿವಾರಿಸುವ ಶಕ್ತಿ ತುಪ್ಪಕ್ಕಿದೆ. ಯಜ್ಞಗಳಲ್ಲಿ ದೇವರಿಗೆ ಸಮರ್ಪಿಸುವ ದ್ರವ್ಯಗಳೊಂದಿಗೆ ತುಪ್ಪದ ಸಂಸರ್ಗ ಅಗತ್ಯ. ಔಷಧದೊಂದಿಗೆ ತುಪ್ಪವನ್ನು ಬಳಸಿದಾಗ ಔಷಧದ ಗುಣವನ್ನು ಹೊತ್ತು ತರುವುದರ ಜೊತೆಗೆ ತನ್ನ ಗುಣವನ್ನೂ ಉಳಿಸಿಕೊಳ್ಳುವ ವಿಶೇಷ ಸಾಮರ್ಥ್ಯ ತುಪ್ಪಕ್ಕಿದೆ ಎಂದು ಶ್ರೀಗಳು ವಿವರಿಸಿದರು.

ಉಪ್ಪಿನಕಾಯಿ ಅಲ್ಲ, ತುಪ್ಪದಿಂದಲೇ ಊಟ ಆರಂಭ!

ತುಪ್ಪದಿಂದಲೇ ಆಹಾರ ಸೇವನೆ ಆರಂಭವಾಗಬೇಕು ಎಂಬುದು ಆಯುರ್ವೇದದ ಅಭಿಮತ. ಆದರೆ ಇಂದು ಉಪ್ಪಿನಕಾಯಿಯಿಂದ ಊಟ ಆರಂಭಿಸುವ ಪದ್ಧತಿ ರೂಢಿಯಾಗಿದೆ. ಇದರಿಂದ ಊಟದ ವ್ಯವಸ್ಥೆಯೇ ಬುಡಮೇಲಾಗುತ್ತದೆ ಎಂದು ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳು ಹೇಳಿದರು.

ಇದೇ ವೇಳೆ ಭಾರತ ಮಂಡಲದ ಚೆನ್ನೈ, ಹುಬ್ಬಳ್ಳಿ-ಧಾರವಾಡ, ಹಾವೇರಿ, ಯಲ್ಲಾಪುರ, ಚಿಕ್ಕಮಗಳೂರು, ಹಾಸನ ಹಾಗೂ ಕೇರಳ ವಲಯದ ಪರವಾಗಿ ಗಜಾನನ ಭಾಗ್ವತ್ ಕುಟುಂಬದವರು ಗುರುಭಿಕ್ಷಾಸೇವೆ ಸಮರ್ಪಿಸಿದರು. ಕೃಷ್ಣ ಕಳಂಜಿ ಹಾವೇರಿ, ಆರ್.ಜಿ. ಭಟ್, ಡಾ. ಶಾರದಾ ಜಯಗೋವಿಂದ ಹಾಗೂ ದಿನಪ್ರಧಾನರಾಗಿ ದತ್ತರಾಜ್ ಮಂಚಾಲೆ ದಂಪತಿ ಉಪಸ್ಥಿತರಿದ್ದರು.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !