September 19, 2026
Saturday, September 19, 2026
spot_img

ವಿದ್ಯಾರ್ಥಿಗಳ ಟೂರ್‌ಗೆ ಸರ್ಕಾರದ ಸೇಫ್ಟಿ ಕವಚ: ಪ್ರವಾಸದಲ್ಲಿ ಇನ್ಮುಂದೆ ರೀಲ್ಸ್ ಮಾಡಂಗಿಲ್ವಂತೆ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಸರ್ಕಾರಿ ಪದವಿ ಕಾಲೇಜುಗಳ ವಿದ್ಯಾರ್ಥಿಗಳ ಶೈಕ್ಷಣಿಕ ಪ್ರವಾಸವನ್ನು ಮತ್ತಷ್ಟು ಸುರಕ್ಷಿತಗೊಳಿಸುವ ಉದ್ದೇಶದಿಂದ ಕರ್ನಾಟಕ ಸರ್ಕಾರ ಹೊಸ ಮಾರ್ಗಸೂಚಿಗಳನ್ನು ಜಾರಿಗೆ ತಂದಿದೆ.

ವಿದ್ಯಾರ್ಥಿಗಳು ಪ್ರವಾಸದ ವೇಳೆ ಅಪಾಯಕಾರಿ ಸ್ಥಳಗಳಲ್ಲಿ ಸೆಲ್ಫಿ ತೆಗೆದುಕೊಳ್ಳುವುದು ಅಥವಾ ರೀಲ್ಸ್ ಮಾಡೋದನ್ನು ನಿರ್ಬಂಧಿಸಲಾಗಿದ್ದು, ಪ್ರವಾಸದ ಅವಧಿಯನ್ನು ಗರಿಷ್ಠ ಐದು ದಿನಗಳಿಗೆ ಸೀಮಿತಗೊಳಿಸಲಾಗಿದೆ.

ಪ್ರಾಂಶುಪಾಲರಿಗೆ ಸೂಚನೆ

ಕಾಲೇಜು ಶಿಕ್ಷಣ ಇಲಾಖೆ ಸೆಪ್ಟೆಂಬರ್ 11ರಂದು ಈ ಕುರಿತು ಸುರಕ್ಷತಾ ಮಾರ್ಗಸೂಚಿಗಳನ್ನು ಹೊರಡಿಸಿದ್ದು, ಪ್ರವಾಸ ಆರಂಭಕ್ಕೂ ಮುನ್ನ ವಿದ್ಯಾರ್ಥಿಗಳಿಗೆ ನಿಯಮಗಳ ಬಗ್ಗೆ ಸ್ಪಷ್ಟ ಮಾಹಿತಿ ನೀಡುವಂತೆ ಪ್ರಾಂಶುಪಾಲರಿಗೆ ಸೂಚಿಸಿದೆ. ಪ್ರವಾಸದ ಸಂದರ್ಭದಲ್ಲಿ ವಿದ್ಯಾರ್ಥಿಗಳ ಚಟುವಟಿಕೆಗಳ ಮೇಲೆ ಬೋಧಕ ಸಿಬ್ಬಂದಿ ನಿರಂತರ ನಿಗಾ ವಹಿಸಬೇಕು ಎಂದು ನಿರ್ದೇಶನ ನೀಡಲಾಗಿದೆ.

ಇದನ್ನೂ ಓದಿ:

ಎಷ್ಟೊಂದು ರೂಲ್ಸ್

  • ಶೈಕ್ಷಣಿಕ ಪ್ರವಾಸ ಆಯೋಜಿಸುವ ಮೊದಲು ಕಾಲೇಜುಗಳು ಇಲಾಖೆಯಿಂದ ಲಿಖಿತ ಅನುಮತಿ ಪಡೆಯುವುದು ಕಡ್ಡಾಯ.
  • ಪ್ರವಾಸಕ್ಕೆ ಸಂಬಂಧಿಸಿದ ಪ್ರಸ್ತಾವನೆಯೊಂದಿಗೆ ವಿದ್ಯಾರ್ಥಿಗಳ ಒಪ್ಪಂದ ಪತ್ರ ಹಾಗೂ ಪೋಷಕರ ಅಧಿಕೃತ ಸಮ್ಮತಿ ಪತ್ರವನ್ನೂ ಸಲ್ಲಿಸಬೇಕು.
  • ಒಮ್ಮೆ ಪ್ರವಾಸಕ್ಕೆ ಅನುಮೋದನೆ ದೊರೆತ ಬಳಿಕ ನಿಗದಿಪಡಿಸಿದ ಪ್ರವಾಸ ಯೋಜನೆಯಲ್ಲಿ ಬದಲಾವಣೆ ಮಾಡುವಂತಿಲ್ಲ.
  • ಅನುಮೋದಿತ ಪಟ್ಟಿಯಲ್ಲಿಲ್ಲದ ಸ್ಥಳಗಳಿಗೆ ವಿದ್ಯಾರ್ಥಿಗಳನ್ನು ಕರೆದೊಯ್ಯುವುದಕ್ಕೂ ನಿರ್ಬಂಧವಿದೆ.
  • ಮಳೆಗಾಲದಲ್ಲಿ ಶೈಕ್ಷಣಿಕ ಪ್ರವಾಸ ಆಯೋಜಿಸದಂತೆ ಇಲಾಖೆ ಸಲಹೆ ನೀಡಿದೆ.
  • ನದಿ, ಸಮುದ್ರ, ಜಲಪಾತ, ದಟ್ಟ ಅರಣ್ಯ ಹಾಗೂ ಕಡಿದಾದ ಬೆಟ್ಟಗಳಂತಹ ಅಪಾಯಕಾರಿ ಪ್ರದೇಶಗಳಿಗೆ ಪ್ರವಾಸ ಕೈಗೊಳ್ಳುವ ಸಂದರ್ಭ ಮುನ್ನೆಚ್ಚರಿಕಾ ಕ್ರಮಗಳನ್ನು ಕಡ್ಡಾಯವಾಗಿ ಕೈಗೊಳ್ಳಬೇಕು.
  • ಟ್ರೆಕ್ಕಿಂಗ್ ಅಥವಾ ಈಜು ಪ್ರವಾಸದ ಭಾಗವಾಗಿದ್ದರೆ, ತರಬೇತಿ ಪಡೆದ ಪ್ರಮಾಣೀಕೃತ ತಜ್ಞರು ತಂಡದೊಂದಿಗೆ ಇರಬೇಕು.
  • ಸ್ಥಳೀಯ ಸುರಕ್ಷತಾ ಅನುಮತಿಗಳನ್ನೂ ಪಡೆಯಬೇಕಾಗುತ್ತದೆ.
  • ಪ್ರವಾಸದ ಮಾಹಿತಿ ಮತ್ತು ಸಂಪೂರ್ಣ ಮಾರ್ಗಸೂಚಿಯನ್ನು ಸ್ಥಳೀಯ ಪೊಲೀಸರಿಗೆ ಮುಂಚಿತವಾಗಿ ನೀಡಬೇಕು.
  • ಪ್ರತಿ ಪ್ರವಾಸ ತಂಡದೊಂದಿಗೆ ಕನಿಷ್ಠ ಒಬ್ಬ ಖಾಯಂ ಉಪನ್ಯಾಸಕ ಇರಬೇಕು.
  • ಅತಿಥಿ ಉಪನ್ಯಾಸಕರ ಮೇಲ್ವಿಚಾರಣೆಯಲ್ಲೇ ವಿದ್ಯಾರ್ಥಿಗಳನ್ನು ಪ್ರವಾಸಕ್ಕೆ ಕರೆದೊಯ್ಯುವಂತಿಲ್ಲ.
  • ಗರಿಷ್ಠ ನಾಲ್ವರು ಬೋಧಕ ಸಿಬ್ಬಂದಿ ಪ್ರವಾಸದಲ್ಲಿ ಭಾಗವಹಿಸಬಹುದಾಗಿದ್ದು, ಅವರಲ್ಲಿ ಇಬ್ಬರು ಮಹಿಳಾ ಉಪನ್ಯಾಸಕರು ಇರಬೇಕು. ಜೊತೆಗೆ ಒಬ್ಬ ಗ್ರೂಪ್-ಡಿ ಸಿಬ್ಬಂದಿಯೂ ತಂಡದಲ್ಲಿರಬೇಕು.

ವಿದ್ಯಾರ್ಥಿಗಳ ಶೈಕ್ಷಣಿಕ ಅನುಭವಕ್ಕೆ ಧಕ್ಕೆಯಾಗದಂತೆ ಪ್ರವಾಸಗಳು ಸುರಕ್ಷಿತವಾಗಿ ನಡೆಯಬೇಕು ಎಂಬ ಉದ್ದೇಶದಿಂದ ಈ ನಿಯಮಗಳನ್ನು ರೂಪಿಸಲಾಗಿದೆ. ಹೀಗಾಗಿ ಇನ್ನು ಮುಂದೆ ಕಾಲೇಜು ಪ್ರವಾಸದಲ್ಲಿ ಮನರಂಜನೆಗಿಂತ ಸುರಕ್ಷತೆ ಮತ್ತು ಜವಾಬ್ದಾರಿಯುತ ವರ್ತನೆಗೆ ಹೆಚ್ಚಿನ ಆದ್ಯತೆ ಸಿಗಲಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !