ಹೊಸದಿಗಂತ ಡಿಜಿಟಲ್ ಡೆಸ್ಕ್:
ಈಗಿನ ಕ್ರಿಕೆಟ್ ಪ್ರಪಂಚದಲ್ಲಿ ಫ್ರಾಂಚೈಸಿ ಲೀಗ್‌ಗಳ ಕಾರುಬಾರು ಯಾವ ಮಟ್ಟದಲ್ಲಿದೆ ಎಂದು ಎಲ್ಲರಿಗೂ ಗೊತ್ತೇ ಇದೆ. ಕೋಟಿ ಕೋಟಿ ರೂಪಾಯಿ, ಸಿಕ್ಕಾಪಟ್ಟೆ ಗ್ಲಾಮರ್, ದುಬಾರಿ ಲೈಫ್‌ಸ್ಟೈಲ್ ಅಂದ ತಕ್ಷಣ ಯುವ ಆಟಗಾರರು ಲೀಗ್‌ಗಳ ಕಡೆಗೆ ಓಡೋದು ಇತ್ತೀಚೆಗೆ ಕಾಮನ್ ಆಗಿಬಿಟ್ಟಿದೆ. ಆದ್ರೆ, ಈ ಟ್ರೆಂಡ್‌ಗೆ ಉಲ್ಟಾ ಹೊಡೆದು, ಇಡೀ ಕ್ರಿಕೆಟ್ ಲೋಕವೇ ತಿರುಗಿ ನೋಡುವಂತೆ ಮಾಡಿದ್ದಾರೆ ಇಂಗ್ಲೆಂಡ್‌ನ ನಾಯಕ ಹ್ಯಾರಿ ಬ್ರೂಕ್.
ಇಂಡಿಯನ್ ಪ್ರೀಮಿಯರ್ ಲೀಗ್ ಹಾಗೂ ಆಸ್ಟ್ರೇಲಿಯಾದ ಬಿಗ್ ಬ್ಯಾಷ್ ಲೀಗ್ ನಂತಹ ದೊಡ್ಡ ದೊಡ್ಡ ಟೂರ್ನಿಗಳಲ್ಲಿ ಆಡಿದ್ರೆ ಕಣ್ಣು ಮುಚ್ಚಿ ಕೋಟಿ ಕೋಟಿ ಹಣ ಜೇಬಿಗಿಳಿಸಬಹುದು. ಪ್ರಾಂಚೈಸಿಗಳು ಕೂಡ ಇವರ ಮೇಲೆ ಕೋಟಿಗಳ ಮಳೆ ಸುರಿಸೋಕೆ ರೆಡಿಯಾಗಿದ್ದರು. ಆದ್ರೆ ಹ್ಯಾರಿ ಬ್ರೂಕ್ ಮಾತ್ರ, “ನಂಗೆ ಈ ಕೋಟಿ ದುಡ್ಡು, ಆ ಗ್ಲಾಮರ್ ಬೇಡ… ಮೊದಲು ನನ್ನ ದೇಶದ ತಂಡಕ್ಕೆ ಆಡೋದು ಮುಖ್ಯ” ಎಂದು ದೊಡ್ಡ ಆಫರ್‌ಗಳನ್ನೆಲ್ಲಾ ಬದಿಗೆ ಸರಿಸಿದ್ದಾರೆ.
ತಮ್ಮ ಈ ನಿರ್ಧಾರದ ಬಗ್ಗೆ ಮನಬಿಚ್ಚಿ ಮಾತನಾಡಿರುವ ಬ್ರೂಕ್, “ನಾನು ಇಂಗ್ಲೆಂಡ್ ಪರ ಟೆಸ್ಟ್, ಒನ್‌ಡೇ ಮತ್ತು ಟಿ20 ಮೂರೂ ಮಾದರಿಯಲ್ಲಿ ದೀರ್ಘಕಾಲ ಆಡಬೇಕು ಅಂದುಕೊಂಡಿದ್ದೇನೆ. ಸತತವಾಗಿ ಲೀಗ್‌ಗಳ ಮೇಲೆ ಲೀಗ್ ಆಡ್ತಾ ಹೋದ್ರೆ ಮೈ-ಕೈ ನೋವು, ಮಾನಸಿಕ ಆಯಾಸ ಜಾಸ್ತಿಯಾಗುತ್ತೆ. ದೇಶಕ್ಕಾಗಿ ಮೈದಾನಕ್ಕಿಳಿದಾಗ ನನ್ನ 100% ಎಫರ್ಟ್ ನೀಡಬೇಕಂದ್ರೆ ಸರಿಯಾದ ವಿಶ್ರಾಂತಿ ಮತ್ತು ಕೆಲಸದ ಒತ್ತಡ ನಿರ್ವಹಣೆ ತುಂಬಾ ಮುಖ್ಯ,” ಎಂದು ಸ್ಪಷ್ಟವಾಗಿ ಹೇಳಿದ್ದಾರೆ.
ಯುವ ಆಟಗಾರರು ಅಂತಾರಾಷ್ಟ್ರೀಯ ಕ್ರಿಕೆಟ್ ಬಿಟ್ಟು ಲೀಗ್ ಆಡೋಕೆ ಓಡುತ್ತಿರುವ ಈ ಕಾಲದಲ್ಲಿ, ಇಂಗ್ಲೆಂಡ್ ತಂಡದ ನಾಯಕನಾಗಿ ಇಂತಹ ಜವಾಬ್ದಾರಿಯುತ ಹೆಜ್ಜೆ ಇಟ್ಟಿರುವುದು ನಿಜಕ್ಕೂ ಮೆಚ್ಚುವಂತದ್ದು. ದುಡ್ಡಿನ ಆಸೆಗೆ ಬೀಳದೆ, ದೇಶಕ್ಕೆ ಆಡೋ ಗೌರವನೇ ದೊಡ್ಡದು ಎಂದು ತೋರಿಸಿಕೊಟ್ಟಿರುವ ಬ್ರೂಕ್ ನಡೆ ಈಗ ಪ್ರಪಂಚದಾದ್ಯಂತ ಕ್ರಿಕೆಟ್ ವಿಶ್ಲೇಷಕರು ಹಾಗೂ ಅಭಿಮಾನಿಗಳಿಂದ ಭಾರೀ ಪ್ರಶಂಸೆಗೆ ಪಾತ್ರವಾಗಿದೆ.



