ಹೊಸದಿಗಂತ ವರದಿ ಕಲಬುರಗಿ:
ಜಮೀನು ಉಳುಮೆ ಮಾಡೋ ಸಣ್ಣ ವಿಚಾರಕ್ಕೆ ಶುರುವಾದ ಜಗಳ, ಕೊನೆಯಲ್ಲಿ ಒಬ್ಬನ ಪ್ರಾಣವನ್ನೇ ತೆಗೆದುಬಿಟ್ಟಿದೆ. ಸ್ವಂತ ಅಣ್ಣನೇ ತಮ್ಮನ ತಲೆ ಮೇಲೆ ಕಲ್ಲು ಎತ್ತಿಹಾಕಿ ಕ್ರೂರವಾಗಿ ಹತ್ಯೆ ಮಾಡಿರೋ ಘಟನೆ ಕಲಬುರಗಿ ತಾಲೂಕಿನ ಭೂಪಾಲತೇಗನೂರ ಗ್ರಾಮದಲ್ಲಿ ನಡೆದಿದೆ.
ಧನರಾಜ್ (ಚಿನ್ನು) ಕೊಲೆಯಾದ ದುರದೃಷ್ಟಕರ ವ್ಯಕ್ತಿ. ಈತನ ಅಣ್ಣ ಶಿವರಾಜ್ ಶೆಳಗ್ಗಿ ಈ ಕೊಲೆ ಮಾಡಿದ ಆರೋಪಿ. ಹೊಲದಲ್ಲಿ ಎಲ್ಲರೂ ಊಟಕ್ಕೆ ಕುಳಿತಿದ್ದಾಗ ಏಕಾಏಕಿ ಮಾತಿಗೆ ಮಾತು ಬೆಳೆದು ಜಗಳ ವಿಕೋಪಕ್ಕೆ ಹೋಗಿದೆ. ಈ ಕೋಪದಲ್ಲಿ ಶಿವರಾಜ್, ತಮ್ಮನ ತಲೆಗೆ ದೊಡ್ಡ ಕಲ್ಲು ಎತ್ತಿಹಾಕಿ ಕೊಂದು ಹಾಕಿದ್ದಾನೆ. ಆಶ್ಚರ್ಯ ಅಂದ್ರೆ, ಕೊಲೆ ಮಾಡಿದ ತಕ್ಷಣ ಆರೋಪಿ ತನ್ನ ತಾಯಿಗೇ ಫೋನ್ ಮಾಡಿ “ನಾನು ತಮ್ಮನ್ನ ಕೊಂದುಬಿಟ್ಟೆ” ಎಂದು ವಿಷಯ ತಿಳಿಸಿದ್ದಾನೆ.
ವಿಷಯ ತಿಳಿಯುತ್ತಿದ್ದಂತೆ ಹೊಲದ ಬಳಿ ಬಂದ ಸಂಬಂಧಿಕರ ಆಕ್ರಂದನ ಮುಗಿಲುಮುಟ್ಟಿತ್ತು. ಸದ್ಯ ವಿಶ್ವವಿದ್ಯಾಲಯ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆ ಕೈಗೊಂಡಿದ್ದಾರೆ.



