September 20, 2026
Sunday, September 20, 2026
spot_img

ದೆಹಲಿಯಲ್ಲಿ ವಾಯು ಮಾಲಿನ್ಯಕ್ಕೆ ಬ್ರೇಕ್: ಅಕ್ಟೋಬರ್ 31 ರೊಳಗೆ ರಸ್ತೆ ಕಾಮಗಾರಿ ಮುಗಿಸಲು ಡೆಡ್‌ಲೈನ್‌

ಹೊಸದಿಗಂತ ಡಿಜಿಟಲ್‌ ಡೆಸ್ಕ್:

ದೇಶದ ರಾಜಧಾನಿ ದೆಹಲಿಯಲ್ಲಿ ಚಳಿಗಾಲದ ಆರಂಭಕ್ಕೂ ಮುನ್ನವೇ ಹೆಚ್ಚಾಗುತ್ತಿರುವ ವಾಯು ಮಾಲಿನ್ಯವನ್ನು ನಿಯಂತ್ರಿಸಲು ದೆಹಲಿ ಸರ್ಕಾರ ಭಾರಿ ಸಿದ್ಧತೆ ನಡೆಸಿದೆ. ಮಾಲಿನ್ಯ ಹೆಚ್ಚಾಗಿರುವ ನಿರ್ದಿಷ್ಟ ಪ್ರದೇಶಗಳನ್ನು ಗುರುತಿಸಿ, ಅಲ್ಲಿಗೆ ತಕ್ಕಂತೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲು ಪರಿಸರ ಸಚಿವ ಮಂಜಿಂದರ್ ಸಿಂಗ್ ಸಿರ್ಸಾ ಅಧಿಕಾರಿಗಳಿಗೆ ಆದೇಶ ನೀಡಿದ್ದಾರೆ.

ಅ. 31 ರೊಳಗೆ ರಸ್ತೆ ದುರಸ್ತಿ ಮುಗಿಯಬೇಕು

ಧೂಳು ಏಳುವುದನ್ನು ತಡೆಯಲು ಮತ್ತು ಸಂಚಾರ ದಟ್ಟಣೆಯನ್ನು ಕಡಿಮೆ ಮಾಡಲು ಬಾಕಿ ಇರುವ ಎಲ್ಲಾ ರಸ್ತೆ ರಿಪೇರಿ ಮತ್ತು ಸಿವಿಲ್ ಕಾಮಗಾರಿಗಳನ್ನು ಅ. 31 ರ ಒಳಗಾಗಿ ಪೂರ್ಣಗೊಳಿಸಬೇಕು ಎಂದು ಸರ್ಕಾರ ಗಡುವು ವಿಧಿಸಿದೆ. ಒಂದು ವೇಳೆ ದೊಡ್ಡ ಯೋಜನೆಗಳಿಂದಾಗಿ ರಸ್ತೆ ಕಾಮಗಾರಿ ತಡವಾದರೆ, ಅಲ್ಲಿ ನಿರಂತರವಾಗಿ ನೀರು ಚಿಮುಕಿಸುವ ಮೂಲಕ ಧೂಳು ಹರಡದಂತೆ ನೋಡಿಕೊಳ್ಳಲು ಸೂಚಿಸಲಾಗಿದೆ.

ಮಾಲಿನ್ಯ ಕೇಂದ್ರಗಳ ಮೇಲೆ ನಿಗಾ

ಗಾಳಿಯ ಗುಣಮಟ್ಟ ಹೆಚ್ಚಿರುವ ಪ್ರದೇಶಗಳ 3 ಕಿ.ಮೀ ವ್ಯಾಪ್ತಿಯಲ್ಲಿ ಮಾಲಿನ್ಯಕ್ಕೆ ಕಾರಣವಾಗುವ ಅಂಶಗಳನ್ನು ಪತ್ತೆಹಚ್ಚಲು ಜಿಲ್ಲಾಡಳಿತಗಳಿಗೆ ತಿಳಿಸಲಾಗಿದೆ. ರಸ್ತೆ ಧೂಳು, ವಾಹನಗಳ ಹೊಗೆ, ಅನಧಿಕೃತ ಪಾರ್ಕಿಂಗ್ ಮತ್ತು ಕಟ್ಟಡ ನಿರ್ಮಾಣದ ತ್ಯಾಜ್ಯಗಳಿಂದ ಉಂಟಾಗುವ ಮಾಲಿನ್ಯವನ್ನು ತಕ್ಷಣವೇ ತಡೆಗಟ್ಟಲು ಆಯಾ ಸಂಸ್ಥೆಗಳಿಗೆ ಜವಾಬ್ದಾರಿ ವಹಿಸಲಾಗಿದೆ.

ಇದನ್ನೂ ಓದಿ:

ಅಕ್ರಮ ಪಾರ್ಕಿಂಗ್ ಮತ್ತು ಕಸ ಸುಡುವುದಕ್ಕೆ ದಂಡ

ರಸ್ತೆಗಳಲ್ಲಿ ಟ್ರಾಫಿಕ್ ಜಾಮ್ ಉಂಟಾಗಿ ವಾಹನಗಳು ಒಂದೇ ಕಡೆ ನಿಂತು ಹೊಗೆ ಸೂಸುವುದನ್ನು ತಪ್ಪಿಸಲು ಅಕ್ರಮ ಪಾರ್ಕಿಂಗ್ ಮತ್ತು ಒತ್ತುವರಿಗಳನ್ನು ತೆರವುಗೊಳಿಸಲಾಗುತ್ತಿದೆ. ಆನಂದ್ ವಿಹಾರ್ ಬಸ್ ನಿಲ್ದಾಣದ ಬಳಿ ನಿಯಮ ಉಲ್ಲಂಘಿಸುವ ವಾಹನಗಳನ್ನು ಜಪ್ತಿ ಮಾಡಲು ಕ್ರೇನ್‌ಗಳನ್ನು ನಿಯೋಜಿಸಲಾಗಿದೆ. ಇದರೊಂದಿಗೆ ಪ್ಲಾಸ್ಟಿಕ್, ರಬ್ಬರ್ ಮತ್ತು ತ್ಯಾಜ್ಯಗಳನ್ನು ಎಲ್ಲೆಂದರಲ್ಲಿ ಸುಡುವುದನ್ನು ಕಟ್ಟುನಿಟ್ಟಾಗಿ ನಿಷೇಧಿಸಲಾಗಿದ್ದು, ನಿಯಮ ಮೀರುವವರಿಗೆ ದಂಡ ವಿಧಿಸಲು ಸೂಚಿಸಲಾಗಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !