ಹೊಸದಿಗಂತ ಡಿಜಿಟಲ್ ಡೆಸ್ಕ್:
ಮುಂಬೈನ ಕೋಸ್ಟಲ್ ರೋಡ್ ಎಕ್ಸ್ಪ್ರೆಸ್ವೇನಲ್ಲಿ ಭಾನುವಾರ ಮುಂಜಾನೆ ಭೀಕರ ಕಾರು ಅಪಘಾತವೊಂದು ಸಂಭವಿಸಿದೆ. ಮಿತಿಮೀರಿದ ವೇಗದಲ್ಲಿದ್ದ ಬಿಎಂಡಬ್ಲ್ಯೂ ಕಾರೊಂದು ಸೇತುವೆಯ ಮೇಲಿಂದ ಕೆಳಕ್ಕೆ ಹಾರಿ ಬಿದ್ದ ಪರಿಣಾಮ ಮೂವರು ಯುವಕರು ದಾರುಣವಾಗಿ ಸಾವನ್ನಪ್ಪಿದ್ದು, ಮತ್ತೊರ್ವನ ಸ್ಥಿತಿ ಗಂಭೀರವಾಗಿದೆ ಎಂದು ತಿಳಿದು ಬಂದಿದೆ.
ಸಿಸಿಟಿವಿಯಲ್ಲಿ ಸೆರೆಯಾಯ್ತು ಭೀಕರ ದೃಶ್ಯ
ಇಂದು ಮುಂಜಾನೆ ಸುಮಾರು 5 ಗಂಟೆಯ ವೇಳೆಗೆ ಈ ದುರಂತ ನಡೆದಿದೆ. ಕಾರು ಮರೈನ್ ಡ್ರೈವ್ನಿಂದ ಹಾಜಿ ಅಲಿ ಕಡೆಗೆ ಅತಿ ವೇಗವಾಗಿ ಚಲಿಸುತ್ತಿತ್ತು. ಮುಂಜಾನೆ 5:03 ರ ಸುಮಾರಿಗೆ ಚಾಲಕನ ನಿಯಂತ್ರಣ ತಪ್ಪಿದ ಕಾರು, ಕೋಸ್ಟಲ್ ರೋಡ್ನ ಎತ್ತರದ ಸೇತುವೆಯ ಮೇಲಿಂದ ನೇರವಾಗಿ ಕೆಳಗಿನ ನಿರ್ಮಾಣ ಹಂತದ ಜಾಗಕ್ಕೆ ಹಾರಿ ಬಿದ್ದಿರುವುದು ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಅಪಘಾತದ ತೀವ್ರತೆಗೆ ಕಾರು ಸಂಪೂರ್ಣವಾಗಿ ನಜ್ಜುಗುಜ್ಜಾಗಿದೆ.
ಮೂವರು ಯುವಕರು ಬಲಿ
ಅಪಘಾತ ನಡೆದ ತಕ್ಷಣ ಕಾರಿನಲ್ಲಿದ್ದ ನಾಲ್ವರನ್ನೂ ಹತ್ತಿರದ ನಾಯರ್ ಆಸ್ಪತ್ರೆಗೆ ದಾಖಲಿಸಲಾಯಿತಾದರೂ, ಅದಾಗಲೇ ಮೂವರು ಕೊನೆಯುಸಿರೆಳೆದಿದ್ದರು. ಮೃತರನ್ನು ಶನಯ್ ಗಜ್ಜಲ್ (21) ಮತ್ತು 17 ವರ್ಷದ ಅಪ್ರಾಪ್ತ ಬಾಲಕ ಎಂದು ಗುರುತಿಸಲಾಗಿದೆ. ಮೃತಪಟ್ಟ ಮತ್ತೊಬ್ಬ ಯುವಕನ ಗುರುತು ಇನ್ನಷ್ಟೇ ಪತ್ತೆಯಾಗಬೇಕಿದೆ. ಆಸ್ಪತ್ರೆಯಲ್ಲಿ ಸಾವು-ಬದುಕಿನ ನಡುವೆ ಹೋರಾಡುತ್ತಿರುವ ಮತ್ತೊಬ್ಬ ಯುವಕನ ಸ್ಥಿತಿ ಗಂಭೀರವಾಗಿದೆ.
ಅತಿ ವೇಗವೇ ಮುಳುವಾಯ್ತು
ದಕ್ಷಿಣ ಮುಂಬೈನ ಮರೈನ್ ಡ್ರೈವ್ ಹಾಗೂ ವರ್ಲಿಯನ್ನು ಸಂಪರ್ಕಿಸುವ ಈ 10.58 ಕಿ.ಮೀ. ಉದ್ದದ ಹೈ-ಸ್ಪೀಡ್ ರಸ್ತೆಯಲ್ಲಿ ಮುಂಜಾನೆ ವೇಳೆ ಖಾಲಿ ಇರುವುದನ್ನು ಕಂಡು ಕಾರನ್ನು ಮಿತಿಮೀರಿದ ವೇಗದಲ್ಲಿ ಚಲಾಯಿಸಿದ್ದೇ ಈ ದುರಂತಕ್ಕೆ ಕಾರಣ ಎಂದು ಕಂಟ್ರೋಲ್ ರೂಮ್ ಅಧಿಕಾರಿಗಳು ತಿಳಿಸಿದ್ದಾರೆ. ಈ ಭೀಕರ ಘಟನೆಯ ಕುರಿತು ಮುಂಬೈ ಪೊಲೀಸರು ತನಿಖೆ ಆರಂಭಿಸಿದ್ದಾರೆ.



