ಹೊಸದಿಗಂತ ಡಿಜಿಟಲ್ ಡೆಸ್ಕ್:
ವೆಲ್ಲಿಂಗ್ಟನ್ನ ಬೇಸಿನ್ ರಿಸರ್ವ್ ಮೈದಾನದಲ್ಲಿ ನಡೆದ ಮೊದಲ ಟೆಸ್ಟ್ ಪಂದ್ಯ ಡ್ರಾನಲ್ಲಿ ಅಂತ್ಯಗೊಂಡ ಬಳಿಕ, ಇದೀಗ ಭಾರತ ಮತ್ತು ನ್ಯೂಜಿಲೆಂಡ್ ತಂಡಗಳು ಎರಡನೇ ಹಾಗೂ ಅಂತಿಮ ಟೆಸ್ಟ್ ಪಂದ್ಯಕ್ಕೆ ಸಜ್ಜಾಗಿವೆ. ಕ್ರೈಸ್ಟ್ಚರ್ಚ್ನ ಹ್ಯಾಗ್ಲಿ ಓವಲ್ ಮೈದಾನದಲ್ಲಿ ನಡೆಯಲಿರುವ ಈ ನಿರ್ಣಾಯಕ ಪಂದ್ಯದಲ್ಲಿ ವೇಗದ ಬೌಲರ್ಗಳಿಗೆ ಪಿಚ್ನಿಂದ ಭರ್ಜರಿ ನೆರವು ಸಿಗುವ ನಿರೀಕ್ಷೆಯಿದೆ.
ಮೊದಲ ಟೆಸ್ಟ್ನ ಪಿಚ್ನಲ್ಲಿ ವಿಕೆಟ್ ಪಡೆಯಲು ಪರದಾಡಿದ್ದ ಜಸ್ಪ್ರೀತ್ ಬುಮ್ರಾ, ಪ್ರಸಿದ್ಧ್ ಕೃಷ್ಣ, ಅನ್ಶುಲ್ ಕಾಂಬೋಜ್ ಮತ್ತು ಆಕಾಶ್ ದೀಪ್ ಅವರನ್ನೊಳಗೊಂಡ ಭಾರತದ ವೇಗದ ಪಡೆಯು ಹ್ಯಾಗ್ಲಿ ಓವಲ್ನಲ್ಲಿ ಮಿಂಚಲು ರೆಡಿಯಾಗಿದೆ. ವರದಿಗಳ ಪ್ರಕಾರ, ಇಲ್ಲಿನ ಪಿಚ್ ಮೇಲೆ ಹಸಿರು ಹುಲ್ಲು ಹಾಸಿದ್ದು, ಚೆಂಡು ಉತ್ತಮವಾಗಿ ಬೌನ್ಸ್ ಆಗಲಿದೆ. ಜೊತೆಗೆ ಪಂದ್ಯದ ಮೊದಲ ದಿನದ ಮುನ್ನಾದಿನ ಮಳೆಯ ಮುನ್ಸೂಚನೆಯೂ ಇರುವುದರಿಂದ ವಾತಾವರಣ ವೇಗಿಗಳಿಗೆ ಮತ್ತಷ್ಟು ಸಹಕಾರಿಯಾಗಲಿದೆ. ಗಾಯದಿಂದ ಚೇತರಿಸಿಕೊಂಡು ಮರಳಿರುವ ಬುಮ್ರಾ ಮೊದಲ ಪಂದ್ಯದಲ್ಲಿ 5 ವಿಕೆಟ್ ಕಬಳಿಸಿ ತಮ್ಮ ಲಯವನ್ನು ಸಾಬೀತುಪಡಿಸಿದ್ದಾರೆ.
ಮೊದಲ ಟೆಸ್ಟ್ನ ಕೊನೆಯ ದಿನ ಪಿಚ್ನಿಂದ ನೆರವು ಸಿಗದ ಕಾರಣ ವೇಗಿಗಳು ದಣಿದಿದ್ದರು ಎಂದು ನಾಯಕ ಶುಭಮನ್ ಗಿಲ್ ಸಮರ್ಥಿಸಿಕೊಂಡಿದ್ದಾರೆ. ಮೊಹಮ್ಮದ್ ಸಿರಾಜ್ ಅವರನ್ನು ಹೊರಗಿಟ್ಟ ಬಗ್ಗೆ ಚರ್ಚೆಗಳು ನಡೆದಿದ್ದರೂ, ಬೌಲಿಂಗ್ ವಿಭಾಗದಲ್ಲಿ ದೊಡ್ಡ ಬದಲಾವಣೆ ಮಾಡುವುದಿಲ್ಲ ಎಂದು ಗಿಲ್ ಸುಳಿವು ನೀಡಿದ್ದಾರೆ. ಆದಾಗ್ಯೂ, ವೇಗಿಗಳಿಗೆ ನೆರವಾಗುವ ಪಿಚ್ ಆಗಿರುವುದರಿಂದ ಸ್ಪಿನ್ನರ್ ವಾಷಿಂಗ್ಟನ್ ಸುಂದರ್ ಬದಲಿಗೆ ವೇಗದ ಬೌಲಿಂಗ್ ಆಲ್ರೌಂಡರ್ ನಿತೀಶ್ ಕುಮಾರ್ ರೆಡ್ಡಿ ಅವರಿಗೆ ಅವಕಾಶ ಸಿಗುವ ಸಾಧ್ಯತೆಯಿದೆ. ರವೀಂದ್ರ ಜಡೇಜಾ ಅವರನ್ನು ಈ ಪಿಚ್ನಲ್ಲಿ ಆಡಿಸುವುದು ಸೂಕ್ತವಲ್ಲ ಎಂಬ ಅಭಿಪ್ರಾಯವೂ ವ್ಯಕ್ತವಾಗಿದೆ.
ಬಲಿಷ್ಠ ಬ್ಯಾಟಿಂಗ್ ಪಡೆಯ ಬಲ ಮೊದಲ ಟೆಸ್ಟ್ನಲ್ಲಿ 720 ರನ್ಗಳ ದಾಖಲೆಯ ಮೊತ್ತ ಪೇರಿಸಿದ್ದ ಬ್ಯಾಟಿಂಗ್ ವಿಭಾಗದಲ್ಲಿ ಯಾವುದೇ ಬದಲಾವಣೆ ಇರುವುದಿಲ್ಲ. ಕೆ.ಎಲ್. ರಾಹುಲ್ ಮತ್ತು ರಿಷಭ್ ಪಂತ್ ಅವರ ಭರ್ಜರಿ ಶತಕಗಳು ಹಾಗೂ ಅಗ್ರ ಕ್ರಮಾಂಕದ ಎಲ್ಲಾ ಬ್ಯಾಟರ್ಗಳ ಅರ್ಧಶತಕಗಳು ತಂಡದ ಆತ್ಮವಿಶ್ವಾಸ ಹೆಚ್ಚಿಸಿವೆ. ಏಳನೇ ಕ್ರಮಾಂಕದಲ್ಲಿ ಧ್ರುವ್ ಜುರೆಲ್ ಕೂಡ 78 ರನ್ ಸಿಡಿಸಿ ಮಿಂಚಿದ್ದಾರೆ. ಗಾಯದ ಸಮಸ್ಯೆಯಿಂದ ಬಳಲುತ್ತಿರುವ ನ್ಯೂಜಿಲೆಂಡ್ ಬೌಲಿಂಗ್ ದಾಳಿಯನ್ನು ಮತ್ತೊಮ್ಮೆ ದಂಡಿಸಿ, ಸರಣಿ ಗೆಲ್ಲುವ ತವಕದಲ್ಲಿ ಟೀಮ್ ಇಂಡಿಯಾ ಇದೆ.



