ಹೊಸದಿಗಂತ ಡಿಜಿಟಲ್ ಡೆಸ್ಕ್:
ಭಾರತೀಯ ಮಹಿಳಾ ಕ್ರಿಕೆಟ್ ತಂಡದ ವೈಸ್ ಕ್ಯಾಪ್ಟನ್, ಲೆಫ್ಟ್ ಹ್ಯಾಂಡ್ ಬ್ಯಾಟಿಂಗ್ ಕ್ವೀನ್ ಸ್ಮೃತಿ ಮಂಧಾನ ಈಗ ವಿಶ್ವ ಕ್ರಿಕೆಟ್‌ನ ‘ಸುಲ್ತಾನ್’ ಆಗಿ ಹೊರಹೊಮ್ಮಿದ್ದಾರೆ. ಭಾನುವಾರ ನಡೆದ ಏಷ್ಯನ್ ಗೇಮ್ಸ್ 2026ರ ಎರಡನೇ ಸೆಮಿಫೈನಲ್ ಪಂದ್ಯದಲ್ಲಿ ಬಾಂಗ್ಲಾದೇಶದ ವಿರುದ್ಧ ಬ್ಯಾಟ್ ಬೀಸಿದ ಸ್ಮೃತಿ, ಮಹಿಳಾ T20 ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ರನ್ ಬಾರಿಸಿದ ವಿಶ್ವದ ಮೊದಲ ಬ್ಯಾಟರ್ ಅನ್ನೋ ಸಾರ್ವಕಾಲಿಕ ದಾಖಲೆಯನ್ನು ತಮ್ಮ ಹೆಸರಿಗೆ ಬರೆದುಕೊಂಡಿದ್ದಾರೆ.
ಇಷ್ಟೂ ದಿನ ಈ ದಾಖಲೆ ನ್ಯೂಜಿಲೆಂಡ್‌ನ ಬ್ಯಾಟರ್ ಸುಝಿ ಬೇಟ್ಸ್ ಹೆಸರಿನಲ್ಲಿತ್ತು. ಆದರೆ, ಈ ಮಹತ್ವದ ಪಂದ್ಯಕ್ಕೆ ಇಳಿಯುವ ಮುನ್ನ ಸ್ಮೃತಿ ಅವರಿಗೆ ಈ ವರ್ಲ್ಡ್ ರೆಕಾರ್ಡ್ ಮುರಿಯಲು ಬೇಕಿದ್ದಿದ್ದು ಬರಿ 7 ರನ್ ಅಷ್ಟೇ. ಪಂದ್ಯದ ಮೂರನೇ ಓವರ್‌ನಲ್ಲೇ ಬಾಂಗ್ಲಾದೇಶದ ಬೌಲರ್ ಮಾರುಫಾ ಅಕ್ತರ್ ಎಸೆದ ಕೊನೆಯ ಎರಡು ಎಸೆತಗಳನ್ನು ಬ್ಯಾಕ್-ಟು-ಬ್ಯಾಕ್ ಬೌಂಡರಿಗಟ್ಟಿದ ಸ್ಮೃತಿ, ಸುಲಭವಾಗಿ ಈ ಸಾಧನೆ ಮಾಡಿ T20I ಕ್ರಿಕೆಟ್‌ನಲ್ಲಿ ಇತಿಹಾಸ ಸೃಷ್ಟಿಸಿದ್ದಾರೆ.
ಸ್ಮೃತಿ ಮಂಧಾನಾ ಅವರ ಈ ಓಟ ಬರೀ ಈ ಪಂದ್ಯಕ್ಕಷ್ಟೇ ಸೀಮಿತವಾಗಿಲ್ಲ. ಇತ್ತೀಚೆಗೆ ನಡೆದ ವುಮೆನ್ಸ್ ಏಷ್ಯಾ ಕಪ್‌ನಲ್ಲಿ ಹಾಂಕಾಂಗ್ ವಿರುದ್ಧ ಶತಕ ಸಿಡಿಸಿದ್ದ ಸ್ಮೃತಿ, ಮಹಿಳಾ ಕ್ರಿಕೆಟ್ ಇತಿಹಾಸದಲ್ಲೇ ಅತಿ ಹೆಚ್ಚು ಸೆಂಚುರಿ ಬಾರಿಸಿದ ಆಟಗಾರ್ತಿ ಅನ್ನೋ ಹೆಗ್ಗಳಿಕೆಗೂ ಪಾತ್ರರಾಗಿದ್ದರು. ಅಷ್ಟೇ ಅಲ್ಲದೆ, ಎಲ್ಲಾ ಫಾರ್ಮ್ಯಾಟ್ ಸೇರಿ ಮಹಿಳಾ ಕ್ರಿಕೆಟ್‌ನಲ್ಲಿ ಅತ್ಯಂತ ಹೆಚ್ಚು ರನ್ ಬಾರಿಸಿದ ಆಟಗಾರ್ತಿ ಅನ್ನೋ ಸಾಧನೆಯನ್ನೂ ಏಷ್ಯಾ ಕಪ್‌ನಲ್ಲೇ ತಮ್ಮದಾಗಿಸಿಕೊಂಡಿದ್ದರು.
ಮಹಿಳಾ ಕ್ರಿಕೆಟ್‌ನ ಬೇರೆ ಬೇರೆ ಫಾರ್ಮ್ಯಾಟ್‌ಗಳನ್ನು ನೋಡಿದರೆ, ಒಡಿಐ ಕ್ರಿಕೆಟ್‌ನಲ್ಲಿ ಭಾರತದ ಮಿಥಾಲಿ ರಾಜ್ ಟಾಪ್‌ನಲ್ಲಿದ್ದರೆ, ಟೆಸ್ಟ್ ಕ್ರಿಕೆಟ್‌ನಲ್ಲಿ ಇಂಗ್ಲೆಂಡ್‌ನ ಜಾನ್ ಬ್ರಿಟಿನ್ ಅಗ್ರಸ್ಥಾನದಲ್ಲಿದ್ದಾರೆ.



