September 20, 2026
Sunday, September 20, 2026
spot_img

ಗ್ರಾಹಕರಿಗೆ ಮತ್ತೊಂದು ಬೆಲೆ ಏರಿಕೆ ಶಾಕ್? ಶೀಘ್ರದಲ್ಲೇ ನಂದಿನಿ ಹಾಲಿನ ದರ ಹೆಚ್ಚಳದ ಸುಳಿವು ನೀಡಿದ ಸಿಎಂ ಡಿಕೆಶಿ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ರಾಜ್ಯದ ಜನಸಾಮಾನ್ಯರ ಜೇಬಿಗೆ ಮತ್ತೊಮ್ಮೆ ಕತ್ತರಿ ಬೀಳುವ ಮುನ್ಸೂಚನೆ ಸಿಕ್ಕಿದೆ. ಮುಂಬರುವ ದಿನಗಳಲ್ಲಿ ನಂದಿನಿ ಹಾಲಿನ ದರ ದುಬಾರಿಯಾಗುವ ಸಾಧ್ಯತೆಯಿದ್ದು, ಈ ಕುರಿತು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಮಹತ್ವದ ಸುಳಿವು ನೀಡಿದ್ದಾರೆ.

ಈ ಬಗ್ಗೆ ಚಿಕ್ಕಮಗಳೂರು ಜಿಲ್ಲೆಯ ಬಾಳೆಹೊನ್ನೂರಿನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಹೈನುಗಾರರ ಹಿತದೃಷ್ಟಿಯಿಂದ ಹಾಲಿನ ದರ ಪರಿಷ್ಕರಣೆ ಮಾಡುವ ಬಗ್ಗೆ ಶೀಘ್ರದಲ್ಲೇ ಉನ್ನತ ಮಟ್ಟದ ಸಭೆ ನಡೆಸಿ ಅಂತಿಮ ತೀರ್ಮಾನ ಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ.

ರೈತರ ನಷ್ಟ ಸರಿದೂಗಿಸಲು ಪ್ಲ್ಯಾನ್

ನೆರೆಯ ತಮಿಳುನಾಡಿನಲ್ಲಿ ಇತ್ತೀಚೆಗೆ ಲೀಟರ್ ಹಾಲಿನ ಬೆಲೆಯನ್ನು 9 ರಿಂದ 10 ರೂ.ವರೆಗೆ ಹೆಚ್ಚಿಸಲಾಗಿದೆ. ಅದೇ ಮಾದರಿಯಲ್ಲಿ ಕರ್ನಾಟಕದಲ್ಲೂ ತಮಗಾಗಿರುವ ನಷ್ಟ ಸರಿದೂಗಿಸಲು ಲೀಟರ್ ಹಾಲಿಗೆ 8 ರಿಂದ 9 ರೂ. ಹೆಚ್ಚಳ ಮಾಡಿಕೊಡಬೇಕು ಎಂದು ರಾಜ್ಯದ ಹೈನುಗಾರರು ಸರ್ಕಾರವನ್ನು ಒತ್ತಾಯಿಸುತ್ತಿದ್ದಾರೆ. ರೈತರ ಈ ನ್ಯಾಯಯುತ ಬೇಡಿಕೆಯನ್ನು ಈಡೇರಿಸುವ ನಿಟ್ಟಿನಲ್ಲಿ ಸರ್ಕಾರವು ಶೀಘ್ರದಲ್ಲೇ ಎಲ್ಲ ಹಾಲು ಒಕ್ಕೂಟಗಳ ಪ್ರಮುಖರ ಸಭೆ ಕರೆಯಲಿದೆ ಎಂದು ಡಿ.ಕೆ. ಶಿವಕುಮಾರ್ ಸ್ಪಷ್ಟಪಡಿಸಿದ್ದಾರೆ.

ಹೈನುಗಾರಿಕೆಯಲ್ಲಿ ನಷ್ಟದ ಆತಂಕ

ಪ್ರಸ್ತುತ ಮಾರುಕಟ್ಟೆಯಲ್ಲಿ ಹಿಂಡಿ, ಬೂಸಾ ಹಾಗೂ ಪಶು ಆಹಾರಗಳ ಬೆಲೆ ಗಗನಕ್ಕೇರಿದೆ. ಇದರ ಜತೆಗೆ ಮೇವಿನ ಕೊರತೆಯೂ ಎದುರಾಗಿದ್ದು, ಹಾಲು ಉತ್ಪಾದಕ ರೈತರು ಆರ್ಥಿಕ ನಷ್ಟ ಅನುಭವಿಸುತ್ತಿದ್ದಾರೆ. ಹಾಲಿನ ಡೈರಿಗಳು ಕೂಡ ಸಂಕಷ್ಟಕ್ಕೆ ಸಿಲುಕಿವೆ. ನೆರೆರಾಜ್ಯಗಳಲ್ಲಿ ಹಾಲಿಗೆ ಉತ್ತಮ ಬೆಲೆ ಸಿಗುತ್ತಿರುವುದರಿಂದ, ನಮ್ಮ ರಾಜ್ಯದ ಹಾಲು ಹೊರರಾಜ್ಯಗಳ ಕಡೆಗೆ ರಫ್ತಾಗುತ್ತಿದೆ. ಇದರಿಂದ ಸ್ಥಳೀಯ ಒಕ್ಕೂಟಗಳಿಗೆ ಹಾಲಿನ ಕೊರತೆ ಎದುರಾಗುವ ಭೀತಿ ಎದುರಾಗಿದೆ.

ಇದನ್ನೂ ಓದಿ:

ಶೀಘ್ರದಲ್ಲೇ ಪರಿಹಾರ

ರೈತರು ಮತ್ತು ಹಾಲು ಉತ್ಪಾದಕರ ಸಂಘಗಳು ಎದುರಿಸುತ್ತಿರುವ ಈ ಎಲ್ಲಾ ಬಿಕ್ಕಟ್ಟುಗಳಿಗೆ ನಾವು ಶೀಘ್ರದಲ್ಲೇ ಸೂಕ್ತ ಪರಿಹಾರ ಕಂಡುಕೊಳ್ಳಲಿದ್ದೇವೆ. ಹೈನುಗಾರರನ್ನು ನಷ್ಟದಿಂದ ರಕ್ಷಿಸುವುದು ನಮ್ಮ ಸರ್ಕಾರದ ಕರ್ತವ್ಯವಾಗಿದೆ ಎಂದು ಡಿ.ಕೆ. ಶಿವಕುಮಾರ್ ಭರವಸೆ ನೀಡಿದ್ದಾರೆ. ಹೀಗಾಗಿ ಹಾಲಿನ ದರ ಏರಿಕೆಯಾಗುವುದು ಬಹುತೇಕ ಖಚಿತ ಎನ್ನಲಾಗುತ್ತಿದ್ದು, ಇದು ಗ್ರಾಹಕರ ಬಜೆಟ್ ಏರುಪೇರಾಗುವಂತೆ ಮಾಡುವುದು ಗ್ಯಾರಂಟಿ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !