ಹೊಸದಿಗಂತ ಡಿಜಿಟಲ್ ಡೆಸ್ಕ್:
ಬಿಡದಿ ಸಮೀಪದ ಫಾರ್ಮ್‌ಹೌಸ್‌ನಲ್ಲಿ ಪತ್ತೆಯಾದ ನಕಲಿ ಔಷಧ ಜಾಲ ಪ್ರಕರಣಕ್ಕೆ ಸಂಬಂಧಿಸಿದಂತೆ ಕರ್ನಾಟಕ ಆಹಾರ ಸುರಕ್ಷತೆ ಮತ್ತು ಔಷಧ ಆಡಳಿತ ಇಲಾಖೆ ಕಠಿಣ ಕ್ರಮ ಕೈಗೊಂಡಿದೆ.
ನಕಲಿ ಔಷಧಿಗಳ ಖರೀದಿ, ಸಂಗ್ರಹ ಹಾಗೂ ಸರಬರಾಜಿನಲ್ಲಿ ಭಾಗಿಯಾಗಿರುವ ಆರೋಪದ ಹಿನ್ನೆಲೆಯಲ್ಲಿ ಸಗಟು–ಚಿಲ್ಲರೆ ಔಷಧ ಮಳಿಗೆಗಳು ಮತ್ತು ಆಸ್ಪತ್ರೆಗಳ ಔಷಧಾಲಯ ಸೇರಿದಂತೆ 24 ಸಂಸ್ಥೆಗಳ ವಿರುದ್ಧ ಕ್ರಮ ಜರುಗಿಸಲಾಗಿದೆ.
ಆಗಸ್ಟ್ 18ರಂದು ಬಿಡದಿ ಬಳಿಯ ಕುರುಬರಕೇರನಹಳ್ಳಿಯ ಫಾರ್ಮ್‌ಹೌಸ್ ಮೇಲೆ ಔಷಧ ಜಾರಿ ವಿಭಾಗದ ಅಧಿಕಾರಿಗಳು ದಾಳಿ ನಡೆಸಿದ್ದರು. ಯಾವುದೇ ಮಾನ್ಯ ಪರವಾನಗಿ ಇಲ್ಲದೆ ಬೇರೆ ರಾಜ್ಯಗಳಿಂದ ಕಡಿಮೆ ಬೆಲೆಗೆ ಔಷಧಿಗಳನ್ನು ತಂದು, ಹೊಸ ಪ್ಯಾಕಿಂಗ್‌ನಲ್ಲಿ ತುಂಬಿ, ಪ್ರತಿಷ್ಠಿತ ಔಷಧ ಕಂಪನಿಗಳ ಹೆಸರಿನ ನಕಲಿ ಲೇಬಲ್‌ಗಳನ್ನು ಅಂಟಿಸಲಾಗುತ್ತಿತ್ತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ದಾಳಿಯಲ್ಲಿ ಸುಮಾರು 5.05 ಕೋಟಿ ಮೌಲ್ಯದ ನಕಲಿ ಹಾಗೂ ಅವಧಿ ಮೀರಿದ ಔಷಧಿಗಳು, ನಕಲಿ ಲೇಬಲ್‌ಗಳು, ಪ್ಯಾಕಿಂಗ್ ಸಾಮಗ್ರಿ ಮತ್ತು ಇಂಜೆಕ್ಷನ್ ತುಂಬುವ ಯಂತ್ರಗಳನ್ನು ವಶಪಡಿಸಿಕೊಳ್ಳಲಾಗಿದೆ. ಐಸಿಯು, ಜೀವ ರಕ್ಷಕ ಹಾಗೂ ಕ್ಯಾನ್ಸರ್ ಚಿಕಿತ್ಸೆಗೆ ಬಳಸುವ ಔಷಧಿಗಳೂ ಇದರಲ್ಲಿ ಸೇರಿವೆ ಎಂದು ಪ್ರಾಥಮಿಕ ತನಿಖೆಯಲ್ಲಿ ತಿಳಿದುಬಂದಿದೆ.
ರದ್ದು ಮಾಡಲಾದ ಫಾರ್ಮಿಸಿಗಳು
ಪ್ರಕರಣಕ್ಕೆ ಸಂಬಂಧಿಸಿದಂತೆ ಸಾಗರ್ ಫಾರ್ಮಾ, ಸೂರ್ಯ ಸ್ಪೆಷಾಲಿಟಿ ಫಾರ್ಮಾ, ಪಟೇಲ್ ಮೆಡಿ ಟ್ರೇಡ್, ಸ್ಟ. ಫಿಲೋಮಿನಾ ಆಸ್ಪತ್ರೆ ಡ್ರಗ್ ಸೆಂಟರ್, ಕೃಷ್ಣ ಹೆಲ್ತ್‌ಕೇರ್, ಜೈಮಸ್ ಫಾರ್ಮಾ, ಎಸ್‌ಡಬ್ಲ್ಯುಎಸ್ ಫಾರ್ಮಾ, ಬೆಂಗಳೂರು ಸ್ಪೆಷಾಲಿಟಿ ಫಾರ್ಮಾ ಘಟಕಗಳು ಹಾಗೂ ಪಟೇಲ್ ಮೆಡಿಕಲ್ಸ್ ಸೇರಿದಂತೆ 16 ಸಂಸ್ಥೆಗಳ ಔಷಧ ಪರವಾನಗಿಗಳನ್ನು ಸಂಪೂರ್ಣವಾಗಿ ರದ್ದುಗೊಳಿಸಲಾಗಿದೆ.
ಇದನ್ನೂ ಓದಿ:
ಅಮಾನತುಗೊಳಿಸಲಾದ ಸಂಸ್ಥೆಗಳು
ಇದೇ ವೇಳೆ ಮೆಡ್ ಫಾರ್ಮಾ, ವಿವಾಂತ ಫಾರ್ಮಾಸ್ಯುಟಿಕಲ್ಸ್, ಮಾರುತಿ ಮೆಡಿಕಲ್ಸ್, ವಿವಾ ಫಾರ್ಮಾ, ಹೈ-5 ಫಾರ್ಮಾ, ಸಾಗರ್ ಫಾರ್ಮಾ ಘಟಕ-2, ಸೂರ್ಯ ಸ್ಪೆಷಾಲಿಟಿ ಆಸ್ಪತ್ರೆ ಸೇರಿದಂತೆ 8 ಸಂಸ್ಥೆಗಳ ಪರವಾನಗಿಗಳನ್ನು ಅಮಾನತುಗೊಳಿಸಲಾಗಿದೆ. ನೆಲಮಂಗಲದ ಕೆಂಪೇನಲಿಂಗನಹಳ್ಳಿಯಲ್ಲಿರುವ ಫೈಜರ್ ಲಿಮಿಟೆಡ್ ಸಿ ಅಂಡ್ ಎಫ್ ಉಗ್ರಾಣದ ಪರವಾನಗಿಯನ್ನೂ ಅಮಾನತುಗೊಳಿಸಲಾಗಿದೆ. ಅಲ್ಲಿ ಫೈಜರ್ ಹೆಸರಿನ ನಕಲಿ ಲೇಬಲ್‌ಗಳು ಪತ್ತೆಯಾಗಿರುವ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ನಕಲಿ ಔಷಧ ಜಾಲದ ಹಿಂದೆ ಇರುವ ಇತರ ಆರೋಪಿಗಳು ಹಾಗೂ ಸರಬರಾಜು ಜಾಲದ ಕುರಿತು ಎಸ್‌ಐಟಿ ತನಿಖೆ ಮುಂದುವರಿಸಿದೆ. ಈ ಜಾಲ ಹಲವು ರಾಜ್ಯಗಳಿಗೆ ವಿಸ್ತರಿಸಿರುವ ಸಾಧ್ಯತೆಯನ್ನೂ ಅಧಿಕಾರಿಗಳು ಪರಿಶೀಲಿಸುತ್ತಿದ್ದಾರೆ.



