ಹೊಸದಿಗಂತ ಡಿಜಿಟಲ್ ಡೆಸ್ಕ್:
ಕೆಪಿಎಸ್ಸಿ ನಡೆಸಿದ ಪಶುವೈದ್ಯಾಧಿಕಾರಿಗಳ ನೇಮಕಾತಿಯಲ್ಲಿ ನಡೆದಿದೆ ಎನ್ನಲಾದ ಅಕ್ರಮಗಳ ತನಿಖೆಗೆ ಕರ್ನಾಟಕ ಹೈಕೋರ್ಟ್ ವಿಶೇಷ ತನಿಖಾ ತಂಡ ರಚಿಸಿದೆ.
ಹಿರಿಯ ಐಪಿಎಸ್ ಅಧಿಕಾರಿ ಹಾಗೂ ಜೈಲು ಮತ್ತು ಸುಧಾರಣಾ ಸೇವೆಗಳ ಡಿಜಿಪಿ ಅಲೋಕ್ ಕುಮಾರ್ ನೇತೃತ್ವದಲ್ಲಿ ಐವರು ಅಧಿಕಾರಿಗಳ ತಂಡ ತನಿಖೆ ನಡೆಸಲಿದೆ.
ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರ ಪೀಠ ಈ ಆದೇಶ ನೀಡಿದ್ದು, ಪ್ರಸ್ತುತ ಪ್ರಕರಣದ ತನಿಖೆ ನಡೆಸುತ್ತಿರುವ ಸಿಐಡಿ ಹಾಗೂ ಸಂಬಂಧಪಟ್ಟ ಪೊಲೀಸ್ ಅಧಿಕಾರಿಗಳ ಬಳಿ ಇರುವ ದಾಖಲೆಗಳು, ದಾಖಲೆಪತ್ರಗಳು ಮತ್ತು ಎಲೆಕ್ಟ್ರಾನಿಕ್ ಸಾಕ್ಷ್ಯಗಳನ್ನು ಹೊಸ ಎಸ್ಐಟಿಗೆ ಹಸ್ತಾಂತರಿಸುವಂತೆ ಸೂಚಿಸಿದೆ.
100 ದಿನಗಳೊಳಗೆ ಅಂತಿಮ ವರದಿ
ತನಿಖೆ ಆರಂಭಿಸಿದ ದಿನದಿಂದ 100 ದಿನಗಳೊಳಗೆ ಅಂತಿಮ ವರದಿ ಸಲ್ಲಿಸಬೇಕು. ಹಾಗೂ ಪ್ರತಿ 30 ದಿನಗಳಿಗೊಮ್ಮೆ ತನಿಖೆಯ ಪ್ರಗತಿ ವರದಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಬೇಕೆಂದು ಸೂಚಿಸಲಾಗಿದೆ.
ಇದನ್ನೂ ಓದಿ:
ತಂಡದಲ್ಲಿ ಯಾರೆಲ್ಲ ಇದ್ದಾರೆ
ಅಲೋಕ್ ಕುಮಾರ್ ಅವರೊಂದಿಗೆ ಡಿವೈಎಸ್ಪಿ ದರ್ಜೆಯ ಅಧಿಕಾರಿಗಳಲ್ಲದೆ, ರಾಜ್ಯ ವಿಧಿವಿಜ್ಞಾನ ಪ್ರಯೋಗಾಲಯದ ನಿರ್ದೇಶಕಿ ಡಿವ್ಯಾ ಗೋಪಿನಾಥ್, ಡಿಸಿಪಿ ಅನೂಪ್ ಶೆಟ್ಟಿ, ಎಸ್ಪಿ ಕುಶಾಲ್ ಚೌಕ್ಸೆ ಹಾಗೂ ಡಿಸಿಪಿ ಕ್ಷಮಾ ಮಿಶ್ರಾ ತಂಡದಲ್ಲಿದ್ದಾರೆ.
400 ಪಶುವೈದ್ಯಾಧಿಕಾರಿಗಳ ನೇಮಕಾತಿಗೆ ಸಂಬಂಧಿಸಿದಂತೆ ಪ್ರಶ್ನೆಪತ್ರಿಕೆ ಸೋರಿಕೆ, ಪರೀಕ್ಷಾ ದಾಖಲೆಗಳು ಮತ್ತು OMR ಉತ್ತರ ಪತ್ರಿಕೆಗಳಲ್ಲಿ ಅಕ್ರಮ ನಡೆದಿದೆ ಎಂಬ ಆರೋಪಗಳ ಹಿನ್ನೆಲೆಯಲ್ಲಿ ಪ್ರಕರಣ ತನಿಖೆಯಲ್ಲಿದೆ.
ಹೀಗಾಗಿ ಕೆಪಿಎಸ್ಸಿ ನೇಮಕಾತಿ ಪ್ರಕ್ರಿಯೆಯಲ್ಲಿನ ಅಕ್ರಮಗಳ ಕುರಿತು ಇದುವರೆಗೆ ನಡೆದ ತನಿಖೆಗೆ ಹೊಸ ದಿಕ್ಕು ಸಿಕ್ಕಿದ್ದು, ಮುಂದಿನ 100 ದಿನಗಳ ಎಸ್ಐಟಿ ತನಿಖೆಯ ವರದಿ ಪ್ರಕರಣದ ಮುಂದಿನ ಕಾನೂನು ಕ್ರಮಗಳಿಗೆ ಮಹತ್ವದ ಆಧಾರವಾಗಲಿದೆ.



