ಹೊಸದಿಗಂತ ಡಿಜಿಟಲ್ ಡೆಸ್ಕ್:
ಕ್ರಿಕೆಟ್ ಲೋಕದಲ್ಲಿ 15 ವರ್ಷದ ಪೋರನೊಬ್ಬ ಬ್ಯಾಟ್ ಹಿಡಿದು ಅಕ್ಷರಶಃ ಸಿಡಿಲಬ್ಬರ ಸೃಷ್ಟಿಸಿದ್ದಾನೆ. ಎಸಿಸಿ ಪುರುಷರ ಏಷ್ಯಾ ಕಪ್ ರೈಸಿಂಗ್ ಸ್ಟಾರ್ಸ್ 2026 ಟೂರ್ನಿಯಲ್ಲಿ ಯುಎಇ ವಿರುದ್ಧ ನಡೆದ ಪಂದ್ಯದಲ್ಲಿ ಭಾರತ ‘ಎ’ ತಂಡದ ಯುವ ಬ್ಯಾಟರ್ ವೈಭವ್ ಸೂರ್ಯವಂಶಿ ಕೇವಲ 53 ಎಸೆತಗಳಲ್ಲಿ 204 ರನ್ ಸಿಡಿಸುವ ಮೂಲಕ ಐತಿಹಾಸಿಕ ವಿಶ್ವದಾಖಲೆ ನಿರ್ಮಿಸಿದ್ದಾರೆ.
ಮೊದಲು ಬ್ಯಾಟಿಂಗ್ ಮಾಡಿದ ಯುಎಇ ತಂಡ ಹರ್ಪ್ರೀತ್ ಸಿಂಗ್ ಭಾಟಿಯಾ (130) ಅವರ ಶತಕದ ನೆರವಿನಿಂದ 50 ಓವರ್ಗಳಲ್ಲಿ 249 ರನ್ ಕಲೆಹಾಕಿತ್ತು. ಆದರೆ ಈ ಸವಾಲಿನ ಮೊತ್ತವನ್ನು ಬೆನ್ನಟ್ಟಿದ ಭಾರತ ‘ಎ’ ತಂಡಕ್ಕೆ ವೈಭವ್ ಅಬ್ಬರದ ಆರಂಭ ನೀಡಿದರು. ಬರೋಬ್ಬರಿ 28 ಸಿಕ್ಸರ್ ಮತ್ತು 7 ಬೌಂಡರಿಗಳೊಂದಿಗೆ ಮೈದಾನದ ಮೂಲೆ ಮೂಲೆಗೂ ಚೆಂಡನ್ನು ಅಟ್ಟಿದ ವೈಭವ್, ಎದುರಾಳಿ ಬೌಲರ್ಗಳ ನಿದ್ದೆಗೆಡಿಸಿದರು. ಪರಿಣಾಮ, ಭಾರತ ಕೇವಲ 14.2 ಓವರ್ಗಳಲ್ಲಿ 3 ವಿಕೆಟ್ ಕಳೆದುಕೊಂಡು 254 ರನ್ ಗಳಿಸಿ, 7 ವಿಕೆಟ್ಗಳ ಭರ್ಜರಿ ಜಯದೊಂದಿಗೆ ಸೆಮಿಫೈನಲ್ಗೆ ಲಗ್ಗೆ ಇಟ್ಟಿದೆ.
ಪಂದ್ಯಶ್ರೇಷ್ಠ ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ವೈಭವ್, ತಮ್ಮ ಸ್ಫೋಟಕ ಆಟದ ಗುಟ್ಟನ್ನು ಬಿಚ್ಚಿಟ್ಟರು. “ಕಳೆದ ಎರಡು ಪಂದ್ಯಗಳಲ್ಲಿ ಉತ್ತಮ ಆರಂಭ ಸಿಕ್ಕರೂ ದೊಡ್ಡ ಮೊತ್ತ ಗಳಿಸಲು ಸಾಧ್ಯವಾಗಿರಲಿಲ್ಲ. ಹಾಗಾಗಿ ಈ ಪಂದ್ಯದಲ್ಲಿ ಆರಂಭದಲ್ಲಿ ಸ್ವಲ್ಪ ನಿಧಾನವಾಗಿ ಆಡಲು ಯೋಜಿಸಿದ್ದೆ. ಆದರೆ ಪಿಚ್ ಬ್ಯಾಟಿಂಗ್ಗೆ ಹೆಚ್ಚು ಸಹಕಾರಿಯಾಗಿರುವುದು ತಿಳಿಯುತ್ತಿದ್ದಂತೆ ನನ್ನ ಸಹಜ ಆಕ್ರಮಣಕಾರಿ ಆಟಕ್ಕೆ ಮುಂದಾದೆ” ಎಂದು ವಿವರಿಸಿದರು. ಆರಂಭದಲ್ಲಿ ಒತ್ತಡವಿದ್ದರೂ, ಒಂದೆರಡು ಎಸೆತಗಳ ಬಳಿಕ ಆಟವನ್ನು ನಿಯಂತ್ರಣಕ್ಕೆ ತೆಗೆದುಕೊಳ್ಳುವುದಾಗಿ ಅವರು ತಿಳಿಸಿದರು.
ತಮ್ಮ ಈ ಯಶಸ್ಸನ್ನು ಕೋಚ್ ಹೃಷಿಕೇಶ್ ಕಾನಿಟ್ಕರ್ ಅವರಿಗೆ ನೀಡಿದ ವೈಭವ್, “ಚೆಂಡನ್ನು ಸರಿಯಾಗಿ ಗಮನಿಸಿ ಆಡಿದರೆ ಕ್ರಿಕೆಟ್ ತುಂಬಾ ಸುಲಭ ಎಂದು ಅವರು ಸದಾ ಹೇಳುತ್ತಿರುತ್ತಾರೆ” ಎಂದು ಸ್ಮರಿಸಿದರು. ಇತ್ತೀಚೆಗೆ ಬಿಹಾರ ತಂಡದ ನಾಯಕನಾಗಿ ನೇಮಕಗೊಂಡಿರುವುದಕ್ಕೆ ಸಂತಸ ವ್ಯಕ್ತಪಡಿಸಿದ ಅವರು, ಹಿರಿಯ ಆಟಗಾರರ ಬೆಂಬಲದಿಂದ ತಂಡ ಉತ್ತಮವಾಗಿ ಆಡುತ್ತಿದೆ ಎಂದರು. ತಮ್ಮ ಹಳೆಯ ಲಯಕ್ಕೆ ಮರಳಿರುವ ವೈಭವ್, ಸೆಮಿಫೈನಲ್ ಗೆದ್ದು ಫೈನಲ್ ತಲುಪುವ ಸಂಪೂರ್ಣ ವಿಶ್ವಾಸ ವ್ಯಕ್ತಪಡಿಸಿದ್ದಾರೆ.



