November 25, 2026
Wednesday, November 25, 2026
spot_img

ಕ್ಲಸ್ಟರ್‌ ಕಿಚನ್‌ ವಿರೋಧಿಸಿ ಪ್ರತಿಭಟನೆ: ಇಂದು ಶಾಲಾ ಮಕ್ಕಳಿಗೆ ಬಿಸಿಯೂಟ ಸಿಗೋದಿಲ್ಲ!

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಆರ್ಥಿಕ ಭದ್ರತೆ ಬೇಕು ಎಂದು ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ಆಶಾ ಕಾರ್ಯಕರ್ತೆಯರು ಪ್ರತಿಭಟನೆ ಮಾಡುತ್ತಿದ್ದರೆ, ಇತ್ತ ಬಿಸಿಯೂಟದ ನೌಕರರು ಕ್ಲಸ್ಟರ್‌ ಕಿಚನ್‌ ಬೇಡ ಎಂದು ಧರಣಿ ಕುಳಿತಿದ್ದಾರೆ. ಈ ಕಾರಣದಿಂದ ಇಂದು ರಾಜ್ಯಾದ್ಯಂತ ಸರ್ಕಾರಿ ಶಾಲೆಯ ಮಕ್ಕಳಿಗೆ ಬಿಸಿಯೂಟ ಸಿಗದಂತಾಗಿದೆ.

ಹೌದು, ಕ್ಲಸ್ಟರ್‌ ಕಿಚನ್‌ ಬೇಡ ಎಂದು ಬಿಸಿಯೂಟ ನೌಕರರು ರಾಜ್ಯ ಸರ್ಕಾರದ ವಿರುದ್ಧ ಪ್ರತಿಭಟನೆಗೆ ಅಣಿಯಾಗಿದ್ದಾರೆ. ಇದರ ಜೊತೆಗೆ ಗೌರವಧನ ಹೆಚ್ಚಳ ಮಾಡಬೇಕು ಎಂದು ಆಗ್ರಹಿಸಿದ್ದಾರೆ. ಫ್ರೀಡಂ ಪಾರ್ಕ್‌ನಲ್ಲಿ ನಡೆಯುತ್ತಿರುವ ಆಶಾ ಕಾರ್ಯಕರ್ತೆಯರ ಜೊತೆ ಬಿಸಿಯೂಟ ಸಿಬ್ಬಂದಿ ಕೂಡ ರಸ್ತೆಗಿಳಿದಿದ್ದು, ಗೌರವಧನ 15 ಸಾವಿರಕ್ಕೆ ಹೆಚ್ಚಿಸುವಂತೆ ಆಗ್ರಹಿಸಿದ್ದಾರೆ.

ನಮ್ಮದು ಎರಡೇ ಡಿಮ್ಯಾಂಡ್‌, ಗೌರವ ಧನ ಹೆಚ್ಚಳ ಹಾಗೂ ಕ್ಲಸ್ಟರ್‌ ಕಿಚನ್‌ ಪ್ರಸ್ತಾವನ್ನು ವಾಪಾಸ್‌ ಪಡೆಯಬೇಕು. ನಾವು 25 ವರ್ಷಗಳಿಂದ ಒಂದೇ ಸಂಬಳಕ್ಕೆ ಕೆಲಸ ಮಾಡಿದ್ದೀವಿ. ರಾಜ್ಯದಲ್ಲಿರುವ 1.60 ಲಕ್ಷ ಜನ ಬಿಸಿಯೂಟ ಕಾರ್ಯಕರ್ತರಿಗೆ ನ್ಯಾಯ ಸಿಗಬೇಕು. ಶಾಲೆಯ ಮಕ್ಕಳನ್ನು ನಮ್ಮ ಮಕ್ಕಳಂತೆ ಪರಿಗಣಿಸಿ ರುಚಿ ಹಾಗೂ ಶುಚಿಯಾದ ಅಡುಗೆ ತಯಾರಿಸಿ ಬಡಿಸುತ್ತೇವೆ. ಆದರೆ ನಮ್ಮ ಕೆಲಸಕ್ಕೆ ಕ್ಲಸ್ಟರ್‌ ಕಿಚನ್‌ ಕುತ್ತು ತರುತ್ತಿದೆ. ನಮ್ಮ ಕೆಲಸವನ್ನು ಕಿತ್ತುಕೊಂಡು ಎನ್‌ಜಿಒ ಹಾಗೂ ಇತರ ಸಂಘಟನೆಗಳಿಗೆ ನೀಡಿ ಕ್ಲಸ್ಟರ್‌ಗಳನ್ನು ನಿರ್ಮಿಸಿದರೆ ನಮ್ಮ ಮನೆ ನಡೆಯುವುದು ಹೇಗೆ ಎಂದು ಪ್ರಶ್ನಿಸಿದ್ದಾರೆ.

ಜೀವನವಿಡೀ ಅಡುಗೆ ಕೆಲಸ ಮಾಡಿದ್ದೇವೆ. ನಮಗೆ ಬೇರೆ ಉದ್ಯೋಗ ಬರೋದಿಲ್ಲ. ಕೆಲಸದ ಭದ್ರತೆ ಬೇಕು. ಆಶಾ ಕಾರ್ಯಕರ್ತೆಯರಂತೆ ನಾವು ಕೂಡ ಅನಿರ್ಧಿಷ್ಟಾವಧಿ ಪ್ರತಿಭಟನೆಗೆ ಇಳಿದಿದ್ದೇವೆ. ನಮ್ಮ ಬೇಡಿಕೆಗಳು ಈಡೇರುವವರೆಗೂ ಇಲ್ಲಿಯೇ ಇರುತ್ತೇವೆ ಎಂದು ಹೇಳಿದ್ದಾರೆ.

Must Read