ಹೊಸದಿಗಂತ ಡಿಜಿಟಲ್ ಡೆಸ್ಕ್:
ಭೀಮನ ಅಮಾವಾಸ್ಯೆಯಂದು ದೇವಸ್ಥಾನದಲ್ಲಿ ಕರ್ತವ್ಯ ನಿರತ ಮಹಿಳಾ PSI ಅವರೊಂದಿಗೆ ಉದ್ಧಟತನ ತೋರಿ, ಕಪಾಳಕ್ಕೆ ಹೊಡೆದಿದ್ದ ಶಾಸಕ ಬಿ. ಸುರೇಶ್ ಗೌಡ ಅವರ ಪುತ್ರಿ ಐಶ್ವರ್ಯಾ ಕೊನೆಗೂ ತಮ್ಮ ತಪ್ಪಿಗೆ ಬಹಿರಂಗವಾಗಿ ಕ್ಷಮೆ ಕೇಳಿದ್ದಾರೆ. ಹೈಕೋರ್ಟ್ನಿಂದ ತೀವ್ರ ತರಾಟೆಗೆ ಒಳಗಾದ ಬೆನ್ನಲ್ಲೇ ಐಶ್ವರ್ಯಾ ಅವರು ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಹಂಚಿಕೊಳ್ಳುವ ಮೂಲಕ ಕ್ಷಮೆಯಾಚಿಸಿದ್ದಾರೆ.
ಹೈಕೋರ್ಟ್ ತೀವ್ರ ಅಸಮಾಧಾನ
ಮಹಿಳಾ ಅಧಿಕಾರಿಯ ಮೇಲಿನ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಐಶ್ವರ್ಯಾ ಅವರು ಕಾನೂನು ಕ್ರಮದಿಂದ ತಪ್ಪಿಸಿಕೊಳ್ಳಲು ನಿರೀಕ್ಷಣಾ ಜಾಮೀನು ಕೋರಿ ಹೈಕೋರ್ಟ್ ಮೆಟ್ಟಿಲೇರಿದ್ದರು. ನ್ಯಾಯಮೂರ್ತಿ ಎಸ್. ವಿಶ್ವಜಿತ್ ಶೆಟ್ಟಿ ಅವರಿದ್ದ ಪೀಠದ ಮುಂದೆ ಈ ಅರ್ಜಿಯ ವಿಚಾರಣೆ ನಡೆದಾಗ, ಶಾಸಕರ ಪುತ್ರಿಯ ವರ್ತನೆಗೆ ನ್ಯಾಯಾಲಯ ತೀವ್ರ ಅಸಮಾಧಾನ ಹೊರಹಾಕಿತು. ʼನೊಂದ ಮಹಿಳಾ ಪಿಎಸ್ಐ ಅವರ ಬಳಿ ಕ್ಷಮೆಯಾಚಿಸಿ, ಇಲ್ಲದಿದ್ದರೆ ಜಾಮೀನು ಅರ್ಜಿ ಪರಿಗಣಿಸುವುದಿಲ್ಲʼ ಎಂದು ತರೆಟೆಗೆ ತೆಗೆದುಕೊಂಡ ಬೆನ್ನಲ್ಲೇ ಐಶ್ವರ್ಯಾ ಅವರು ಕ್ಷಮಾಪಣಾ ವಿಡಿಯೋ ರಿಲೀಸ್ ಮಾಡಿದ್ದಾರೆ.
ವಿಡಿಯೋದಲ್ಲಿ ಐಶ್ವರ್ಯಾ ಹೇಳಿದ್ದೇನು?
ಭೀಮನ ಅಮಾವಾಸ್ಯೆಯ ಹಬ್ಬದ ದಿನ ನಾನು ನನ್ನ ಇಬ್ಬರು ಮಕ್ಕಳೊಂದಿಗೆ ಆರತಿ ಉಕ್ಕಡದ ದೇವಸ್ಥಾನಕ್ಕೆ ಭೇಟಿ ನೀಡಿದ್ದೆ. ಆ ಸಮಯದಲ್ಲಿ ಅಲ್ಲಿ ಭದ್ರತಾ ಉಸ್ತುವಾರಿಯಲ್ಲಿದ್ದ ಪಿಎಸ್ಐ ಸವಿತಾ ಬಿ. ಪಾಟೀಲ್ ಹಾಗೂ ನನ್ನ ನಡುವೆ ಸಣ್ಣ ವಿಷಯಕ್ಕೆ ವಾಗ್ವಾದ ಶುರುವಾಯಿತು. ಆ ಸಂದರ್ಭದಲ್ಲಿ ಪರಿಸ್ಥಿತಿಯ ಒತ್ತಡ ಹಾಗೂ ಉದ್ವೇಗಕ್ಕೆ ಒಳಗಾಗಿ ನಾನು ಅವರ ಮೇಲೆ ಕೈ ಮಾಡಿದೆ. ಈ ರೀತಿಯ ಘಟನೆ ನಿಜಕ್ಕೂ ನಡೆಯಬಾರದಿತ್ತ. ನನ್ನ ಈ ನಡೆಗೆ ನಾನು ಅತ್ಯಂತ ವಿಷಾದ ವ್ಯಕ್ತಪಡಿಸುತ್ತಾ, ಅಧಿಕಾರಿಯ ಬಳಿ ಕ್ಷಮೆಯಾಚಿಸುತ್ತೇನೆ ಎಂದು ಐಶ್ವರ್ಯಾ ವಿಡಿಯೋದಲ್ಲಿ ಹೇಳಿಕೊಂಡಿದ್ದಾರೆ.
ಇದನ್ನೂ ಓದಿ:
ಘಟನೆಯ ಹಿನ್ನೆಲೆ
ಶ್ರೀರಂಗಪಟ್ಟಣ ತಾಲೂಕಿನ ಆರತಿ ಉಕ್ಕಡ ಅಹಲ್ಯಾದೇವಿ ದೇವಸ್ಥಾನದ ಗರ್ಭಗುಡಿ ಪ್ರವೇಶಿಸುವ ವಿಚಾರದಲ್ಲಿ ವಿವಿಐಪಿ ಸಂಸ್ಕೃತಿ ಪ್ರದರ್ಶಿಸಲು ಹೋದಾಗ ಲೇಡಿ ಪಿಎಸ್ಐ ಸವಿತಾ ಪಾಟೀಲ್ ಅವರು ನಿಯಮದಂತೆ ಐಶ್ವರ್ಯಾ ಅವರನ್ನು ತಡೆದಿದ್ದರು. ಇದರಿಂದ ಕೆರಳಿದ ಶಾಸಕರ ಮಗಳು ಸಾರ್ವಜನಿಕರ ಮುಂದೆಯೇ ಅಧಿಕಾರಿಗೆ ಕಪಾಳಮೋಕ್ಷ ಮಾಡಿದ್ದರು. ಈ ಇಡೀ ದೃಶ್ಯ ದೇವಸ್ಥಾನದ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿ, ಸರ್ಕಾರಿ ನೌಕರರ ಕರ್ತವ್ಯಕ್ಕೆ ಅಡ್ಡಿಪಡಿಸಿದ ಆರೋಪದಡಿ ಐಶ್ವರ್ಯಾ ವಿರುದ್ಧ ಪ್ರಕರಣ ದಾಖಲಾಗಿತ್ತು. ಈಗ ಶಾಸಕರ ಪುತ್ರಿ ಕ್ಷಮೆ ಕೋರಿರುವ ನಡೆಗೆ ಪಿಎಸ್ಐ ಸವಿತಾ ಪಾಟೀಲ್ ಅವರು ಯಾವ ರೀತಿ ಪ್ರತಿಕ್ರಿಯಿಸಲಿದ್ದಾರೆ ಎಂಬುದನ್ನು ಕಾದು ನೋಡಬೇಕಿದೆ.



