ಹೊಸದಿಗಂತ ಡಿಜಿಟಲ್ ಡೆಸ್ಕ್:
ರಾಜ್ಯದಲ್ಲಿ ಆರೋಗ್ಯ ತುರ್ತು ಸೇವೆ ಸಂಪೂರ್ಣವಾಗಿ ಹಳಿ ತಪ್ಪುವ ಆತಂಕ ಎದುರಾಗಿದೆ. ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಸರ್ಕಾರಕ್ಕೆ ‘108’ ಆರೋಗ್ಯ ಕವಚ ಆಂಬುಲೆನ್ಸ್ ನೌಕರರ ಸಂಘ ನೀಡಿದ್ದ 15 ದಿನಗಳ ಗಡುವು ಇಂದು ಮುಕ್ತಾಯಗೊಂಡಿದೆ. ಆದರೆ ಆಡಳಿತ ಮಂಡಳಿ ಹಾಗೂ ಸರ್ಕಾರದಿಂದ ಯಾವುದೇ ಪಾಸಿಟಿವ್ ಸ್ಪಂದನೆ ಸಿಗದ ಹಿನ್ನೆಲೆಯಲ್ಲಿ, ಇಂದು ರಾತ್ರಿ 8 ಗಂಟೆಯಿಂದಲೇ ರಾಜ್ಯಾದ್ಯಂತ ಸೇವೆಯನ್ನು ಸಂಪೂರ್ಣ ಸ್ಥಗಿತಗೊಳಿಸಲು ನೌಕರರು ನಿರ್ಧರಿಸಿದ್ದಾರೆ. ಕೇವಲ ಮುಷ್ಕರ ಮಾತ್ರದಲ್ಲದೆ, ಎಲ್ಲಾ 3,200 ಸಿಬ್ಬಂದಿ ಒಟ್ಟಾಗಿ ಸಾಮೂಹಿಕ ರಾಜೀನಾಮೆ ನೀಡಲು ತೀರ್ಮಾನಿಸಿದ್ದಾರೆ.
ನೌಕರರ ಆಕ್ರೋಶಕ್ಕೆ ಕಾರಣವೇನು?
ರಾಜ್ಯ ಆರೋಗ್ಯ ಕವಚ ಯೋಜನೆಯಡಿ ಹಗಲಿರುಳು ಶ್ರಮಿಸುತ್ತಿರುವ ಚಾಲಕರು ಹಾಗೂ ಸ್ಟಾಫ್ ನರ್ಸ್ಗಳು ದೀರ್ಘಕಾಲದಿಂದ ಹಲವು ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಈ ಸಂಬಂಧ ಕರ್ನಾಟಕ ರಾಜ್ಯ ಆರೋಗ್ಯ ಕವಚ ನೌಕರರ ಸಂಘದ ಅಧ್ಯಕ್ಷ ಪರಮಶಿವಯ್ಯ ಅವರ ನೇತೃತ್ವದ ನಿಯೋಗವು ಇತ್ತೀಚೆಗೆ ಆರೋಗ್ಯ ಸಚಿವರು ಹಾಗೂ ಗುತ್ತಿಗೆ ಪಡೆದಿರುವ ಜಿವಿಕೆ ಇಎಂಆರ್ಐ ಸಂಸ್ಥೆಯ ಮುಖ್ಯಸ್ಥರನ್ನು ಭೇಟಿ ಮಾಡಿ ಮನವಿ ಪತ್ರ ಸಲ್ಲಿಸಿತ್ತು. ಆದರೆ ಗಡುವು ಮುಗಿದರೂ ಯಾವುದೇ ಪ್ರಯೋಜನವಾಗಿಲ್ಲ. ʼಮನವಿ ಸಲ್ಲಿಸಿ 15 ದಿನ ಕಳೆದರೂ ವೇತನ ಹೆಚ್ಚಿಸುವ ಬಗ್ಗೆ ಕ್ರಮ ಕೈಗೊಂಡಿಲ್ಲʼ ಎಂದು ನೌಕರರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಆ್ಯಂಬುಲೆನ್ಸ್ ನೌಕರರ ಪ್ರಮುಖ ಬೇಡಿಕೆಗಳು
ವಾರ್ಷಿಕವಾಗಿ ಸಂಬಳವನ್ನು ಸಮರ್ಪಕವಾಗಿ ಹೆಚ್ಚಿಸಬೇಕು ಮತ್ತು ಹಿರಿತನದ ಆಧಾರದ ಮೇಲೆ ಎಲ್ಲರಿಗೂ ಏಕರೂಪದ ವೇತನ ಜಾರಿಗೊಳಿಸಬೇಕು, ಪ್ರತಿ ತಿಂಗಳೂ ವಿಳಂಬ ಮಾಡದೆ, ಕಡ್ಡಾಯವಾಗಿ 7ನೇ ತಾರೀಖಿನೊಳಗೆ ನೌಕರರ ಖಾತೆಗೆ ವೇತನ ಪಾವತಿಯಾಗಬೇಕು, ತುರ್ತು ಕರ್ತವ್ಯದ ಅವಧಿಯಲ್ಲಿ ಯಾವುದಾದರೂ ಸಿಬ್ಬಂದಿ ಮೃತಪಟ್ಟರೆ, ಅವರ ಕುಟುಂಬದ ರಕ್ಷಣೆಗಾಗಿ 50 ಲಕ್ಷ ಪರಿಹಾರ ಧನ ನೀಡಬೇಕು, ದೈನಂದಿನ ಕರ್ತವ್ಯದ ಅವಧಿ ಹಾಗೂ ವೇಳಾಪಟ್ಟಿಯನ್ನು ನೌಕರರ ಹಿತದೃಷ್ಟಿಯಿಂದ ಮರುಪರಿಷ್ಕರಿಸಬೇಕು ಹಾಗೂ ಸಿಬ್ಬಂದಿಗೆ ವಿಶ್ರಾಂತ್ರಿ ಕೊಠಡಿ, ಶೌಚಾಲಯ ಹಾಗೂ ಆ್ಯಂಬುಲೆನ್ಸ್ ಸ್ವಚ್ಛಗೊಳಿಸಲು ನೀರಿನ ವ್ಯವಸ್ಥೆ ಕಲ್ಪಿಸಬೇಕು ಎಂಬ ಬೇಡಿಕೆಗಳನ್ನು ಸರ್ಕಾರದ ಮುಂದಿಟ್ಟಿದ್ದರು.
ಇದನ್ನೂ ಓದಿ:
ಸಾರ್ವಜನಿಕರಿಗೆ ತೊಂದರೆಯಾದರೆ ಸರ್ಕಾರವೇ ಹೊಣೆ
ರಾಜ್ಯಾದ್ಯಂತ 108 ಸೇವೆಯಲ್ಲಿ ಸುಮಾರು 3,200 ಕ್ಕೂ ಹೆಚ್ಚು ಸಿಬ್ಬಂದಿ ಕಾರ್ಯನಿರ್ವಹಿಸುತ್ತಿದ್ದಾರೆ. ʼನಾವು ಈ ಬಾರಿ ಯಾವುದೇ ಕಾನೂನು ಕ್ರಮಕ್ಕೂ ಹೆದರದೆ ಸಾಮೂಹಿಕ ರಾಜೀನಾಮೆ ನೀಡಿ ಪರ್ಯಾಯ ಕೆಲಸ ಹುಡುಕಿಕೊಳ್ಳಲಿದ್ದೇವೆ. ಒಂದು ವೇಳೆ ಇಂದು ರಾತ್ರಿಯಿಂದ ತುರ್ತು ಸೇವೆ ಸಿಗದೆ ಸಾರ್ವಜನಿಕರಿಗೆ ಅಥವಾ ರೋಗಿಗಳಿಗೆ ತೊಂದರೆಯಾದರೆ ಅದಕ್ಕೆ ನಾವಂತೂ ಜವಾಬ್ದಾರರಲ್ಲ. ಗುತ್ತಿಗೆ ಸಂಸ್ಥೆ ಜಿವಿಕೆ ಹಾಗೂ ರಾಜ್ಯ ಸರ್ಕಾರವೇ ಇದಕ್ಕೆ ನೇರ ಹೊಣೆʼ ಎಂದು ನೌಕರರ ಸಂಘ ಖಡಕ್ ಎಚ್ಚರಿಕೆ ನೀಡಿದೆ.



