ಹೊಸದಿಗಂತ ಡಿಜಿಟಲ್ ಡೆಸ್ಕ್:
ಸಾಮಾನ್ಯವಾಗಿ ಊಟ ತಿಂಡಿಯ ವಸ್ತುಗಳ ಮೇಲೆ ವೆಜ್ ಎಂದು ಗುರುತಿಸಲು ಹಸಿರು ಹಾಗೂ ನಾನ್‌ವೆಜ್ ಎಂದು ಗುರುತಿಸಲು ಕೆಂಪು ಬಣ್ಣದ ಚುಕ್ಕಿಯಂತಹ ಗುರುತನ್ನು ನೋಡಿರುತ್ತೀರಿ. ಆದರೆ ಸೋಪು, ಶಾಂಪೂ, ಟೂತ್‌ಪೇಸ್ಟ್ ಇನ್ನಿತರ ದಿನಬಳಕೆಯ ವಸ್ತುಗಳು ವೆಜ್ ಅಥವಾ ನಾನ್‌ವೆಜ್ ಎಂದು ತಿಳಿದುಕೊಳ್ಳದೇ ಬಳಕೆ ಮಾಡುತ್ತೇವೆ. ಇದಕ್ಕೆ ಸರ್ಕಾರ ಫುಲ್‌ಸ್ಟಾಪ್ ಇಟ್ಟಿದ್ದು, ಇನ್ನುಮುಂದೆ ಈ ರೀತಿಯ ಪದಾರ್ಥಗಳಿಗೂ ವೆಜ್ ಅಥವಾ ನಾನ್‌ವೆಜ್ ಎಂದು ಬಿಂಬಿಸುವ ಗುರುತುಗಳು ಕಡ್ಡಾಯವಾಗಿರಬೇಕು ಎಂದು ಸೂಚನೆ ನೀಡಿದೆ.
ಸೌಂದರ್ಯವರ್ಧಕಗಳು, ಸೋಪು, ಶಾಂಪೂ ಇನ್ನಿತರ ವಸ್ತುಗಳ ಪ್ಯಾಕೇಜಿಂಗ್‌ನ್ನು ಎಷ್ಟೇ ಸುಂದರವಾಗಿ ಮಾಡಿ, ನೈಸರ್ಗಿಕ ಪದಾರ್ಥಗಳು ತುಂಬಿದೆ ಎಂದು ಕವರ್ ಮೇಲೆ ಹಾಕಿಕೊಳ್ಳಿ ಪರವಾಗಿಲ್ಲ. ಆದರೆ ವೆಜ್ ಅಥವಾ ನಾನ್‌ವೆಜ್ ಎನ್ನುವ ಲೇಬಲ್ ಕಡ್ಡಾಯವಾಗಿದೆ. ಸಸ್ಯಾಹಾರದ ಮೂಲವೋ ಅಥವಾ ಮಾಂಸಾಹಾರದ ಮೂಲವೋ ಎನ್ನುವುದನ್ನು ಖರೀದಿಗೆ ಮುನ್ನ ಗ್ರಾಹಕ ತಿಳಿದುಕೊಳ್ಳಬೇಕಿದೆ. ಈ ನಿಯಮಗಳು ತಕ್ಷಣದಿಂದಲೇ ಜಾರಿಗೆ ಬರಲಿವೆ.
ಪ್ಯಾಕೆಟ್‌ನ ಮೇಲಿನ ಭಾಗದಲ್ಲಿ ಚಿಹ್ನೆ
ಸೌಂದರ್ಯವರ್ಧಕಗಳಲ್ಲಿ ಮಾಂಸದಂತಹ ಕೆಲವು ಪದಾರ್ಥಗಳನ್ನು ಬಳಸಲಾಗುತ್ತದೆ ಎನ್ನುವ ಮಾತಿನಿಂದಾಗಿ ಹಲವು ಮಂದಿ ಸಸ್ಯಹಾರಿಗಳು ಅವುಗಳನ್ನು ಮುಟ್ಟುವುದಿಲ್ಲ. ಕೆಲವರು ಅರಿವಿಲ್ಲದೇ ಬಳಕೆ ಮಾಡುತ್ತಾರೆ. ಯಾವುದೇ ಉತ್ಪನ್ನ ಖರೀದಿಗೆ ಮುನ್ನ ಅದರಲ್ಲಿ ಏನೆಲ್ಲಾ ಇದೆ, ಅದು ಸಸ್ಯಹಾರಿಯೋ ಇಲ್ಲವೋ ಎಂದು ತಿಳಿದುಕೊಳ್ಳುವ ಹಕ್ಕು ಗ್ರಾಹಕರಿಗೆ ಇದೆ. ಹೀಗಾಗಿ ಪ್ರತೀ ಉತ್ಪನ್ನದ ಪ್ಯಾಕೆಟ್‌ನ ಮೇಲ್ಭಾಗದಲ್ಲಿ ಹಸಿರು ಅಥವಾ ಕೆಂಪು ಚಿಹ್ನೆ ಇರುವುದು ಕಡ್ಡಾಯವಾಗಿದೆ.



