September 22, 2026
Tuesday, September 22, 2026
spot_img

‘ಆದೇಶ ಮರುಪರಿಶೀಲಿಸಿ’: ವಂದೇ ಮಾತರಂ ವಿಚಾರದಲ್ಲಿ ರಾಜ್ಯ ಸರ್ಕಾರಕ್ಕೆ ರಾಜ್ಯಪಾಲರ ಸಲಹೆ

ಹೊಸದಿಗಂತ ಡಿಜಿಟಲ್ ಡೆಸ್ಕ್:

ರಾಜ್ಯ ಸರ್ಕಾರಿ ಕಾರ್ಯಕ್ರಮಗಳಲ್ಲಿ ‘ವಂದೇ ಮಾತರಂ’ನ ಮೊದಲ ಎರಡು ಚರಣಗಳನ್ನು ಮಾತ್ರ ಹಾಡುವಂತೆ ಹೊರಡಿಸಿರುವ ಆದೇಶವನ್ನು ಮರುಪರಿಶೀಲಿಸುವಂತೆ ರಾಜ್ಯಪಾಲ ಥಾವರ್‌ಚಂದ್ ಗೆಹ್ಲೋಟ್ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರಿಗೆ ಸಲಹೆ ನೀಡಿದ್ದಾರೆ. ಈ ಕುರಿತು ಸೆಪ್ಟೆಂಬರ್ 21ರಂದು ರಾಜ್ಯಪಾಲರು ಪತ್ರ ಬರೆದಿದ್ದಾರೆ.

ಕೇಂದ್ರ ನೀಡಿರುವ ಮಾರ್ಗಸೂಚಿಗಳಿಗೆ ಹೊಂದಿಕೆಯಾಗುತ್ತದೆಯೇ?

ಸೆಪ್ಟೆಂಬರ್ 8ರಂದು ರಾಜ್ಯ ಸರ್ಕಾರ ಹೊರಡಿಸಿರುವ ಆದೇಶವು ಕೇಂದ್ರ ಗೃಹ ಸಚಿವಾಲಯ ನೀಡಿರುವ ಮಾರ್ಗಸೂಚಿಗಳಿಗೆ ಹೊಂದಿಕೆಯಾಗುತ್ತದೆಯೇ ಎಂಬುದನ್ನು ಪರಿಶೀಲಿಸುವಂತೆ ರಾಜ್ಯಪಾಲರು ಸೂಚಿಸಿದ್ದಾರೆ. ಕೇಂದ್ರ ಸರ್ಕಾರವು ‘ವಂದೇ ಮಾತರಂ’ ಗಾಯನಕ್ಕೆ ಅಧಿಕೃತ ಆವೃತ್ತಿಯನ್ನು ನಿಗದಿಪಡಿಸಿದ್ದು, ಸರ್ಕಾರಿ ಕಾರ್ಯಕ್ರಮಗಳಲ್ಲಿ ಅದನ್ನು ಪಾಲಿಸುವಂತೆ ಸೂಚನೆ ನೀಡಿದೆ ಎಂದು ಅವರು ಪತ್ರದಲ್ಲಿ ಉಲ್ಲೇಖಿಸಿದ್ದಾರೆ.

2026ರ ‘Prevention of Insults to National Honour’ ಕಾಯ್ದೆ ತಿದ್ದುಪಡಿಯನ್ನು ಕೂಡ ರಾಜ್ಯಪಾಲರು ಪ್ರಸ್ತಾಪಿಸಿದ್ದಾರೆ. ರಾಜ್ಯ ಸರ್ಕಾರದ ಆದೇಶವು ಕೇಂದ್ರದ ಕಾನೂನು ಮತ್ತು ಮಾರ್ಗಸೂಚಿಗಳಿಗಿಂತ ಭಿನ್ನವಾಗಿದ್ದರೆ ಕೇಂದ್ರ ಮತ್ತು ರಾಜ್ಯದ ಕಾರ್ಯನಿರ್ವಹಣಾ ಅಧಿಕಾರಕ್ಕೆ ಸಂಬಂಧಿಸಿದಂತೆ ಸಾಂವಿಧಾನಿಕ ಪ್ರಶ್ನೆ ಎದುರಾಗಬಹುದು ಎಂದು ಗೆಹ್ಲೋಟ್ ಅಭಿಪ್ರಾಯಪಟ್ಟಿದ್ದಾರೆ.

ಇದನ್ನೂ ಓದಿ:

ಸಂವಿಧಾನದ 162, 256 ಮತ್ತು 257(1)ನೇ ವಿಧಿಗಳನ್ನು ಉಲ್ಲೇಖಿಸಿರುವ ಅವರು, ಕೇಂದ್ರದ ಕಾನೂನು ಮತ್ತು ನಿರ್ದೇಶನಗಳಿಗೆ ರಾಜ್ಯ ಸರ್ಕಾರಗಳು ಅನುಗುಣವಾಗಿ ನಡೆದುಕೊಳ್ಳಬೇಕಿದೆ ಎಂದು ತಿಳಿಸಿದ್ದಾರೆ.

ಈ ಹಿನ್ನೆಲೆಯಲ್ಲಿ ಎರಡು ಪದ್ಯಗಳಿಗೆ ಮಾತ್ರ ಸೀಮಿತಗೊಳಿಸಿರುವ ನಿರ್ಧಾರವನ್ನು ಮರುಪರಿಶೀಲಿಸಿ, ಕೇಂದ್ರದ ಮಾರ್ಗಸೂಚಿ ಮತ್ತು ರಾಷ್ಟ್ರೀಯ ಶಿಷ್ಟಾಚಾರಕ್ಕೆ ಅನುಗುಣವಾಗಿ ಏಕರೂಪದ ಕ್ರಮ ಕೈಗೊಳ್ಳುವಂತೆ ರಾಜ್ಯಪಾಲರು ಸಲಹೆ ನೀಡಿದ್ದಾರೆ. ರಾಜ್ಯ ಸರ್ಕಾರದ ಆದೇಶದ ವಿರುದ್ಧ ಕರ್ನಾಟಕ ಹೈಕೋರ್ಟ್‌ನಲ್ಲೂ ಅರ್ಜಿ ಸಲ್ಲಿಕೆಯಾಗಿದ್ದು, ಈ ವಿಚಾರ ಈಗ ಕಾನೂನು ಮತ್ತು ಆಡಳಿತಾತ್ಮಕ ಚರ್ಚೆಯ ಹಂತದಲ್ಲಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !