ಹೊಸದಿಗಂತ ಡಿಜಿಟಲ್ ಡೆಸ್ಕ್:
ಪಶ್ಚಿಮ ಘಟ್ಟ ಪ್ರದೇಶವನ್ನು ಪರಿಸರ ಸೂಕ್ಷ್ಮ ಪ್ರದೇಶವೆಂದು ಘೋಷಿಸುವ ಸಂಬಂಧ ಕೇಂದ್ರ ಸರ್ಕಾರ ಹೊರಡಿಸಿರುವ 7ನೇ ಕರಡು ಅಧಿಸೂಚನೆಯನ್ನು ಪ್ರಸ್ತುತ ರೂಪದಲ್ಲಿ ಸ್ವೀಕರಿಸದಿರಲು ಕರ್ನಾಟಕ ವಿಧಾನಸಭೆ ಸರ್ವಾನುಮತದಿಂದ ನಿರ್ಧರಿಸಿದೆ.
ಅಷ್ಟೇ ಅಲ್ಲದೆ ಕೇಂದ್ರದೊಂದಿಗೆ ಚರ್ಚೆ ನಡೆಸಲು ಸರ್ವಪಕ್ಷ ನಿಯೋಗವನ್ನು ಕೊಂಡೊಯ್ಯಲು ತೀರ್ಮಾನಿಸಿದೆ ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಸದನದಲ್ಲಿ ತಿಳಿಸಿದ್ದಾರೆ.
ಸರ್ಕಾರದ ಪ್ರಮುಖ ನಿರ್ಣಯಗಳು
- ಕೃಷಿ ಭೂಮಿ, ತೋಟಗಾರಿಕೆ ಮತ್ತು ಪ್ಲಾಂಟೇಶನ್ ಪ್ರದೇಶಗಳು, ಜನವಸತಿ ಹಾಗೂ ಸಾರ್ವಜನಿಕ ಚಟುವಟಿಕೆಗಳ ಪ್ರದೇಶಗಳನ್ನು ESA ವ್ಯಾಪ್ತಿಗೆ ಸೇರಿಸಬಾರದು ಎಂದು ನಿರ್ಣಯಿಸಲಾಗಿದೆ.
- ಉಪಗ್ರಹ ಮಾಹಿತಿಯನ್ನಷ್ಟೇ ಅವಲಂಬಿಸದೆ, ಸ್ಥಳದಲ್ಲೇ ಭೌತಿಕ ಸಮೀಕ್ಷೆ ನಡೆಸಿ ಅರಣ್ಯ, ಕೃಷಿ, ಜನವಸತಿ ಹಾಗೂ ಪರಿಸರ ಸೂಕ್ಷ್ಮ ಪ್ರದೇಶಗಳನ್ನು ಸರ್ವೆ ನಂಬರ್ ಆಧಾರದ ಮೇಲೆ ಪ್ರತ್ಯೇಕವಾಗಿ ಗುರುತಿಸಲು ನಿರ್ಧರಿಸಲಾಗಿದೆ.
- ESA ವ್ಯಾಪ್ತಿಯಲ್ಲಿ ಅಧಿಸೂಚಿತ ಅರಣ್ಯ ಹಾಗೂ ಇತರೆ ಅರಣ್ಯ ಪ್ರದೇಶಗಳನ್ನು ಮಾತ್ರ ಸೇರಿಸಬೇಕು. ಈಗಾಗಲೇ ಮಂಜೂರಾದ ಜಮೀನುಗಳನ್ನು ಹೊರಗಿಡಬೇಕು ಎಂದು ರಾಜ್ಯ ಒತ್ತಾಯಿಸಿದೆ.
- ನಿವೃತ್ತ ನ್ಯಾಯಾಧೀಶರ ಅಧ್ಯಕ್ಷತೆಯಲ್ಲಿ ಉನ್ನತ ಮಟ್ಟದ ಸಮಿತಿ ರಚಿಸಲಾಗುವುದು. ಕಂದಾಯ ಮತ್ತು ಅರಣ್ಯ ಅಧಿಕಾರಿಗಳ ಜತೆಗೆ ರೈತರು, ಕೈಗಾರಿಕಾ ಪ್ರತಿನಿಧಿಗಳು ಹಾಗೂ ಪರಿಸರ ಕ್ಷೇತ್ರದ ತಜ್ಞರು ಮತ್ತು ವಿಜ್ಞಾನಿಗಳು ಸಮಿತಿಯಲ್ಲಿ ಇರಲಿದ್ದಾರೆ.
- ESA ನಿರ್ಬಂಧಗಳಿಂದ ಜೀವನೋಪಾಯಕ್ಕೆ ತೊಂದರೆಯಾಗುವ ರೈತರು ಮತ್ತು ಕಾರ್ಮಿಕರಿಗೆ ಪರ್ಯಾಯ ಜೀವನೋಪಾಯ ಹಾಗೂ ಆರ್ಥಿಕ ನೆರವು ಕಲ್ಪಿಸಲು ಸೂಕ್ತ ಮಾರ್ಗಸೂಚಿ ರೂಪಿಸುವಂತೆ ರಾಜ್ಯ ಪ್ರಸ್ತಾಪಿಸಿದೆ.
- ಬಗರ್‌ಹುಕುಂ ಜಮೀನು, ಅರಣ್ಯ ಹಕ್ಕು ಕಾಯ್ದೆಯ ಹಕ್ಕುಗಳು, ಡೀಮ್ಡ್ ಫಾರೆಸ್ಟ್, ಭೂ ಮಂಜೂರಾತಿ, ಮೇಲ್ಮನವಿ ಮತ್ತು ನ್ಯಾಯಾಲಯಗಳಲ್ಲಿ ಬಾಕಿ ಇರುವ ಪ್ರಕರಣಗಳನ್ನು ಗಡಿ ನಿಗದಿಯಲ್ಲಿ ಪರಿಗಣಿಸಬೇಕು.
- ಸ್ಥಳೀಯ ಜನರ ಅಭಿಪ್ರಾಯ ಪಡೆಯಲು ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಜನಪ್ರತಿನಿಧಿಗಳನ್ನು ಒಳಗೊಂಡ ಸಮಿತಿಗಳನ್ನು ರಚಿಸಲಾಗುವುದು.
- ವರದಿಯಲ್ಲಿನ ನ್ಯೂನತೆಗಳನ್ನು ಪರಿಶೀಲಿಸಿ ಅಗತ್ಯ ಮಾರ್ಪಾಡುಗಳನ್ನು ಸೂಚಿಸುವ ಜವಾಬ್ದಾರಿಯನ್ನು ಸಮಿತಿಗೆ ನೀಡಲಾಗುತ್ತದೆ.
- ರಾಜ್ಯದ ನಿಲುವನ್ನು ಕೇಂದ್ರದ ಮುಂದೆ ಮಂಡಿಸಲು ಶೀಘ್ರದಲ್ಲೇ ಸರ್ವಪಕ್ಷ ನಿಯೋಗವನ್ನು ಕೊಂಡೊಯ್ಯಲು ಸರ್ಕಾರ ನಿರ್ಧರಿಸಿದೆ.
- ಸಮೀಕ್ಷೆ ಹಾಗೂ ಸಮಿತಿಯ ವರದಿ ಸಿದ್ಧಪಡಿಸಲು ಕೇಂದ್ರ ಸರ್ಕಾರದಿಂದ ಒಂದು ವರ್ಷದ ಕಾಲಾವಕಾಶ ನೀಡುವಂತೆ ಕರ್ನಾಟಕ ಮನವಿ ಮಾಡಲಿದೆ. ಈ ಅವಧಿಯಲ್ಲಿ ರಾಜ್ಯಕ್ಕೆ ಸಂಬಂಧಿಸಿದ ESA ಅಧಿಸೂಚನೆಯನ್ನು ಅಂತಿಮಗೊಳಿಸಬಾರದು ಎಂದು ಕೋರಲಿದೆ.
ರಾಜ್ಯ ಸಮಿತಿ ವರದಿ ಸಲ್ಲಿಸಿದ ಬಳಿಕ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಸಮಗ್ರ ಚರ್ಚೆ ನಡೆಸಿ ESA ವ್ಯಾಪ್ತಿಯ ಕುರಿತು ಅಂತಿಮ ನಿರ್ಧಾರ ಕೈಗೊಳ್ಳಬೇಕು ಎಂಬುದು ಕರ್ನಾಟಕದ ನಿಲುವಾಗಿದೆ.



