September 22, 2026
Tuesday, September 22, 2026
spot_img

72ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಯಲ್ಲಿ ಮಿಂಚಿದ ತಾರೆಯರು: ಯಾವ ಪ್ರಶಸ್ತಿ? ಯಾರ ಕೈ ಸೇರಿದೆ?

ಹೊಸದಿಗಂತ ಡಿಜಿಟಲ್ ಡೆಸ್ಕ್:

ಗುಜರಾತ್‌ನ ಏಕತಾ ನಗರದಲ್ಲಿ ನಡೆದ 72ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಭಾರತೀಯ ಚಿತ್ರರಂಗದ ಹಲವು ಪ್ರಮುಖ ಕಲಾವಿದರು ಹಾಗೂ ತಂತ್ರಜ್ಞರಿಗೆ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಪ್ರಶಸ್ತಿಗಳನ್ನು ಪ್ರದಾನ ಮಾಡಿದರು. ಹಿರಿಯ ಕನ್ನಡ ನಟ ಅನಂತ್ ನಾಗ್ ಅವರಿಗೆ 2024ನೇ ಸಾಲಿನ ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿ ನೀಡಿ ಗೌರವಿಸಲಾಯಿತು.

ಐದು ದಶಕಗಳಿಗೂ ಹೆಚ್ಚು ಕಾಲ ಚಿತ್ರರಂಗದಲ್ಲಿ ಸಕ್ರಿಯರಾಗಿರುವ ಅನಂತ್ ನಾಗ್ ಅವರಿಗೆ ದೊರೆತ ಈ ಗೌರವ ಸಮಾರಂಭದ ಪ್ರಮುಖ ಕ್ಷಣಗಳಲ್ಲಿ ಒಂದಾಗಿತ್ತು.

ಮಲಯಾಳಂ ನಟ ಮಮ್ಮುಟ್ಟಿ ‘ಬ್ರಹ್ಮಯುಗಂ’ ಚಿತ್ರದ ಅಭಿನಯಕ್ಕಾಗಿ ಅತ್ಯುತ್ತಮ ನಟ ಪ್ರಶಸ್ತಿ ಪಡೆದರೆ, ಕಾರ್ತಿಕ್ ಆರ್ಯನ್ ‘ಚಂದು ಚಾಂಪಿಯನ್’ ಚಿತ್ರದ ಪಾತ್ರಕ್ಕಾಗಿ ಇದೇ ವಿಭಾಗದಲ್ಲಿ ರಾಷ್ಟ್ರೀಯ ಪ್ರಶಸ್ತಿಗೆ ಪಾತ್ರರಾದರು. ನಟಿ ಯಾಮಿ ಗೌತಮ್ ‘ಆರ್ಟಿಕಲ್ 370’ ಚಿತ್ರದ ಅಭಿನಯಕ್ಕಾಗಿ ಅತ್ಯುತ್ತಮ ನಟಿ ಪ್ರಶಸ್ತಿ ಸ್ವೀಕರಿಸಿದರು.

‘ಭಕ್ಷಕ್’ ಚಿತ್ರದಲ್ಲಿನ ಅಭಿನಯಕ್ಕಾಗಿ ಸಂಜಯ್ ಮಿಶ್ರಾ ಅವರಿಗೆ ಅತ್ಯುತ್ತಮ ಪೋಷಕ ನಟ ಪ್ರಶಸ್ತಿ ದೊರೆಯಿತು. ‘ಆರ್ಟಿಕಲ್ 370’ ಅತ್ಯುತ್ತಮ ಚಲನಚಿತ್ರ ಪ್ರಶಸ್ತಿ ಪಡೆದಿದ್ದು, ಚಿತ್ರದ ನಿರ್ಮಾಪಕ ಆದಿತ್ಯ ಧರ್ ಪ್ರಶಸ್ತಿ ಸ್ವೀಕರಿಸಿದರು. ‘ಶ್ರೀಕಾಂತ್’ ಅತ್ಯುತ್ತಮ ಹಿಂದಿ ಚಲನಚಿತ್ರವಾಗಿ ಆಯ್ಕೆಯಾಗಿದ್ದು, ನಿರ್ಮಾಪಕ ಭೂಷಣ್ ಕುಮಾರ್ ಪ್ರಶಸ್ತಿ ಪಡೆದರು.

‘ಸ್ವಾತಂತ್ರ್ಯ ವೀರ್ ಸಾವರ್ಕರ್’ ಚಿತ್ರಕ್ಕಾಗಿ ರಣದೀಪ್ ಹೂಡಾ ಅತ್ಯುತ್ತಮ ಚೊಚ್ಚಲ ನಿರ್ದೇಶಕ ಪ್ರಶಸ್ತಿ ಪಡೆದರು. ‘ಅಮರನ್’ ಚಿತ್ರಕ್ಕಾಗಿ ಜಿ.ವಿ. ಪ್ರಕಾಶ್ ಕುಮಾರ್ ಅವರಿಗೆ ಅತ್ಯುತ್ತಮ ಸಂಗೀತ ನಿರ್ದೇಶನ ಪ್ರಶಸ್ತಿ ಲಭಿಸಿತು. ‘ಪುಷ್ಪ: ದಿ ರೂಲ್’ ಚಿತ್ರಕ್ಕಾಗಿ ಸುಕುಮಾರ್ ಅವರಿಗೆ ಅತ್ಯುತ್ತಮ ಮೂಲ ಚಿತ್ರಕಥೆ ಪ್ರಶಸ್ತಿ ದೊರೆಯಿತು.

‘ಸ್ಟ್ರೀ 2’ ಚಿತ್ರದ ‘ಆಜ್ ಕಿ ರಾತ್’ ಹಾಡಿನ ನೃತ್ಯ ಸಂಯೋಜನೆಗಾಗಿ ವಿಜಯ್ ಗಂಗೂಲಿ ಗೌರವ ಪಡೆದರು. ‘ರಾಯನ್’ ಅತ್ಯುತ್ತಮ ತಮಿಳು ಚಿತ್ರವಾಗಿ ಆಯ್ಕೆಯಾದರೆ, ಧನುಷ್ ಅಭಿನಯದ ‘ಕ್ಯಾಪ್ಟನ್ ಮಿಲ್ಲರ್’ ವಿಶೇಷ ಉಲ್ಲೇಖ ಪ್ರಶಸ್ತಿಗೆ ಪಾತ್ರವಾಯಿತು.

ಭಾರತೀಯ ಚಿತ್ರರಂಗದ ವಿವಿಧ ಭಾಷೆ, ಶೈಲಿ ಮತ್ತು ಪ್ರತಿಭೆಗಳನ್ನು ಒಂದೇ ವೇದಿಕೆಯಲ್ಲಿ ಗುರುತಿಸಿದ 72ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಸಮಾರಂಭವು ಹಲವು ಕಲಾವಿದರ ಸುದೀರ್ಘ ಪರಿಶ್ರಮಕ್ಕೆ ರಾಷ್ಟ್ರಮಟ್ಟದ ಮನ್ನಣೆ ನೀಡಿದ ಮಹತ್ವದ ವೇದಿಕೆಯಾಗಿ ಮೂಡಿಬಂದಿತು.

‘ಮಿಥ್ಯ’ ಸಿನಿಮಾಗೆ ಹಲವು ಪ್ರಶಸ್ತಿ

ಕನ್ನಡದ ‘ಮಿಥ್ಯ’ ಸಿನಿಮಾಗೆ ಅತ್ಯುತ್ತಮ ಕನ್ನಡ ಸಿನಿಮಾ ಪ್ರಶಸ್ತಿ ಲಭಿಸಿದ್ದು, ನಿರ್ದೇಶಕ ಸುಮಂತ್ ಭಟ್ ಪ್ರಶಸ್ತಿ ಸ್ವೀಕರಿಸಿದರು. ರಕ್ಷಿತ್ ಶೆಟ್ಟಿ ನಿರ್ಮಾಣದ ಈ ಚಿತ್ರಕ್ಕೆ ನಟನಾ ವಿಭಾಗದಲ್ಲೂ ಮನ್ನಣೆ ದೊರೆತಿದೆ.

ಚಿತ್ರದಲ್ಲಿನ ಅಭಿನಯಕ್ಕಾಗಿ ಅತೀಶ್ ಎಸ್. ಶೆಟ್ಟಿ ಅವರಿಗೆ ಅತ್ಯುತ್ತಮ ಬಾಲನಟ ಹಾಗೂ ರೂಪಾಶ್ರೀ ವಾರ್ಕಡಿ ಅವರಿಗೆ ಅತ್ಯುತ್ತಮ ಪೋಷಕ ನಟಿ ಪ್ರಶಸ್ತಿ ದೊರೆತಿದೆ.

ಇದೇ ವೇಳೆ ಸಿನಿಮಾ ಕುರಿತ ಅತ್ಯುತ್ತಮ ಪುಸ್ತಕ ವಿಭಾಗದಲ್ಲಿ ‘ನಾನಿರುವುದೇ ನಿಮಗಾಗಿ, ನಾಡಿರುವುದು ನಮಗಾಗಿ’ ಕೃತಿಗೆ ಪ್ರಶಸ್ತಿ ಲಭಿಸಿದ್ದು, ಲೇಖಕ ಪ್ರದೀಪ್ ಕೆಂಚನೂರು ಪ್ರಶಸ್ತಿ ಸ್ವೀಕರಿಸಿದರು.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !