ಹೊಸದಿಗಂತ ವರದಿ ಮಂಗಳೂರು:
ಜಾನುವಾರುಗಳನ್ನು ಹಿಂಸಾತ್ಮಕವಾಗಿ ಕಟ್ಟಿ, ಅಕ್ರಮವಾಗಿ ಸಾಗಾಟ ಮಾಡುತ್ತಿದ್ದ ಲಾರಿಯನ್ನು ಮಂಗಳವಾರ ಕಂಕನಾಡಿ ನಗರ ಠಾಣೆ ಪೊಲೀಸರು ಪಡೀಲ್ ಬಳಿ ತಡೆದು, 17 ಜಾನುವಾರುಗಳನ್ನು ರಕ್ಷಿಸಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಲಾರಿ ಚಾಲಕನನ್ನು ಬಂಧಿಸಿದ್ದು, ಇಬ್ಬರು ಆರೋಪಿಗಳು ಪರಾರಿಯಾಗಿದ್ದಾರೆ.
ಹಾಸನ ಜಿಲ್ಲೆ ವಿಶ್ವನಾಥ ನಗರ ಲೇ ಔಟ್ ಹುಣಸಿನಕೆರೆ ರೋಡ್ ಸ್ಲಮ್ ಬೋರ್ಡ್ ನಿವಾಸಿ ಸಾದಿಕ್ ಜಿ. (23) ಆರೋಪಿ ಚಾಲಕ.
ಕಂಕನಾಡಿ ನಗರ ಪೊಲೀಸ್ ಠಾಣೆಯ ಪಿಎಸ್ಐ ಮತ್ತು ಸಿಬಂದಿ ಬೆಳಗಿನ ರೌಂಡ್ಸ್ ಕರ್ತವ್ಯದಲ್ಲಿರುವಾಗ ಲಾರಿಯಲ್ಲಿ ಜಾನುವಾರು ಅಕ್ರಮ ಸಾಗಾಟ ಮಾಡುತ್ತಿರುವ ಬಗ್ಗೆ ಮಾಹಿತಿ ಲಭ್ಯವಾಗಿದೆ. ಅಡ್ಯಾರು ಕಡೆಯಿಂದ ಮಂಗಳೂರು ನಗರದ ಕಡೆಗೆ ಕಂದು ಬಣ್ಣದ ಈ ಲಾರಿಯೊಂದು ಬಂದಿದ್ದು, ಅದನ್ನು ಬೆನ್ನಟ್ಟಿ ಪಡೀಲ್ ಟೊಯೋಟಾ ಕಾರ್ ಶೋರೂಂ ಎದುರು ತಡೆದು ನಿಲ್ಲಿಸಿದ್ದಾರೆ.
ಈ ವೇಳೆ ಚಾಲಕ ಸಾದಿಕ್ ಲಾರಿಯಲ್ಲೇ ಇದ್ದು, ಇತರರು ಪರಾರಿಯಾಗಿದ್ದಾರೆ. ಲಾರಿಯನ್ನು ಪರಿಶೀಲಿಸಿದಾಗ ಅದರ ಹಿಂಭಾಗದ ಕ್ಯಾರಿಯರನ್ನು ಹಸಿರು ಬಣ್ಣದ ಟಾರ್ಪಲ್ ನಿಂದ ಮುಚ್ಚಲಾಗಿದ್ದು, ಪರಿಶೀಲನೆಯ ವೇಳೆ ಲಾರಿಯಲ್ಲಿ ಒಟ್ಟು 17 ಜಾನುವಾರುಗಳು ಪತ್ತೆಯಾಗಿವೆ. ಯಾವುದೇ ಸುರಕ್ಷತಾ ಕ್ರಮಗಳನ್ನು ಪಾಲಿಸದೆ, ಹಿಂಸಾತ್ಮಕ ರೀತಿಯಲ್ಲಿ ಕಟ್ಟಲಾಗಿತ್ತು. ಒಂದರ ಮೇಲೊಂದು ಬಿಗಿದು ಲಾರಿಯ ಬಾಡಿಯ ಕಬ್ಬಿಣದ ಕ್ಯಾರೇಜ್ ಗಳಿಗೆ ಕಟ್ಟಿದ್ದ ಪರಿಣಾಮ ಕತ್ತುಗಳನ್ನು ಮೇಲಕ್ಕೆ ಎತ್ತಿ, ಉಸಿರಾಟಕ್ಕೂ ತೊಂದರೆಯಾಗುವ ರೀತಿಯಲ್ಲಿ ಸಾಗಾಟ ಮಾಡುತ್ತಿರುವುದು ಕಂಡುಬಂದಿದೆ.
ಇದನ್ನೂ ಓದಿ:
ಕಂಕನಾಡಿ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಆರೋಪಿ ಚಾಲಕ ಸಾದಿಕ್ ನನ್ನು ಬಂಧಿಸಲಾಗಿದೆ. ಲಾರಿ ಹಾಗೂ ಆರೋಪಿಯ ಮೊಬೈಲ್ ಫೋನ್ ಸೇರಿದಂತೆ ಸಂಬಂಧಿತ ಸೊತ್ತುಗಳನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ. 17 ಜಾನುವಾರುಗಳನ್ನು ಗೋ ಶಾಲೆಗೆ ಸಾಗಿಸಲಾಗಿದೆ.
ಈ ಪ್ರಕರಣದಲ್ಲಿ ಪರಾರಿಯಾಗಿರುವ ಆರೋಪಿಗಳಾದ ಸುಬಾನ್ ಮತ್ತು ರೆಹಮಾನ್ ರವರ ಪತ್ತೆಗೆ ಕ್ರಮಗಳನ್ನು ಕೈಗೊಳ್ಳಲಾಗುತ್ತಿದ್ದು ಪ್ರಕರಣದ ಕುರಿತು ಹೆಚ್ಚಿನ ತನಿಖೆ ಮುಂದುವರಿದಿದೆ ಎಂದು ಪೊಲೀಸರು ತಿಳಿಸಿದ್ದಾರೆ.



