ಹೊಸದಿಗಂತ ಡಿಜಿಟಲ್ ಡೆಸ್ಕ್:
ಬಾಕ್ಸ್ ಆಫೀಸ್ನಲ್ಲಿ ಸಾವಿರಾರು ಕೋಟಿ ರೂಪಾಯಿ ಕಲೆಕ್ಷನ್ ಮಾಡಿ ದಾಖಲೆಗಳ ಮೇಲೆ ದಾಖಲೆ ಬರೆಯುತ್ತಿರುವ ರಣಬೀರ್ ಕಪೂರ್, ಸಾಯಿ ಪಲ್ಲವಿ ಮತ್ತು ಯಶ್ ಅಭಿನಯದ ಬಹುನಿರೀಕ್ಷಿತ ರಾಮಾಯಣ ಸಿನಿಮಾ ಇದೀಗ ಪ್ರೇಕ್ಷಕರಿಗೆ ಭರ್ಜರಿ ಕೊಡುಗೆಯೊಂದನ್ನು ಘೋಷಿಸಿದೆ.
ಹೌದು! ಚಿತ್ರಮಂದಿರಗಳಲ್ಲಿ ಸಿನಿಮಾ ವೀಕ್ಷಿಸಲು ದುಬಾರಿ ಟಿಕೆಟ್ ಖರೀದಿಸಬೇಕೆಂಬ ಚಿಂತೆಯಿಲ್ಲದೆ, ಕೇವಲ 99ರಿಂದ ಟಿಕೆಟ್ ಪಡೆಯುವ ಅವಕಾಶವನ್ನು ಚಿತ್ರತಂಡ ಕಲ್ಪಿಸಿದೆ. ಮಂಗಳವಾರದಂದು ಮಾತ್ರ ಈ ವಿಶೇಷ ರಿಯಾಯಿತಿ ಲಭ್ಯವಿರಲಿದೆ.
ಇನ್ಸ್ಟಾಗ್ರಾಂ ಖಾತೆಯಲ್ಲಿ ಅಧಿಕೃತ ಪೋಸ್ಟ್
ಚಿತ್ರದ ಅಧಿಕೃತ ಇನ್ಸ್ಟಾಗ್ರಾಂ ಖಾತೆ ‘ವರ್ಲ್ಡ್ ಆಫ್ ರಾಮಾಯಣ’ ಮೂಲಕ ಈ ಆಫರ್ ಘೋಷಿಸಲಾಗಿದೆ. ಹೊಸ ಪೋಸ್ಟರ್ ಹಂಚಿಕೊಂಡಿರುವ ಚಿತ್ರತಂಡ, ದೊಡ್ಡ ಪರದೆಯ ಮೇಲೆ ರಾಮಾಯಣವನ್ನು ವೀಕ್ಷಿಸಲು ಪ್ರೇಕ್ಷಕರಿಗೆ ಆಹ್ವಾನ ನೀಡಿದೆ. ‘ಈ ಮಂಗಳವಾರ ಕೇವಲ 99ರಿಂದ ಆರಂಭವಾಗುವ ಟಿಕೆಟ್ ದರದಲ್ಲಿ ರಾಮಾಯಣವನ್ನು ಚಿತ್ರಮಂದಿರಗಳಲ್ಲಿ ಅನುಭವಿಸಿ. ಎಲ್ಲರಿಗೂ ಗುರುಪರ್ವದ ಶುಭಾಶಯಗಳು’ ಎಂದು ಪೋಸ್ಟ್ನಲ್ಲಿ ತಿಳಿಸಲಾಗಿದೆ.
ಬಾಕ್ಸ್ ಆಫೀಸ್ನಲ್ಲಿ ದಾಖಲೆಗಳ ಬೇಟೆ
ಬಿಡುಗಡೆಯಾಗಿ 19 ದಿನಗಳನ್ನು ಪೂರೈಸಿರುವ ರಾಮಾಯಣ ಸಿನಿಮಾ ದೇಶೀಯ ಬಾಕ್ಸ್ ಆಫೀಸ್ನಲ್ಲಿ ಭರ್ಜರಿ ಪ್ರದರ್ಶನ ಮುಂದುವರಿಸಿದೆ. ಈವರೆಗೆ ಭಾರತದಲ್ಲಿ 955.45 ಕೋಟಿ ನಿವ್ವಳ (ನೆಟ್) ಮತ್ತು 1,141.65 ಕೋಟಿ ಒಟ್ಟು (ಗ್ರಾಸ್) ಗಳಿಕೆ ದಾಖಲಿಸಿದೆ. ಹಿಂದಿ ಆವೃತ್ತಿಯೊಂದರಲ್ಲೇ 700 ಕೋಟಿ ನಿವ್ವಳ ಗಳಿಕೆಯ ಗಡಿ ದಾಟಿರುವುದು ಚಿತ್ರದ ಮತ್ತೊಂದು ಸಾಧನೆಯಾಗಿದೆ.
ಇದನ್ನೂ ಓದಿ:
ವರದಿಗಳ ಪ್ರಕಾರ, 19ನೇ ದಿನದಂದು ಚಿತ್ರವು 15,696 ಪ್ರದರ್ಶನಗಳಿಂದ 12.70 ಕೋಟಿ ನಿವ್ವಳ ಗಳಿಸಿದೆ. ಇದರಲ್ಲಿ ಹಿಂದಿ ಆವೃತ್ತಿ 9.25 ಕೋಟಿ ಗಳಿಸಿದರೆ, ಮಲಯಾಳಂ ಆವೃತ್ತಿ 1.50 ಕೋಟಿ ಗಳಿಸಿದೆ. ಕನ್ನಡದಲ್ಲಿ ₹85 ಲಕ್ಷ, ತಮಿಳಿನಲ್ಲಿ 80 ಲಕ್ಷ ಹಾಗೂ ತೆಲುಗಿನಲ್ಲಿ 30 ಲಕ್ಷ ಸಂಗ್ರಹವಾಗಿದೆ.
ವಿಶ್ವಾದ್ಯಂತ 1,704 ಕೋಟಿ ಗಳಿಕೆ
ವಿದೇಶಿ ಮಾರುಕಟ್ಟೆಯಲ್ಲಿ ಈವರೆಗೆ 567 ಕೋಟಿ ಗಳಿಸಿರುವ ಸಿನಿಮಾ, ವಿಶ್ವಾದ್ಯಂತ ಒಟ್ಟು 1,704.65 ಕೋಟಿ ಕಲೆಕ್ಷನ್ ಮಾಡಿದೆ. ಈ ಮೂಲಕ ‘ಧುರಂಧರ್ 2’ ಚಿತ್ರದ ಗಳಿಕೆಗಿಂತಲೂ ಸುಮಾರು 70 ಕೋಟಿ ಅಧಿಕ ಸಂಗ್ರಹಿಸಿದೆ. ಅಲ್ಲದೆ, ರಣಬೀರ್ ಕಪೂರ್ ಅವರ ವೃತ್ತಿಜೀವನದಲ್ಲೇ ಭಾರತದಲ್ಲಿ ಅತಿ ಹೆಚ್ಚು ಗಳಿಕೆ ಮಾಡಿದ ಚಿತ್ರ ಎಂಬ ಹೆಗ್ಗಳಿಕೆಗೂ ಪಾತ್ರವಾಗಿದೆ.



