ಹೊಸದಿಗಂತ ಡಿಜಿಟಲ್ ಡೆಸ್ಕ್:
ಪಶು ಆಹಾರ, ಮೇವು, ಔಷಧ ಹಾಗೂ ಹೈನುಗಾರಿಕೆ ನಿರ್ವಹಣಾ ವೆಚ್ಚ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ನಂದಿನಿ ಹಾಲಿನ ಖರೀದಿ ಮತ್ತು ಮಾರಾಟ ದರವನ್ನು ಪ್ರತಿ ಲೀಟರ್‌ಗೆ 8ರಿಂದ 10 ರೂ ವರೆಗೆ ಹೆಚ್ಚಿಸುವಂತೆ ಕರ್ನಾಟಕದ ಹಾಲು ಉತ್ಪಾದಕರ ಸಹಕಾರ ಸಂಘಗಳ ಒಕ್ಕೂಟಗಳು ರಾಜ್ಯ ಸರ್ಕಾರಕ್ಕೆ ಮನವಿ ಮಾಡಿವೆ.
ವಿಧಾನಸೌಧದಲ್ಲಿ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರನ್ನು ಭೇಟಿಯಾದ ಹಾಲು ಒಕ್ಕೂಟಗಳ ಪ್ರತಿನಿಧಿಗಳು ದರ ಪರಿಷ್ಕರಣೆಯ ಅಗತ್ಯವನ್ನು ವಿವರಿಸಿದರು. ಮನವಿ ಆಲಿಸಿದ ಸಿಎಂ ಡಿಕೆಶಿ, ಕಳೆದ 10 ವರ್ಷಗಳಲ್ಲಿ ಪಶು ಆಹಾರದ ದರದಲ್ಲಾದ ಏರಿಕೆ, ಒಂದು ಲೀಟರ್ ಹಾಲು ಉತ್ಪಾದನೆಗೆ ತಗಲುವ ವೆಚ್ಚ, ಜಿಲ್ಲಾವಾರು ಹಾಲಿನ ಉತ್ಪಾದನೆ ಮತ್ತು ಮಾರಾಟದ ಪ್ರಮಾಣ ಹಾಗೂ ಒಕ್ಕೂಟಗಳು ಸಂಗ್ರಹಿಸುವ ಹಾಲಿನ ಪ್ರಮಾಣದ ಸಂಪೂರ್ಣ ಮಾಹಿತಿಯನ್ನು ಒದಗಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು.
ಇದನ್ನೂ ಓದಿ:
ಬೆಂಗಳೂರು ನಗರ, ಗ್ರಾಮಾಂತರ ಹಾಗೂ ರಾಮನಗರ ಹಾಲು ಒಕ್ಕೂಟದ ಅಧ್ಯಕ್ಷ ಡಿ.ಕೆ. ಸುರೇಶ್, ಹೈನುಗಾರಿಕೆಯ ವೆಚ್ಚ ಗಣನೀಯವಾಗಿ ಹೆಚ್ಚಿದೆ ಎಂದು ತಿಳಿಸಿದರು. ಬರ ಪರಿಸ್ಥಿತಿಯಿಂದ ಮೇವು ಲಭ್ಯತೆ ಕಡಿಮೆಯಾಗಿರುವುದು ರೈತರಿಗೆ ಮತ್ತಷ್ಟು ಹೊರೆಯಾಗಿದೆ ಎಂದರು.
ಪ್ರಸ್ತುತ ಕರ್ನಾಟಕದ ಹಾಲು ಒಕ್ಕೂಟಗಳು ಉತ್ಪಾದಕರಿಂದ ಟೋನ್ಡ್ ಹಾಲನ್ನು ಲೀಟರ್‌ಗೆ 35ಕ್ಕೆ ಖರೀದಿಸುತ್ತಿದ್ದು, ಆಂಧ್ರಪ್ರದೇಶದಲ್ಲಿ 41.50, ಕೇರಳದಲ್ಲಿ 41.80, ಮಹಾರಾಷ್ಟ್ರದಲ್ಲಿ 41ರೂ ಹಾಗೂ ತಮಿಳುನಾಡಿನಲ್ಲಿ 42.24 ದರ ಇದೆ ಎಂದು ಸುರೇಶ್ ತಿಳಿಸಿದರು.
ಹಾಲು ಸಂಗ್ರಹಣೆಯಲ್ಲಿ ಖಾಸಗಿ ಡೇರಿಗಳೊಂದಿಗೆ ಹೆಚ್ಚುತ್ತಿರುವ ಸ್ಪರ್ಧೆಯ ನಡುವೆಯೂ ರೈತರಿಗೆ ಸೂಕ್ತ ದರ ದೊರಕಿಸಿಕೊಡುವುದು ಒಕ್ಕೂಟಗಳ ಮುಂದಿರುವ ಪ್ರಮುಖ ಸವಾಲಾಗಿದೆ. ಸರ್ಕಾರಕ್ಕೆ ಸಲ್ಲಿಸಿರುವ ದರ ಏರಿಕೆ ಪ್ರಸ್ತಾವನೆ ಕುರಿತು ಮುಂದಿನ ದಿನಗಳಲ್ಲಿ ಕೈಗೊಳ್ಳುವ ನಿರ್ಧಾರ ನಂದಿನಿ ಹಾಲಿನ ಗ್ರಾಹಕರು ಹಾಗೂ ಹೈನುಗಾರರ ಮೇಲೆ ನೇರ ಪರಿಣಾಮ ಬೀರಲಿದೆ.



