ಹೊಸದಿಗಂತ ವರದಿ ಉಳ್ಳಾಲ:
ಮಂಗಳೂರಿನಿಂದ ರೈಲಿನಲ್ಲಿ ಪವಿತ್ರ ಚಾರ್ ಧಾಮ್ ಯಾತ್ರೆಗೆ ತೆರಳಿದ್ದ ಕುಂಪಲದ ನಿವಾಸಿಯೊಬ್ಬರು ಉತ್ತರಾಖಂಡದ ಯಮುನೋತ್ರಿಯಲ್ಲಿ ಮಂಗಳವಾರ ಹೃದಯಾಘಾತಕ್ಕೆ ಬಲಿಯಾಗಿದ್ದಾರೆ.
ಉಳ್ಳಾಲ ತಾಲೂಕಿನ ಕುಂಪಲದ ವಿದ್ಯಾನಗರ ನಿವಾಸಿ ರಾಜೇಶ್ ಗಾಣಿಗ (53) ಹೃದಯಾಘಾತಕ್ಕೆ ಬಲಿಯಾದ ವ್ಯಕ್ತಿ.
ರಾಜೇಶ್ ಅವರು ಕಳೆದ ಸೆ.18 ರ ಶುಕ್ರವಾರದಂದು ಉಳ್ಳಾಲದ ಹದಿನಾಲ್ಕು ಮಂದಿ ಸಹ ಯಾತ್ರಿಕರೊಂದಿಗೆ ಮಂಗಳೂರಿನಿಂದ ರೈಲಿನ ಮೂಲಕ ಚಾರ್ ಧಾಮ್ ಯಾತ್ರೆ ಹೊರಟಿದ್ದರು. ಉತ್ತರ ಭಾರತದ ಪವಿತ್ರ ಕ್ಷೇತ್ರಗಳಾದ ಯಮುನೋತ್ರಿ, ಗಂಗೋತ್ರಿ, ಕೇದಾರನಾಥ್, ಬದರಿನಾಥ್ ಗೆ ಭೇಟಿ ಕೊಟ್ಟು ಅ. 5ರಂದು ಊರಿಗೆ ಮರಳುವ ಯೋಜನೆಯನ್ನು ರೂಪಿಸಿದ್ದರು. ಸೋಮವಾರದಂದು ತಂಡವು ಉತ್ತರಾಖಂಡಕ್ಕೆ ತಲುಪಿ ಪ್ರವಾಸಿ ಕೇಂದ್ರದ ಕೊಠಡಿಯೊಂದರಲ್ಲಿ ತಂಗಿ ವಿಶ್ರಾಂತಿ ಪಡೆದಿತ್ತು.
ಮಂಗಳವಾರ ಬೆಳಿಗ್ಗೆ ಉತ್ತರಾಖಂಡದ ಗಿರಿ ಶಿಖರಗಳಲ್ಲಿ ಏಳು ಕಿಲೋ ಮೀಟರ್ ಪಾದಯಾತ್ರೆಯಲ್ಲಿ ಕ್ರಮಿಸಿದ ತಂಡವು ಯಮುನೋತ್ರಿಗೆ ತಲುಪಿತ್ತು. ಈ ವೇಳೆ ದೇವಿಯ ದರುಶನ ಪಡೆದಿದ್ದ ರಾಜೇಶ್ ಅವರು ಕ್ಷೇತ್ರದ ಆವರಣದ ಕುರ್ಚಿಯೊಂದರಲ್ಲಿ ಕುಳಿತ್ತಿದ್ದಾಗ ಹಠತ್ತನೆ ಕುಸಿದು ಬಿದ್ದಿದ್ದಾರೆ. ರಾಜೇಶ್ ಅವರನ್ನ ಕೂಡಲೇ ಜೊತೆಗಿದ್ದವರು ಸಮೀಪದ ಆಸ್ಪತ್ರೆಯೊಂದಕ್ಕೆ ದಾಖಲಿಸಿದರೂ ದಾರಿ ಮಧ್ಯದಲ್ಲೇ ಅವರು ಮೃತಪಟ್ಟಿದ್ದಾರೆನ್ನಲಾಗಿದೆ.
ರಾಜೇಶ್ ಮೃತದೇಹವನ್ನು ಉತ್ತರಾಖಂಡದ ಡೆಹ್ರಡೂನಿನ ಆಸ್ಪತ್ರೆಯ ಶವಾಗಾರದಲ್ಲಿ ಇರಿಸಲಾಗಿದೆ.
ಮರಣೋತ್ತರ ಪರೀಕ್ಷೆಯ ಬಳಿಕ ಮೃತದೇಹವನ್ನ ಇಂದು ಏರ್ ಲಿಫ್ಟ್ ಮೂಲಕ ಮಂಗಳೂರಿಗೆ ತರಲು ದಕ್ಷಿಣ ಕನ್ನಡ ಬಿಜೆಪಿ ಜಿಲ್ಲಾಧ್ಯಕ್ಷರಾದ ಸತೀಶ್ ಕುಂಪಲ ಅವರು ವ್ಯವಸ್ಥೆ ರೂಪಿಸಿದ್ದಾರೆ. ಇದಕ್ಕಾಗಿ ಸತೀಶ್ ಕುಂಪಲ ಅವರು ಉತ್ತರಾಖಂಡದ ಬಿಜೆಪಿ ಶಾಸಕರೊಂದಿಗೆ ನಿರಂತರ ಸಂಪರ್ಕ ಇಟ್ಟು ಮಾತುಕತೆ ನಡೆಸಿದ್ದಾರೆ.
ರಾಜೇಶ್ ಅವರ ಅಕಾಲಿಕ ಸಾವಿನಿಂದ ದು:ಖ ತಪ್ತರಾದ ಮಂಗಳೂರಿನ ಹದಿನಾಲ್ಕು ಸಹ ಯಾತ್ರಿಗಳು ಕೂಡಾ ತಮ್ಮ ಚಾರ್ ಧಾಮ್ ಯಾತ್ರೆಯನ್ನ ಅರ್ಧಕ್ಕೆ ಮೊಟಕುಗೊಳಿಸಿ ರೈಲಿನ ಮೂಲಕ ಮಂಗಳೂರಿಗೆ ಮರಳಲಿದ್ದಾರೆ.
ಮೃತ ರಾಜೇಶ್ ಅವರು ವೆಲ್ಡರ್ ಆಗಿದ್ದು, ಜಪ್ಪಿನ ಮೊಗರುವಿನಲ್ಲಿ ಸ್ವಂತ ವರ್ಕ್ ಶಾಪ್ ಹೊಂದಿದ್ದರು. ಅವರು ಪತ್ನಿ , ಹೆಣ್ಣು, ಮತ್ತು ಗಂಡು ಮಕ್ಕಳನ್ನ ಅಗಲಿದ್ದಾರೆ.



