September 24, 2026
Thursday, September 24, 2026
spot_img

ಬೈಕ್‌ನಲ್ಲಿ ಶ್ರೀಗಂಧ ಸಾಗಿಸುತ್ತಿದ್ದ ಕಳ್ಳರ ಮೇಲೆ ಅರಣ್ಯ ಇಲಾಖೆ ದಾಳಿ: ನಾಲ್ವರು ಅರೆಸ್ಟ್

ಹೊಸದಿಗಂತ ವರದಿ ಯಲ್ಲಾಪುರ:

ಪಟ್ಟಣದ ಬಿಸಗೋಡ ರಸ್ತೆಯ ಸ್ಮಶಾನದ ಬಳಿ ದ್ವಿಚಕ್ರ ವಾಹನದಲ್ಲಿ ಅಕ್ರಮವಾಗಿ ಶ್ರೀಗಂಧದ ತುಂಡುಗಳನ್ನು ಸಾಗಿಸುತ್ತಿದ್ದ ವೇಳೆ ಅರಣ್ಯ ಇಲಾಖೆ ಕಾರ್ಯಾಚರಣೆ ನಡೆಸಿ ನಾಲ್ವರು ಆರೋಪಿಗಳನ್ನು ವಶಕ್ಕೆ ಪಡೆದ ಘಟನೆ ಬುಧವಾರ ನಡೆದಿದೆ.

 ಬಂಧಿತರನ್ನು ತಾಲೂಕಿನ ಮಾಗೋಡ ಗ್ರಾಮದ ನಾಗೇಂದ್ರ ಮಂಜುನಾಥ ಸಿದ್ದಿ, ಕಾಳಮ್ಮನಗರದ ಮಂಜುನಾಥ ಪ್ರಭಾಕರ ಸಿದ್ದಿ ಹಾಗೂ ಲಕ್ಷ್ಮಣ ಪ್ರಭಾಕರ ಸಿದ್ದಿ, ಅಂಕೋಲಾ ತಾಲೂಕಿನ ಕಮ್ಮಾಣಿಯ ರವಿ ಕೃಷ್ಣ ಸಿದ್ದಿ ಎಂದು ಗುರುತಿಸಲಾಗಿದೆ. ಪ್ರಕರಣದ ಐದನೇ ಆರೋಪಿ, ವಜ್ರಳ್ಳಿಯ ಸತೀಶ ಸಿದ್ದಿ ತಲೆಮರೆಸಿಕೊಂಡಿದ್ದಾನೆ.

 ಆರೋಪಿಗಳು ಯಲ್ಲಾಪುರ ತಾಲೂಕಿನ ವಿವಿಧೆಡೆ ಬೆಳೆಬಾಳುವ ಶ್ರೀಗಂಧದ ಮರಗಳನ್ನು ಕಟಾವು ಮಾಡಿ, ತುಂಡುಗಳಾಗಿ ತಯಾರಿಸಿ ಹಣಕ್ಕಾಗಿ ಮಾರಾಟ ಮಾಡುತ್ತಿದ್ದರು ಎನ್ನಲಾಗಿದೆ. ಆರೋಪಿಗಳಿಂದ ಸಿಪ್ಪೆ ಕೆತ್ತಿದ 12 ಶ್ರೀಗಂಧದ ತುಂಡುಗಳು (3.80 ಕೆ.ಜಿ.), ಸಿಪ್ಪೆ ಸಹಿತ 17 ತುಂಡುಗಳು (55 ಕೆ.ಜಿ.) ಹಾಗೂ ಕೃತ್ಯಕ್ಕೆ ಬಳಸಿದ್ದ ದ್ವಿಚಕ್ರ ವಾಹನವನ್ನು ವಶಪಡಿಸಿಕೊಳ್ಳಲಾಗಿದೆ.

ಇದನ್ನೂ ಓದಿ:

 ಆರೋಪಿಗಳ ವಿರುದ್ಧ ಕರ್ನಾಟಕ ಅರಣ್ಯ ಕಾಯ್ದೆ-1963ರ ಸೆಕ್ಷನ್ 84, 86, 87 ಹಾಗೂ 71(ಎ) ಮತ್ತು ಕರ್ನಾಟಕ ಅರಣ್ಯ ನಿಯಮ-1969ರ ನಿಯಮ 144 ಹಾಗೂ 155ರ ಅಡಿಯಲ್ಲಿ ಪ್ರಕರಣ ದಾಖಲಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.

 ಉಪ ಅರಣ್ಯ ಸಂರಕ್ಷಣಾಧಿಕಾರಿ ಅಬ್ದುಲ್ ಅಜೀಜ್ ಎ. ಶೇಖ್ ಅವರ ಮಾರ್ಗದರ್ಶನದಲ್ಲಿ ವಲಯ ಅರಣ್ಯಾಧಿಕಾರಿ ಮಂಜುನಾಥ ಹೆಚ್. ನಾಯ್ಕ ನೇತೃತ್ವದಲ್ಲಿ ಉಪ ವಲಯ ಅರಣ್ಯಾಧಿಕಾರಿಗಳು, ಅರಣ್ಯ ಪಾಲಕರು ಹಾಗೂ ಸಿಬ್ಬಂದಿ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.

Must Read